CJP ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಸೋಮವಾರ (ಅಕ್ಟೋಬರ್ 19) ದೆಹಲಿಯ ಮಂದಿರ್ ಮಾರ್ಗ ಪೊಲೀಸ್ ಠಾಣೆಯಲ್ಲಿರುವ ನೂತನವಾಗಿ ನೇಮಕಗೊಂಡ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಇಬ್ಬರ ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಸಿಜೆಪಿಯ ಇಬ್ಬರು ಸಂಚಾಲಕರನ್ನು ಅಕ್ಟೋಬರ್ 13ರಂದು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದೀಗ ಅವರ ಜಾಮೀನು ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿ, ಬಿಡುಗಡೆ ತಡೆಯಲಾಗುತ್ತಿದೆ ಎಂದು ಸಿಜೆಪಿ ಆರೋಪಿಸಿದೆ.
ಜಂತರ್ ಮಂತರ್‌ಗೆ ಪ್ರವೇಶಿಸಲು ಇಬ್ಬರೂ ನಾಯಕರು ಬೀಗ ಹಾಕಲಾಗಿದ್ದ ಗೇಟ್ ಹತ್ತಿ ಒಳಗೆ ಪ್ರವೇಶಿಸಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಈ ಸ್ಥಳವನ್ನು ಈ ಹಿಂದೆ ಅಧಿಕೃತ ಪ್ರತಿಭಟನಾ ಸ್ಥಳದ ಪಟ್ಟಿಯಿಂದ ತೆಗೆದುಹಾಕಲಾಗಿತ್ತು.
ಬಳಿಕ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಸೇರಿದಂತೆ ಸಿಜೆಪಿಯ ಇತರ ಕಾರ್ಯಕರ್ತರು ಅಲ್ಲಿ ರಾಷ್ಟ್ರಧ್ವಜ ಪ್ರದರ್ಶಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದು ಮುನ್ನೆಚ್ಚರಿಕಾ ಬಂಧನಕ್ಕೆ ಒಳಪಡಿಸಿದ್ದರು.
ಬಂಧನದ ಬಳಿಕ ಇಬ್ಬರನ್ನೂ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಅಕ್ಟೋಬರ್ 13ರಂದು ಮ್ಯಾಜಿಸ್ಟ್ರೇಟ್ ಅವರಿಗೆ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು. ಇದೀಗ ಇಬ್ಬರು ನಾಯಕರ ನ್ಯಾಯಾಂಗ ಬಂಧನವನ್ನು ಮತ್ತಷ್ಟು ವಿಸ್ತರಿಸುವಂತೆ ಪೊಲೀಸರು ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಾಮೀನು ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ಸಿಜೆಪಿಯ ಆರೋಪದ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ: ಗ್ಯಾನೇಶ್ ಕುಮಾರ್ ರಕ್ಷಣೆಗೆ ನಿಂತಿರುವ ಮೋದಿ, ಅಮಿತ್ ಶಾ ಸ್ವಂತ ದೇಶದ ಜನರ ವಿರುದ್ಧವೇ ಯುದ್ಧ ಸಾರಿದ್ದಾರೆ: ಅಭಿಜೀತ್ ದೀಪ್ಕೆ
ಭಾರತೀಯ ಸಂವಿಧಾನದ ವಿಧಿ 19ರ ಅಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ನಾಗರಿಕರ ಮೂಲಭೂತ ಹಕ್ಕು. ಆದರೆ, ಜಂತರ್ ಮಂತರ್‌ನಂತಹ ಸಾಂಪ್ರದಾಯಿಕ ಪ್ರತಿಭಟನಾ ಸ್ಥಳಗಳನ್ನು ನಿರ್ಬಂಧಿಸಿರುವುದು ಮತ್ತು ರಾಷ್ಟ್ರಧ್ವಜ ಪ್ರದರ್ಶಿಸಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿದವರನ್ನು ಮುನ್ನೆಚ್ಚರಿಕಾ ಬಂಧನದ ಹೆಸರಿನಲ್ಲಿ ಸುದೀರ್ಘ ಕಾಲ ಜೈಲಿನಲ್ಲಿಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತದೆ ಎಂಬ ಕಳವಳಗಳು ವ್ಯಕ್ತವಾಗಿವೆ.
ಸಿಜೆಪಿ ನಾಯಕರು ಜಾಮೀನು ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವುದು ಪೊಲೀಸ್ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುನ್ನೆಚ್ಚರಿಕಾ ಬಂಧನ ಪ್ರಕರಣಗಳಲ್ಲಿ ತ್ವರಿತವಾಗಿ ಜಾಮೀನು ದೊರೆಯಬೇಕಿದ್ದರೂ, ನ್ಯಾಯಾಂಗ ಬಂಧನವನ್ನು ವಿಸ್ತರಿಸಲು ಕೋರುವುದು ನಾಗರಿಕರ ಸ್ವಾತಂತ್ರ್ಯದ ಹಕ್ಕಿನ ಮೇಲಿನ ಪರೋಕ್ಷ ಹಸ್ತಕ್ಷೇಪ ಎಂಬ ಟೀಕೆಗಳೂ ಕೇಳಿಬರುತ್ತಿವೆ.






