ಸುಮಾರು ಎರಡು ತಿಂಗಳ ಹಿಂದೆ (ಜುಲೈ 4) ಉದ್ಘಾಟನೆಯಾಗಿದ್ದ ಸೇತುವೆಯೊಂದು ಈಗ ಭಾರೀ ಟ್ರೋಲ್ ಆಗುತ್ತಿದೆ. ಆ ಸೇತುವೆಯ ಸ್ಥಿತಿ ತೀರಾ ಕೆಟ್ಟದಾಗಿದ್ದು, ಸರ್ಕಾರದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪಲವಾ ನಗರದ ಬಳಿ ದೇಸಾಯ್ ಕ್ರೀಕ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ‘ಪಲವಾ ಸೇತುವೆ’ ಕಲ್ಯಾಣ್-ಶೀಲ್ ರಸ್ತೆಯ ಭಾಗವಾಗಿದೆ. ಈ ಸೇತುವೆಯಲ್ಲಿ 562 ಮೀಟರ್ ಉದ್ದದ ಈ ಸೇತುವೆಯನ್ನು 72 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಈ ಸೇತುವೆಯು ಮುಂಬೈ-ನವಿ ಮುಂಬೈನಿಂದ ಡೊಂಬಿವಲಿ, ಅಂಬರ್ನಾಥ್, ಬದ್ಲಾಪುರಕ್ಕೆ ಸಂಪರ್ಕ ಒದಗಿಸುತ್ತದೆ.
ಜುಲೈ 4ರಂದು ಸೇತುವೆಯನ್ನು ಉದ್ಘಾಟಿಸಲಾಗಿತ್ತು. ಉದ್ಘಾಟನೆಗೊಂಡ ಒಂದೇ ವಾರದಲ್ಲಿ ರಸ್ತೆಯ ಡಾಂಬರು ಕಿತ್ತು ಬಂದು, ಜೆಲ್ಲಿಕಟ್ಟುಗಳು ಹೊರಬರಲಾರಂಭಿಸಿದ್ದವು. ರಸ್ತೆಯ ಜುಲೈ ತಿಂಗಳಿನಲ್ಲೇ ಭಾರೀ ಚರ್ಚೆಗೆ ಗುರಿಯಾಗಿತ್ತು. ಸೇತುವೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಕೆಲವು ದುರಸ್ತಿ ಕೆಲಸಗಳನ್ನು ಮಾಡುವ ಮೂಲಕ ಸೇತುವೆಯನ್ನು ಮತ್ತೆ ಸಂಚಾರಕ್ಕೆ ತೆರೆಯಲಾಗಿತ್ತು. ಆದರೆ, ಈಗ ಎರಡೇ ತಿಂಗಳಲ್ಲಿ ಮತ್ತೆ ಸೇತುವೆ ಸ್ಥಿತಿ ಚಿಂತಾಜನಕವಾಗಿದೆ. ಸೇತುವೆಯ ಉದ್ದಕ್ಕೂ ಡಾಂಬರಿಗಿಂತ ಹೆಚ್ಚಾಗಿ ಗುಂಡಿಗಳೇ ಕಾಣುತ್ತಿವೆ. ರಸ್ತೆ ಬಹುತೇಕ ಕಣ್ಮರೆಯಾಗಿದೆ.
Condition of ₹250 Crore Palava Flyover, within 2 months after opening. Imagine the level of Corruption 😭 pic.twitter.com/7C232STxlq
— 🚨Indian Gems (@IndianGems_) September 10, 2025
ಇದರಿಂದಾಗಿ, ಅನೇಕ ಚಾಲಕರು ಸೇತುವೆಯ ಬದಲಿಗೆ ಕೆಳಗೆ ಸಿಗ್ನಲ್ ಇರುವ ರಸ್ತೆಯನ್ನು ಬಳಸುತ್ತಿದ್ದಾರೆ. ವಿಶೇಷವೆಂದರೆ ಈ ಸೇತುವೆಯ ಮೇಲೆ ಅನೇಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸಲಾಗಿದೆ. ಗುಂಡಿಗಳಿರುವಾಗ ಸ್ಪೀಡ್ ಬ್ರೇಕರ್‌ಗಳ ಅಗತ್ಯವೇನು ಎಂದು ಪ್ರಯಾಣಿಕರು ವ್ಯಂಗ್ಯವಾಡಿದ್ದಾರೆ. ಸೇತುವೆ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.