ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ.
ಬಿಹಾರ ವಿಧಾನಸಭೆಯ ಸೆಂಟ್ರಲ್ ಹಾಲ್ನಲ್ಲಿ ಇಂದು ಸಂಜೆ 4 ಗಂಟೆಗೆ ನಡೆದ ಎನ್ಡಿಎ ಸಭೆಯ ನಂತರ ಮುಂದಿನ ಮುಖ್ಯಮಂತ್ರಿಯನ್ನು ಘೋಷಿಸಲಾಯಿತು. ಪ್ರಮಾಣ ವಚನ ಸ್ವೀಕಾರ ಸಮಾರಂಭ ನಾಳೆ ನಡೆಯುವ ಸಾಧ್ಯತೆಯಿದೆ. ಸುಮಾರು ಎರಡು ದಶಕಗಳ ಕಾಲ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ನಿತೀಶ್ ಕುಮಾರ್ ಈಗ ಅಧಿಕಾರದಿಂದ ಕೆಳಗಿಳಿದಿದ್ದಾರೆ.
ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಪಕ್ಷದ ಕಚೇರಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿತ್ತು. ಈ ಸಭೆಯಲ್ಲಿ ಕೇಂದ್ರ ವೀಕ್ಷಕರಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭಾಗವಹಿಸಿದ್ದರು. ಇದರ ಬೆನ್ನಲ್ಲೇ ಸಂಜೆ 4 ಗಂಟೆಗೆ ಎನ್ಡಿಎ ಸಭೆ ನಡೆದಿತ್ತು. ಸಭೆಯಲ್ಲಿ ಸಾಮ್ರಾಟ್ ಚೌಧರಿಯನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಎರಡು ದಶಕಗಳ ಕಾಲ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಿತೀಶ್ ಕುಮಾರ್ ಈಗ ದೆಹಲಿಯತ್ತ ಮುಖ ಮಾಡಿದ್ದಾರೆ. ಅವರು ಏಪ್ರಿಲ್ 11 ರಂದು ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮೊದಲು, ಮಾರ್ಚ್ 30, 2026 ರಂದು ಅವರು ಬಿಹಾರ ವಿಧಾನಸಭೆಯ ವಿಧಾನ ಪರಿಷತ್ (MLC) ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಮುಖ್ಯಮಂತ್ರಿ ಸ್ಥಾನಕ್ಕೆ ಸಾಮ್ರಾಟ್ ಚೌಧರಿ ಅವರ ಹೆಸರು ಮುಂಚೂಣಿಯಲ್ಲಿತ್ತು. ವರದಿಗಳ ಪ್ರಕಾರ, ಹೊಸ ಸಂಪುಟದಲ್ಲಿ ಹೆಚ್ಚಿನ ಹಾಲಿ ಸಚಿವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದ್ದು, ಕೇವಲ ಸಣ್ಣಪುಟ್ಟ ಬದಲಾವಣೆಗಳನ್ನು ನಿರೀಕ್ಷಿ ಇದೆ ಎಂದು ತಿಳಿದು ಬಂದಿದೆ.
ಸಾಮ್ರಾಟ್ ಚೌಧರಿ ಯಾರು?
ಬಿಹಾರದ ಇಂದಿನ ರಾಜಕೀಯದಲ್ಲಿ ಸಾಮ್ರಾಟ್ ಚೌಧರಿ ಅವರು ಅತ್ಯಂತ ಪ್ರಭಾವಿ ಮತ್ತು ಚುರುಕಿನ ನಾಯಕ ಎಂದೇ ಗುರುತಿಸಿಕೊಂಡವರು. ಪ್ರಸ್ತುತ ಬಿಹಾರದ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ. ಬಿಹಾರ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಸಾಮ್ರಾಟ್ ಚೌಧರಿ ಅವರು ನವೆಂಬರ್ 16, 1968 ರಂದು ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಜನಿಸಿದರು. ಅವರು ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ಇವರ ತಂದೆ ಶಕುನಿ ಚೌಧರಿ ಅವರು ಬಿಹಾರದ ಹಿರಿಯ ರಾಜಕಾರಣಿಯಾಗಿದ್ದು, ಏಳು ಬಾರಿ ಶಾಸಕರಾಗಿ ಮತ್ತು ಸಂಸದರಾಗಿ ಸೇವೆ ಸಲ್ಲಿಸಿದವರು. ತಂದೆಯ ಮಾರ್ಗದರ್ಶನದಲ್ಲೇ ಸಾಮ್ರಾಟ್ ಅವರು ಚಿಕ್ಕ ವಯಸ್ಸಿನಲ್ಲೇ ರಾಜಕೀಯದ ಆಳ-ಅಗಲವನ್ನು ಅರಿತರು.
ಚೌಧರಿ, ಆರಂಭದಲ್ಲಿ ರಾಷ್ಟ್ರೀಯ ಜನತಾ ದಳ (RJD) ಮತ್ತು ಜನತಾ ದಳ (United) ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರು. 1999ರಲ್ಲಿ ರಾಬ್ರಿ ದೇವಿ ಅವರ ಸರ್ಕಾರದಲ್ಲಿ ