ಪ್ರತಿಭಟನೆಗಳು ಮತ್ತು ಧರಣಿ ಸತ್ಯಾಗ್ರಹಗಳ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆಯನ್ನು ಕಾಯ್ದುಕೊಳ್ಳಲು, ಜವಾಬ್ದಾರಿಯುತ ವರದಿಗಾರಿಕೆಯನ್ನು ಉತ್ತೇಜಿಸಲು ಹಾಗೂ ಮಾಧ್ಯಮ ಸಿಬ್ಬಂದಿ, ಕಾನೂನು ಜಾರಿ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯ ಮೂಡಿಸಲು ಭಾರತೀಯ ಪ್ರೆಸ್ ಕೌನ್ಸಿಲ್ (PCI) ನೂತನ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ.
2026ರ ಅಕ್ಟೋಬರ್ 14ರಂದು ನಡೆದ ಸಭೆಯಲ್ಲಿ ಈ ಸಮ್ಮತಿಯನ್ನು ಪಡೆದುಕೊಂಡಿದ್ದು, ಅಕ್ಟೋಬರ್ 15ರಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಇತ್ತೀಚೆಗೆ ಸಿಜೆಪಿ ಸೇರಿದಂತೆ ವಿವಿಧ ಪ್ರತಿಭಟನೆಗಳ ವೇಳೆ ಪತ್ರಕರ್ತರ ಮೇಲೆಯೂ ಪೊಲೀಸರು ದಾಳಿ ಮಾಡಿದ್ದಾರೆ, ಬಂಧಿಸಿದ್ದಾರೆ. ಈ ನಡುವೆ ಭಾರತೀಯ ಪ್ರೆಸ್ ಕೌನ್ಸಿಲ್ ಈ ಮಾರ್ಗದರ್ಶಿಯನ್ನು ಹೊರಡಿಸಿದೆ.
ಇದನ್ನೂ ಓದಿ: ಪ್ರತಿಭಟನಾಕಾರರಿಗೆ ಗುಂಡಿಕ್ಕಲು ಇರಾನ್ ಸರ್ವೋಚ್ಚ ನಾಯಕ ಖಮೇನಿ ಆದೇಶ: ಸಾವಿನ ಸಂಖ್ಯೆ ಏರಿಕೆ
ಪ್ರೆಸ್ ಕೌನ್ಸಿಲ್ನ ನೂತನ ಮಾರ್ಗದರ್ಶಿ ಸೂತ್ರಗಳು
ಗುರುತಿಸುವಿಕೆ ಮತ್ತು ವೃತ್ತಿಪರ ನಡವಳಿಕೆ:
ಪತ್ರಕರ್ತರು ತಮ್ಮ ಸಂಸ್ಥೆ ನೀಡಿದ ಮಾನ್ಯತೆ ಪಡೆದ ಗುರುತಿನ ಚೀಟಿಯನ್ನು (ID card) ಅಥವಾ PIB/DIP ಗುರುತಿನ ಚೀಟಿಯನ್ನು ಸ್ಪಷ್ಟವಾಗಿ ಕಾಣಿಸುವಂತೆ ಧರಿಸಿರಬೇಕು.
ಪೋಲೀಸರು ವಿಚಾರಿಸಿದಾಗ ಶಾಂತಿಯುತವಾಗಿ ತಮ್ಮ ಪತ್ರಕರ್ತ ಗುರುತನ್ನು ತಿಳಿಸಬೇಕು.
ವರದಿಗಾರಿಕೆಯಲ್ಲಿ ತಟಸ್ಥತೆ ಮತ್ತು ವೃತ್ತಿಪರತೆಯನ್ನು ಕಾಯ್ದುಕೊಳ್ಳಬೇಕು.
ಪ್ರತಿಭಟನೆಗಳಲ್ಲಿ ಭಾಗವಹಿಸುವುದು, ಪ್ರಚೋದನೆ ನೀಡುವುದು ಅಥವಾ ಪೋಲೀಸ್ ಕಾರ್ಯಾಚರಣೆಗೆ ಅಡ್ಡಿಪಡಿಸುವುದನ್ನು ಮಾಡಬಾರದು.
ಸ್ಥಳಾವಕಾಶ ಮತ್ತು ಜನಸಂದಣಿಯಲ್ಲಿ ಸುರಕ್ಷತೆ:
ಸಂಘರ್ಷ ನಡೆಯುವ ಸ್ಥಳಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು.
ಕ್ಯಾಮೆರಾ ಅಥವಾ ರೆಕಾರ್ಡಿಂಗ್ ಉಪಕರಣಗಳನ್ನು ಪೋಲೀಸ್ ಬ್ಯಾರಿಕೇಡ್ಗಳಿಗೆ ಅಥವಾ ವಾಹನಗಳಿಗೆ ಅಳವಡಿಸಿ ಸಂಚಾರಕ್ಕೆ ಅಡ್ಡಿಪಡಿಸಬಾರದು.
