- ಹರಿಯಾಣ ರಾಜ್ಯದ ರಾಷ್ಟ್ರೀಯ ಹೆದ್ದಾರಿ 44 ತಡೆದು ರೈತರು ಪ್ರತಿಭಟನೆ
- ಮಹಾಪಂಚಾಯತ್ ಸಭೆಯಲ್ಲಿ ರಾಕೇಶ್ ಟಿಕಾಯತ್, ಬಜರಂಗ್ ಪೂನಿಯಾ ಭಾಗಿ
ಹರಿಯಾಣ ರಾಜ್ಯದ ರೈತರು ಸೂರ್ಯಕಾಂತಿ ಬೆಳೆ ಖರೀದಿಯಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ದೆಹಲಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಸೋಮವಾರ (ಜೂನ್ 12) ಪ್ರತಿಭಟನೆ ನಡೆಸಿದರು.
ಸೂರ್ಯಕಾಂತಿ ಬೆಳೆಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಘೋಷಿಸಿರುವ ಪರಿಹಾರಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಕುರುಕ್ಷೇತ್ರ ಜಿಲ್ಲೆಯ ಪಿಂಪ್ಲಿ ಗ್ರಾಮದಲ್ಲಿ ರೈತರು ಮಹಾಪಂಚಾಯತ್ ಹೆಸರಿನ ಸಭೆ ನಡೆಸಿದ ನಂತರ ಹರಿಯಾಣ ರಾಜ್ಯದಿಂದ ದೆಹಲಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 44 ಅನ್ನು ಬಂದ್ ಮಾಡುವ ಬಗ್ಗೆ ನಿರ್ಧಾರ ಕೈಗೊಂಡರು.
ಮಹಾಪಂಚಾಯತ್ ಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ನಾಯಕ ರಾಕೇಶ್ ಟಿಕಾಯತ್ ಮತ್ತು ದೆಹಲಿಯಲ್ಲಿ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕುಸ್ತಿಪಟು ಬಜರಂಗ್ ಪೂನಿಯಾ ಭಾಗವಹಿಸಿದ್ದರು.
ರೈತರ ಪ್ರತಿಭಟನೆಯಿಂದ ದಟ್ಟಣೆ ಉಂಟಾಗುವ ಹಿನ್ನೆಲೆ ದೆಹಲಿ-ಚಂಡೀಗಢದ ಸಂಚಾರವನ್ನು ಬದಲಿಸಲಾಗಿದೆ.
ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ನೆರೆಯ ರಾಜ್ಯಗಳ ರೈತ ನಾಯಕರು ಪಿಂಪ್ಲಿ ಧಾನ್ಯ ಮಾರುಕಟ್ಟೆಯಲ್ಲಿ ಜಮಾಯಿಸಿ ‘ಎಂಎಸ್‌ಪಿ ನೀಡಿ, ರೈತರ ಉಳಿಸಿ’ ಹೆಸರಿನ ಮಹಾಪಂಚಾಯತ್‌ನಲ್ಲಿ ತಮ್ಮ ಬೇಡಿಕೆಗಾಗಿ ಒತ್ತಾಯಿಸಿದ್ದರು.
ಹರಿಯಾಣ ಸರ್ಕಾರ ಸೂರ್ಯಕಾಂತಿ ಬೆಳೆಯನ್ನು ಪ್ರತಿ ಕ್ವಿಂಟಲ್‌ಗೆ ₹6,400 ನೀಡಿ ಖರೀದಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ಪಿಂಪ್ಲಿಯಲ್ಲಿ ನಡೆದ ಮಹಾಪಂಚಾಯತ್ ಸಭೆಯಲ್ಲಿ ರೈತರು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳು ಮತ್ತು ರೈತರ ವಿರುದ್ಧದ ಪೊಲೀಸ್ ಕ್ರಮಗಳನ್ನು ಖಂಡಿಸಿದರು.
ಸೂರ್ಯಕಾಂತಿ ಬೆಳೆಯನ್ನು ರಾಜ್ಯ ಸರ್ಕಾರ ಎಂಎಸ್‌ಪಿ ನೀಡಿ ಖರೀದಿಸಬೇಕು. ಇತ್ತೀಚೆಗೆ ಶಹಾಬಾದ್‌ನಲ್ಲಿ ಬಂಧಿಸಿರುವ ಪ್ರತಿಭಟಿಸುತ್ತಿದ್ದ ರೈತರನ್ನು ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿ ರೈತರು ಒತ್ತಾಯಿಸಿದರು.
ಬೆಲೆ ವ್ಯತ್ಯಾಸ ಪಾವತಿ ಯೋಜನೆಯಾದ ಭಾವಾಂತರ ಭರ್ಪೈ ಯೋಜನೆಯಡಿ (ಬಿಬಿವೈ) 36,414 ಎಕರೆ ಕೃಷಿ ಭೂಮಿಯಲ್ಲಿ ಸೂರ್ಯಕಾಂತಿ ಬೆಳೆದ 8,528 ರೈತರಿಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕಳೆದ ಶನಿವಾರ ಡಿಜಿಟಲ್ ಮೂಲಕ ₹29.13 ಕೋಟಿ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದ್ದರು.
ಹರಿಯಾಣ ಸರ್ಕಾರ ಈ ವರ್ಷದ ಆರಂಭದಲ್ಲಿ ಸೂರ್ಯಕಾಂತಿ ಬೆಳೆಯನ್ನು ಬಿಬಿವೈಗೆ ವಿಲೀನಗೊಳಿಸುವಿಕೆಯನ್ನು ಪ್ರಕಟಿಸಿತ್ತು.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ವಿಠಲ ದೇವರ ಭಕ್ತರು ವಾರಕರಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಆರೋಪ : ಪ್ರತಿಪಕ್ಷಗಳು ಟೀಕೆ
ಈ ಯೋಜನೆಯಡಿ ಎಂಎಸ್‌ಪಿಗಿಂತ ಕಡಿಮೆ ಮಾರಾಟವಾದ ಉತ್ಪನ್ನಗಳಿಗೆ ನಿಗದಿತ ಪರಿಹಾರವನ್ನು ನೀಡಲಾಗುತ್ತದೆ.
ಎಂಎಸ್‌ಪಿಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾದ ಸೂರ್ಯಕಾಂತಿ ಬೆಳೆಗೆ ಯೋಜನೆಯಡಿ ರಾಜ್ಯ ಸರ್ಕಾರ ಕ್ವಿಂಟಲ್‌ಗೆ ₹1,000 ಮಧ್ಯಂತರ ಪರಿಹಾರ ನೀಡುತ್ತಿದೆ.