ನಕಲಿ ಬಿಲ್‌ಗೆ ಸಹಿ ಹಾಕಿ, ಆ ಬಿಲ್‌ಅನ್ನು ಪಾಸ್ ಮಾಡಬೇಕೆಂದು ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿರುವ ಸರ್ಕಾರಿ ಸಹಾಯಕ ಎಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಅಸ್ಸಾಂನ ಬೊಂಗೈಗಾಂವ್‌ನಲ್ಲಿ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯೂಡಿ) ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಜ್ಯೋತಿಷಾ ದಾಸ್ (30) ಅವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಸಾವಿಗೂ ಮುನ್ನ ‘ಡೆತ್‌ನೋಟ್’ ಬರೆದಿಟ್ಟಿದ್ದು, ಅದರಲ್ಲಿ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಡೆತ್‌ನೋಟ್‌ನಲ್ಲಿ; “ಕಾಮಗಾರಿ ಅಪೂರ್ಣಗೊಂಡಿದ್ದರೂ, ಪೂರ್ಣಗೊಂಡಿದೆ ಎಂಬುದಾಗಿ ನಕಲಿ ಬಿಲ್‌ಗಳನ್ನು ಸಿದ್ದಪಡಿಲಾಗಿದ್ದು, ಆ ನಕಲಿ ಬಿಲ್‌ಗಳನ್ನು ಪಾಸ್ ಮಾಡಬೇಕೆಂದು ಇಬ್ಬರು ಹಿರಿಯ ಅಧಿಕಾರಿಗಳು ತೀವ್ರ ಒತ್ತಡ ಹೇರಿದ್ದಾರೆ. ಅವರ ಒತ್ತಡದಿಂದಾಗಿ ನನಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಒತ್ತಡ ಕಾರಣದಿಂದಾಗಿ ನಾನು ಈ ನಿರ್ಧಾರ ಮಾಡಿದ್ದೇನೆ” ಎಂದು ಜ್ಯೋತಿಷಾ ಬರೆದಿರುವುದಾಗಿ ತಿಳಿದುಬಂದಿದೆ.
ತಮಗೆ ಒತ್ತಡ ಹೇರಿದ ಇಬ್ಬರು ಅಧಿಕಾರಗಳ ಹೆಸರನ್ನೂ ಆಕೆ ಉಲ್ಲೇಖಿಸಿದ್ದಾರೆ. ಜ್ಯೋತಿಷಾ ಅವರ ಕುಟುಂಬವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಆರಂಭಿಸಿದ್ದಾರೆ.
ಯುವತಿ ಬರೆದಿಟ್ಟಿದ್ದ ಡೆತ್‌ನೋಟ್ ಆಧಾರದ ಮೇಲೆ ಬೊಂಗೈಗಾಂವ್ ಕಾರ್ಯನಿರ್ವಾಹಕ ಇಂಜಿನಿಯರ್ ದಿನೇಶ್ ಮೇಧಿ ಶರ್ಮಾ ಮತ್ತು ಉಪ-ವಿಭಾಗೀಯ ಅಧಿಕಾರಿ (ಎಸ್‌ಡಿಒ) ಅಮೀನುಲ್ ಇಸ್ಲಾಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.