ಸಿಡಿಲು ಬಡಿದು ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ಕುಟುಂಬಸ್ಥರು ಸಗಣಿಯ ರಾಶಿಯಲ್ಲಿಟ್ಟು ಮೃತದೇಹ ಮರುಜೀವ ಪಡೆಯಬಹುದೆಂದು ಕಾದ ಘಟನೆ ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯಲ್ಲಿ ನಡೆದಿದೆ. ಸಗಣಿಯಲ್ಲಿಟ್ಟರೆ ಮೃತದೇಹ ಜೀವಂತವಾಗುತ್ತದೆ ಎಂಬ ಮೌಢ್ಯ ನಂಬಿಕೆಯನ್ನು ಹೊಂದಿರುವ ಕುಟುಂಬಸ್ಥರ ಮನವೊಲಿಸಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಜಾರ್ಖಂಡ್‌ನ ಮಹದೇಹಾರ್‌ನ ರಾಮ್‌ಪುರ ಗ್ರಾಮದ ರೈತ ಮತ್ತು ಜಾನುವಾರು ಸಾಕಣೆದಾರ ರಾಮನಾಥ್ ಯಾದವ್ ಶನಿವಾರ ಸಂಜೆ ತಮ್ಮ ಪತ್ನಿ ಶೋಭಾ ದೇವಿ ಅವರೊಂದಿಗೆ ಜಾನುವಾರು ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಮಹುದೇಹಾರ್ ಪೊಲೀಸ್ ಠಾಣೆಯ ಅಧಿಕಾರಿ ಮನೋಜ್ ಕುಮಾರ್ ಭಾನುವಾರ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ | ಒಂದು ವಾರದಲ್ಲಿ 33 ಮಂದಿ ಸಿಡಿಲು ಬಡಿದು ಸಾವು
“ಸಂಬಂಧಿಕರು ಯಾದವ್ ಅವರನ್ನು ಚಿಕಿತ್ಸೆಗಾಗಿ ಮಹುವಾಡಂದ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ದಿದ್ದು. ಅಲ್ಲಿ ವೈದ್ಯರು ಸಿಡಿಲು ಬಡಿದು ಯಾದವ್ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಶೋಭಾ ದೇವಿಯನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ” ಎಂದು ಹೇಳಿದ್ದಾರೆ.
“ಆದಾಗ್ಯೂ, ಮೂಢನಂಬಿಕೆಯನ್ನು ಹೊಂದಿರುವ ಕುಟುಂಬಸ್ಥರು ಪೊಲೀಸರಿಗೆ ತಿಳಿಸದೆ ಮೃತದೇಹವನ್ನು ಮನೆಗೆ ಕೊಂಡೊಯ್ದು ಗೋವಿನ ಸಗಣಿಯಲ್ಲಿರಿಸಿದ್ದಾರೆ. ಸಗಣಿಯಿಂದ ಸಿಡಿಲಿನ ಪರಿಣಾಮ ಕಡಿಮೆಯಾಗುತ್ತದೆ, ಇದರಿಂದಾಗಿ ಯಾದವ್ ಮತ್ತೆ ಜೀವಂತವಾಗುತ್ತಾರೆ ಎಂದು ಕುಟುಂಬಸ್ಥರು ನಂಬಿದ್ದರು” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಮೃತದೇಹವನ್ನು ಸಂಬಂಧಿಕರು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ವೈದರು ನಮಗೆ ಮಾಹಿತಿ ನೀಡಿದರು. ನಾವು ಅವರ ಮನೆಗೆ ಹೋಗಿ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಹಸ್ತಾಂತರಿಸುವಂತೆ ಕೇಳಿಕೊಂಡೆವು. ಆದರೆ ಅವರು ಮೃತರು ಶೀಘ್ರದಲ್ಲೇ ಜೀವಂತವಾಗುವುದರಿಂದ ಕಾಯುವಂತೆ ಹೇಳಿದರು” ಎಂದು ಅಧಿಕಾರಿ ಮನೋಜ್ ಕುಮಾರ್ ಹೇಳಿದ್ದಾರೆ.
ವೈದ್ಯರು ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಸಹ ಮನೆಗೆ ತಲುಪಿ ಸಂಬಂಧಿಕರನ್ನು ದೇಹವನ್ನು ಹಸ್ತಾಂತರಿಸುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದಕ್ಕೂ ಕುಟುಂಬಸ್ಥರು ಕೇಳಲಿಲ್ಲ. ಮಧ್ಯರಾತ್ರಿವರೆಗೂ ಮನವೊಲಿಸುವ ಯತ್ನ ಮಾಡುತ್ತಲೇ ಇದ್ದೆವು. ಬಳಿಕ ನಾವು ಕೊಂಚ ಬಲಪ್ರಯೋಗ ಮಾಡಬೇಕಾಯಿತು. ಅಂತಿಮವಾಗಿ ಅವರು ಸುಮ್ಮನಾದರು. ಭಾನುವಾರ ಮುಂಜಾನೆ ಮೃತದೇಹವನ್ನು ಲತೇಹರ್ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಸಿಡಿಲಿನಿಂದಾಗಿ ಸಂಭವಿಸಿದ ಸಾವಿಗೆ ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ನಿಯಮಗಳ ಅಡಿಯಲ್ಲಿ ಪರಿಹಾರವನ್ನು ಪಡೆಯಲು ಮರಣೋತ್ತರ ಪರೀಕ್ಷೆ ಅಗತ್ಯ ಎಂದು ಸಂಬಂಧಿಕರಿಗೆ ತಿಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
