ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ನಿವಾಸವಾದ ಲೋಕ ಕಲ್ಯಾಣ ಮಾರ್ಗದಲ್ಲಿ ಕದಂಬದ ಸಸಿಯೊಂದನ್ನು ನೆಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದು ವ್ಯಾಪಕ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ. ಈ ಸಸಿಯನ್ನು ಇಂಗ್ಲೆಂಡ್‌ನ ಕಿಂಗ್ ಚಾರ್ಲ್ಸ್-III ಉಡುಗೊರೆಯಾಗಿ ನೀಡಿದ್ದರು ಎಂದು ತಿಳಿದುಬಂದಿದೆ.
‘ಏಕ್ ಪೇಡ್ ಮಾಕೇ ನಾಮ್’ (ತಾಯಿಗೆ ಸಮರ್ಪಿತ ಒಂದು ಗಿಡ) ಎಂಬ ಅಭಿಯಾನದ ಭಾಗವಾಗಿ ಈ ಸಸಿಯನ್ನು ನೆಡಲಾಗಿದೆ. 2021ರಲ್ಲಿ ಆರಂಭವಾದ ಈ ಅಭಿಯಾನವು ಈಗಾಗಲೇ 10 ಕೋಟಿಗೂ ಅಧಿಕ ಸಸಿಗಳನ್ನು ನೆಡಲು ಸ್ಫೂರ್ತಿ ನೀಡಿದೆ ಎಂದು ವರದಿಗಳು ತಿಳಿಸಿವೆ. ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಕಿಂಗ್ ಚಾರ್ಲ್ಸ್ ಅವರ ಪರಿಸರ ಸಂರಕ್ಷಣೆಯ ಕಾಳಜಿಯನ್ನು ಶ್ಲಾಘಿಸಿದ್ದಾರೆ.
ಆದರೆ, ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ, ಛತ್ತೀಸ್‌ಗಢದ ಹಸ್ದೇವೋ ಅರಣ್ಯದಲ್ಲಿ 1,898 ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಅನುಮತಿ ನೀಡಿರುವುದು ಹಾಗೂ ಭಗಲ್ಪುರದಲ್ಲಿ ಲಕ್ಷಾಂತರ ಮರಗಳನ್ನು ಕಡಿಯುವ ಯೋಜನೆಯನ್ನು ಉಲ್ಲೇಖಿಸಿ, ಒಂದು ಗಿಡ ನೆಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!
ಸಾಮಾಜಿಕ ಜಾಲತಾಣಗಳಲ್ಲಿ “ಏಕ್ ಪೇಡ್ ಮಾಕೇ ನಾಮ್, ದಶ್ ಲಾಕ್ ಪೇಡ್ ಅದಾನಿ ಕೆ ನಾಮ್” ಎಂಬಂತಹ ಹಾಸ್ಯಾತ್ಮಕ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಟೀಕೆಯ ಪೋಸ್ಟ್‌ಗಳು ವೈರಲ್ ಆಗಿವೆ. ಹಸ್ದೇವೋ ಅರಣ್ಯದ ಹಿಂದಿನ ಮತ್ತು ಇತ್ತೀಚಿನ ಚಿತ್ರಗಳನ್ನು ಹಂಚಿಕೊಂಡು ಅರಣ್ಯ ನಾಶದ ಗಂಭೀರತೆಯನ್ನು ಕೆಲವರು ಎತ್ತಿ ತೋರಿಸಿದ್ದಾರೆ.
ಒಬ್ಬ ಯುವ ಪರಿಸರ ಕಾರ್ಯಕರ್ತೆಯೊಬ್ಬರು “ಅದಾನಿಯನ್ನು ತಡೆಯಿರಿ! ಹಸ್ದೇವೋ ಅರಣ್ಯವನ್ನು ಉಳಿಸಿ” ಎಂಬ ಸಂದೇಶವಿರುವ ಫಲಕ ಹಿಡಿದಿರುವ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. “ಒಂದು ಗಿಡಕ್ಕೆ ನೀರು ಹಾಕಿ, ಕೋಟಿಗಟ್ಟಲೆ ಮರಗಳನ್ನು ಕಡಿಯಲು ಅವಕಾಶ ನೀಡುವುದು ದೇಶಭಕ್ತಿಯೇ?” ಎಂದು ಕೆಲವರು ಪ್ರಶ್ನಿಸಿದ್ದಾರೆ.