ಕಾಲ್ತುಳಿತ ತಪ್ಪಿಸಲು ಸಣ್ಣ ಹೆಜ್ಜೆಗಳನ್ನಿಡುತ್ತಾ ಎಚ್ಚರಿಕೆಯಿಂದ ಚಲಿಸಬೇಕು.
ಪರಿಸ್ಥಿತಿಯ ಜಾಗೃತಿ ಮತ್ತು ನಿರ್ಗಮನ ಯೋಜನೆ:
ಜನಸಂದಣಿಯ ನಡವಳಿಕೆ, ಗಲಾಟೆ ಹಾಗೂ ಆಸುಪಾಸಿನ ಅಪಾಯಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕು.
ಆಕಸ್ಮಿಕವಾಗಿ ಸ್ಥಳದಿಂದ ಹೊರಹೋಗಲು ತುರ್ತು ನಿರ್ಗಮನ ಮಾರ್ಗಗಳನ್ನು (Escape routes) ಸದಾ ಸಿದ್ಧವಾಗಿಟ್ಟುಕೊಳ್ಳಬೇಕು.
ವ್ಯಕ್ತಿಗತ ಸುರಕ್ಷತಾ ಕ್ರಮಗಳು ಮತ್ತು ಪ್ರಥಮ ಚಿಕಿತ್ಸೆ:
ಪತ್ರಕರ್ತರು ತಮ್ಮ ಬಳಿ ಪ್ರಥಮ ಚಿಕಿತ್ಸಾ ಕಿಟ್, ನಿತ್ಯದ ಔಷಧಗಳು, ಕುಡಿಯುವ ನೀರು, ಪ್ರೋಟೀನ್ ಆಹಾರ, ಟಾರ್ಚ್, ಮುಖ ಒರೆಸುವ ಬಟ್ಟೆ ಮತ್ತು ಕಣ್ಣಿನ ರಕ್ಷಣಾ ಗ್ಲಾಸ್ಗಳನ್ನು ಒಳಗೊಂಡ ‘ಎಮರ್ಜೆನ್ಸಿ ಕಿಟ್’ ಇಟ್ಟುಕೊಳ್ಳಬೇಕು.
ಕಣ್ಣೀರು ಅನಿಲ (Tear-gas) ಅಥವಾ ಹೊಗೆಬಾಂಬ್ಗಳನ್ನು ಕೈಯಿಂದ ಮುಟ್ಟುವುದು ಅಥವಾ ಎಸೆಯಲು ಯತ್ನಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಮನ್ವಯ ಮತ್ತು ಸಂಪರ್ಕ:
ವರದಿಗಾರರು ತಮ್ಮ ಸುದ್ದಿ ಸಂಸ್ಥೆಗಳ (Newsrooms) ಜೊತೆ ನಿರಂತರ ಸಂಪರ್ಕದಲ್ಲಿರಬೇಕು.
ಫ್ರೀಲ್ಯಾನ್ಸ್ ಪತ್ರಕರ್ತರು ತಮ್ಮ ಕಾರ್ಯಯೋಜನೆ ಮತ್ತು ಕೆಲಸ ಮಾಡುವ ಸ್ಥಳದ ಮಾಹಿತಿಯನ್ನು ಸಂಪಾದಕರಿಗೆ ಅಥವಾ ಆಪ್ತರಿಗೆ ತಿಳಿಸಿರಬೇಕು.
ಸಹೋದ್ಯೋಗಿ ಪತ್ರಕರ್ತರ ಸುರಕ್ಷತೆಯ ಬಗ್ಗೆಯೂ ಗಮನಹರಿಸಬೇಕು.
ನೈತಿಕ ಮತ್ತು ಜವಾಬ್ದಾರಿಯುತ ವರದಿಗಾರಿಕೆ:
ಘಟನೆಗಳನ್ನು ನಿಖರವಾಗಿ, ವಸ್ತುನಿಷ್ಠವಾಗಿ ಮತ್ತು ನಿಷ್ಪಕ್ಷಪಾತವಾಗಿ ವರದಿ ಮಾಡಬೇಕು.
ಸಂತ್ರಸ್ತರು, ಅಪ್ರಾಪ್ತ ವಯಸ್ಕರು ಹಾಗೂ ಗಾಯಗೊಂಡವರ ಫೋಟೋ ಅಥವಾ ವೀಡಿಯೊ ಪ್ರಸಾರ ಮಾಡುವಾಗ ಅವರ ಖಾಸಗಿತನ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಪೋಲೀಸರ ರಹಸ್ಯ ಕಾರ್ಯಾಚರಣೆ, ಸಾಗುವ ಮಾರ್ಗಗಳು ಅಥವಾ ತಂತ್ರಗಳನ್ನು ರಿಯಲ್-ಟೈಮ್ನಲ್ಲಿ ಪ್ರಸಾರ ಮಾಡಬಾರದು.




