ತನ್ನ ಮೇಲೆ ಅತ್ಯಾಚಾರ ದೌರ್ಜನ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲವೆಂದು ಆಕ್ರೋಶಗೊಂಡ ಸಂತ್ರಸ್ತೆ, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮೋದಿನಗರದ ತಾಲೂಕು ಕಚೇರಿ ಆವರಣದಲ್ಲಿ ಮಹಿಳೆಯು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಆಕೆಯಿಂದ ‘ಲೈಟರ್’ಅನ್ನು ಕಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿದ್ದಾರೆ.
ಸಂತ್ರಸ್ತೆ ಪ್ರಕಾರ; ಆರೋಪಿಯು ಮದುವೆಯ ನೆಪದಲ್ಲಿ ಹಲವು ತಿಂಗಳುಗಳ ಕಾಲ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಆದರೆ, ಈಗ ಮದುವೆಯಾಗಲು ನಿರಾಕಿಸಿದ್ದು, ಆಕೆಯಿಂದ ದೂರ ಉಳಿದಿದ್ಧಾನೆ. ತನ್ನ ಮೇಲೆ ನಡೆದ ದೌರ್ಜನ್ಯ ಮತ್ತು ವಂಚನೆ ಬಗ್ಗೆ ಸುಮಾರು 2 ತಿಂಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಪೊಲೀಸರು ಈವರೆಗೆ ಆರೋಪಿಯನ್ನು ಬಂಧಿಸಿಲ್ಲ.
ಆರೋಪಿಯೊಂದಿಗೆ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಆತನನ್ನು ಬಂಧಿಸಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಸಂತ್ರಸ್ತೆ, ಆರೋಪಿಯನ್ನು 48 ಗಂಟೆಗಳ ಒಳಗೆ ಬಂಧಿಸದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಲೇಖನ ಓದಿದ್ದೀರಾ?: “ಕನ್ನಡನಾಡು ನನ್ನ ಪ್ರೀತಿಯ ನಾಡು” ಎಂದು ಇಡೀ ಜಗತ್ತಿಗೆ ಸಾರುತ್ತಾ ಬಂದ ಬಾನು ದಸರಾ ಉದ್ಘಾಟಿಸಿದರೆ ತಪ್ಪೇ!
ಇದೀಗ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ, ಆರೋಪಿ ವಿರುದ್ಧ ಕೇವಲ ‘ಶಾಂತಿ ಭಂಗ’ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ವಿರುದ್ಧ ‘ಶಾಂತಿ ಭಂಗ’ ಆರೋಪವಲ್ಲ, ಅತ್ಯಾಚಾರದ ಪ್ರಕರಣ ದಾಖಲಿಸಬೇಕು ಎಂದು ಮಹಿಳೆ ಒತ್ತಾಯಿಸಿದ್ದಾರೆ.
ಪ್ರಕರಣದ ಬಗ್ಗೆ ವಿವರಿಸಿರುವ ಡಿಸಿಪಿ (ಗ್ರಾಮೀಣ) ಸುರೇಂದ್ರ ನಾಥ್ ತಿವಾರಿ, “ನೀರಜ್ ಗೋಯೆಲ್ ಎಂಬ ಆರೋಪಿ ಮೋದಿನಗರದ ತಿಂಡಿ ಕಾರ್ಖಾನೆಯ ಮಾಲೀಕನಾಗಿದ್ದಾನೆ. ಆತ ಅಲಹಾಬಾದ್ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಹೀಗಾಗಿ, ಆತನ ವಿರುದ್ಧ ಶಾಂತಿ ಭಂಗದ ಆರೋಪದಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.