ಇಂದು(ಮೇ 6) ನಡೆದ ಹಣಕಾಸು ನೀತಿ ಸಮಿತಿ(MPC) ಸಭೆಯ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ರೆಪೋ ದರವನ್ನು ಪರಿಷ್ಕರಿಸಿದೆ. ರೆಪೋ ದರವನ್ನು ಸತತ ಮೂರನೇ ಬಾರಿಗೆ ಇಳಿಸಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಘೋಷಣೆ ಮಾಡಿದ್ದಾರೆ. 50 ಬಿಪಿಎಸ್ ದರ ಕಡಿತಗೊಳಿಸಲಾಗಿದ್ದು, ರೆಪೋ ಶೇಕಡ 5.5ಕ್ಕೆ ತಲುಪಿದೆ.
ಆರ್‌ಬಿಐ 2023ರ ಫೆಬ್ರವರಿ ರೆಪೋ ದರವನ್ನು ಏರಿಕೆ ಮಾಡಿದ್ದು ದರ ಶೇಕಡ 6.5ಕ್ಕೆ ತಲುಪಿತ್ತು. ಅದಾದ ಬಳಿಕ ಒಂದು ವರ್ಷಕ್ಕೂ ಅಧಿಕ ಕಾಲ ಯಥಾಸ್ಥಿತಿ ಕಾಯ್ದುಕೊಂಡಿದೆ. 2025ರ ಫೆಬ್ರವರಿಯಲ್ಲಿ ಬ್ಯಾಂಕ್ ಬಡ್ಡಿದರದ ಮೇಲೆ ಪ್ರಭಾವ ಬೀರುವ ಈ ರೆಪೋ ದರವನ್ನು 25 ಮೂಲಾಂಕ(ಶೇ.6.25) ಇಳಿಸಿದೆ.
ಇದನ್ನು ಓದಿದ್ದೀರಾ? ಎರಡನೇ ಬಾರಿಗೆ ರೆಪೋ ದರ ಇಳಿಸಿದ ಆರ್‌ಬಿಐ: ಯಾರಿಗೆ ಲಾಭ?
ಬಳಿಕ ಏಪ್ರಿಲ್‌ನಲ್ಲಿ ನಡೆದ ಸಭೆಯ ಬಳಿಕ ಮತ್ತೆ 25 ಬಿಪಿಎಸ್(ಶೇ.6) ದರ ಕಡಿತಗೊಳಿಸಲಾಗಿದೆ. ಇದೀಗ ಜೂನ್ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಮಾತನಾಡಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ 50 ಬಿಪಿಸಿ ದರ ಕಡಿತಗೊಳಿಸಿ ನೂತನ ರೆಪೋ ದರ ಘೋಷಿಸಿದ್ದಾರೆ.
ರೆಪೋ ದರ ಇಳಿಕೆಯಿಂದ ಯಾರಿಗೆ ಲಾಭ, ಯಾರಿಗೆ ನಷ್ಟ?
ಬ್ಯಾಂಕ್‌ಗಳಿಗೆ ಆರ್‌ಬಿಐ ಸಾಲ ನೀಡುವ ಬಡ್ಡಿದರವೇ ರೆಪೋ ದರ. ಇದರ ಆಧಾರದಲ್ಲಿಯೇ ನಮ್ಮ ಹೂಡಿಕೆ, ಸಾಲದ ಬಡ್ಡಿದರ ನಿರ್ಧಾರವಾಗುತ್ತದೆ. ರೆಪೋ ದರ ಇಳಿಕೆಯು ಗೃಹ ಸಾಲ ಸೇರಿದಂತೆ ಇತರೆ ಸಾಲಗಾರರಿಗೆ ಲಾಭವನ್ನುಂಟು ಮಾಡಿದರೆ, ಹೂಡಿಕೆದಾರರಿಗೆ ನಷ್ಟ ಉಂಟಾಗಲಿದೆ. ಆದರೆ ಇವೆಲ್ಲವೂ ನಮ್ಮ ಹೂಡಿಕೆ ಅಥವಾ ಸಾಲದ ಬಡ್ಡಿದರದ ಮೇಲೆ ಅವಲಂಬಿತ.
ನಾವು ಸ್ಥಿರ ಬಡ್ಡಿದರದ ಆಧಾರದ ಮೇಲೆ ಸಾಲ ಪಡೆದಿದ್ದರೆ, ರೆಪೋ ದರ ಬದಲಾವಣೆಯು ನಮ್ಮ ಸಾಲದ ಬಡ್ಡಿದರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಸ್ಥಿರ ಬಡ್ಡಿದರವಲ್ಲದಿದ್ದರೆ,(ಸಾಮಾನ್ಯವಾಗಿ ಗೃಹ ಸಾಲ) ನೇರ ಪ್ರಭಾವ ಬೀರಬಹುದು. ಎಫ್‌ಡಿ ಮೊದಲಾದ ಹೂಡಿಕೆಯೂ ಇದೇ ನಿಯಮ ಅನ್ವಯ.
“ಸಾಮಾನ್ಯವಾಗಿ ರೆಪೋ ದರ ಏರಿಕೆಯಾದಂತೆ ಬ್ಯಾಂಕುಗಳೂ ಒಂದರ ಮೇಲೊಂದರಂತೆ ಸಾಲದ ಬಡ್ಡಿದರ ಏರಿಸುತ್ತವೆ. ಆದರೆ ದರ ಇಳಿಕೆಯಾದರೆ ಸಾಲದ ಬಡ್ಡಿದರ ಇಳಿಸಲು ಹಿಂದೆ ಮುಂದೆ ನೋಡುತ್ತದೆ” ಎಂಬ ಆರೋಪ ಆರ್ಥಿಕ ತಜ್ಞರದ್ದು.
