ಬಹುತೇಕ ಮಂದಿಯ ಅಚ್ಚುಮೆಚ್ಚಿನ ತಿನಸುಗಳಾದ ಜಿಲೇಬಿ, ಸಮೋಸಾ, ಬಿಸ್ಕತ್ ಹಾಗೂ ನಿತ್ಯ ಸೇವಿಸುವ ಚಹಾ ಕೂಡಾ “ಅಪಾಯಕಾರಿ” ಎಂಬ ಎಚ್ಚರಿಕೆಯ ಫಲಕಗಳೊಂದಿಗೆ ಲಭ್ಯವಾಗಲಿವೆ.
ನಾಗ್ಪುರ ಎಐಐಎಂಎಸ್ ಸೇರಿದಂತೆ ಎಲ್ಲ ಕೇಂದ್ರೀಯ ಸಂಸ್ಥೆಗಳು, ಜನಸಾಮಾನ್ಯರ ದೈನಂದಿನ ತಿಂಡಿ ತಿನಸುಗಳಲ್ಲಿ ಎಷ್ಟರ ಮಟ್ಟಿಗೆ ಜಿಡ್ಡು ಮತ್ತು ಸಕ್ಕರೆ ಅಂಶಗಳು ಹುದುಗಿರುತ್ತವೆ ಎಂಬ ಬಗ್ಗೆ ಫಲಕಗಳನ್ನು ಅಳವಡಿಸುವಂತೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಜಂಕ್ ಫುಡ್ ಉತ್ಪನ್ನಗಳನ್ನು ತಂಬಾಕಿನ ಸಾಲಿಗೆ ಸೇರಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ ಎನ್ನಲಾಗಿದೆ.
ಸರ್ಕಾರಿ ಸಂಸ್ಥೆಗಳಲ್ಲಿ ಅಳವಡಿಕೆಯಾಗಲಿರುವ ಈ ಫಲಕಗಳು ಜನಸಾಮಾನ್ಯರಿಗೆ ಸಾಂಪ್ರದಾಯಿಕ ತಿಂಡಿ ತಿನಸುಗಳು ಎಂದು ಬಳಕೆಯಾಗುತ್ತಿರುವ ಈ ಖಾದ್ಯಗಳಲ್ಲಿ ಅಡಗಿರುವ ಸಕ್ಕರೆ ಮತ್ತು ಜಿಡ್ಡಿನ ಅಂಶದ ಬಗ್ಗೆ ಎಚ್ಚರಿಕೆ ನೀಡಲಿವೆ. ಲಡ್ಡು, ವಡಾ-ಪಾವ್, ಪಕೋಡಾದಂಥ ತಿನಸುಗಳ ಮೇಲೆಯೂ ನಿಗಾ ವಹಿಸಲಾಗುತ್ತದೆ. ಈ ನಿರ್ದೇಶನವನ್ನು ಎಐಐಎಂಎಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೈಗಾರಿಕೆಯಲ್ಲಿ ತಮಿಳುನಾಡು ಮಾದರಿ ಅಳವಡಿಸಿಕೊಳ್ಳಲಿ ಕರ್ನಾಟಕ
ಈ ಎಚ್ಚರಿಕೆಯನ್ನು ನೀಡುವ ಫಲಕಗಳನ್ನು ಕೆಫೆಟೇರಿಯಾ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
“ಸಿಗರೇಟ್ ಎಚ್ಚರಿಕೆಯಂತೆ ಆಹಾರದ ಲೇಬಲಿಂಗ್ ನಲ್ಲಿ ಸಹ ಎಚ್ಚರಿಕೆ ಸಂದೇಶ ನೀಡುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ” ಎಂದು ಭಾರತೀಯ ಹೃದ್ರೋಗ ತಜ್ಞರ ಸಂಘದ ನಾಗ್ಪುರ ಶಾಖೆಯ ಅಧ್ಯಕ್ಷ ಅಮರ್ ಅಮಾಲ್ ಹೇಳಿದ್ದಾರೆ. ಸಕ್ಕರೆ ಮತ್ತು ವರ್ಗಾಂತರದ ಕೊಬ್ಬಿನ ಅಂಶಗಳು ಹೊಸ ತಂಬಾಕು. ಜನರಿಗೆ ತಾವು ಏನು ತಿನ್ನುತ್ತಿದ್ದೇವೆ ಎಂಬ ಬಗ್ಗೆ ಅರಿವು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
