ಶೇ.5.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಘೋಷಿಸಿದೆ. ಆದರೆ ಈ ಬಾರಿಯೂ ಆರ್‌ಬಿಐ ರೆಪೋ ದರ ಇಳಿಕೆ ಮಾಡುವುದಾಗಿ ನಿರೀಕ್ಷಿಸಲಾಗಿತ್ತು.
ಈಗಾಗಲೇ ಸಾಲದ ಮೇಲಿನ ಕಡಿತ ಮಾಡಿರುವ ಬಡ್ಡಿ ದರ ಹಾಗೂ ಇತ್ತೀಚೆಗೆ ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ಕಡಿತಗೊಳಿಸಿರುವುದು, ಜಾಗತಿಕ ವ್ಯಾಪಾರ ಅನಿಶ್ಚಿತತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರ್‌ಬಿಐ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಮೂರು ದಿನಗಳ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯನ್ನು ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ನೇತೃತ್ವದಲ್ಲಿ ನಡೆದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ನಂತರ ಮಾತನಾಡಿದ ಸಂಜಯ್ ಮಲ್ಹೋತ್ರಾ, ಅನುಕೂಲಕರ ಮುಂಗಾರು ಮಳೆ, ಆರೋಗ್ಯಕರ ಬಿತ್ತನೆ, ಉತ್ತಮ ಜಲಾಶಯ ಮಟ್ಟಗಳು ಮತ್ತು ಸಾಕಷ್ಟು ಆಹಾರ ಧಾನ್ಯ ಸಂಗ್ರಹಗಳು ಆಹಾರ ಬೆಲೆಗಳನ್ನು ನಿಯಂತ್ರಣದಲ್ಲಿಡಲಿವೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತೇಲುತ್ತಿರುವ ಉತ್ತರ ಕರ್ನಾಟಕ; ಹಾರಾಡುತ್ತಿರುವ ಅಧಿಕಾರಸ್ಥರು
2025ರ ಮೊದಲ ಆರು ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಒಟ್ಟು 100 ಬೇಸಿಸ್ ಪಾಯಿಂಟ್ಸ್ ಗಳಷ್ಟು ಇಳಿಕೆ ಮಾಡಿತ್ತು. ಆದರೆ ಆಗಸ್ಟ್ ತಿಂಗಳಿನ ಆರ್‌ಬಿಐನ ಹಣಕಾಸು ನೀತಿ ಸಮಿತಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧಾರ ತೆಗೆದುಕೊಂಡಿತ್ತು.
ಅಮೆರಿಕದಿಂದ ಹೆಚ್ಚಿನ ಸುಂಕ, ರೂಪಾಯಿ ಮೌಲ್ಯ ಕುಸಿತ ಮತ್ತು ಜಾಗತಿಕ ವ್ಯಾಪಾರದ ಅನಿಶ್ಚಿತತೆಗಳಂತಹ ಬಾಹ್ಯ ಅಪಾಯಗಳನ್ನು ಗವರ್ನರ್ ಮಲ್ಹೋತ್ರಾ ಈ ಸಂದರ್ಭದಲ್ಲಿ ಎತ್ತಿ ತೋರಿಸಿದರು. ಈ ಅಂಶಗಳು ರಫ್ತು ಮತ್ತು ಬಂಡವಾಳದ ಹರಿವಿನ ದೃಷ್ಟಿಕೋನಕ್ಕೆ ಅಪಾಯಗಳನ್ನು ತಂದಿವೆ. ಈ ಅಪಾಯಗಳ ಹೊರತಾಗಿಯೂ, ಉತ್ತಮ ದೇಶೀಯ ಬೇಡಿಕೆ, ಉತ್ತಮ ಕೃಷಿ ಮತ್ತು ಸರ್ಕಾರದ ವೆಚ್ಚದಿಂದ ದೇಶದ ಆರ್ಥಿಕತೆಯು ಆಘಾತಗಳನ್ನು ತಡೆದುಕೊಳ್ಳಲು ಸನ್ನದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.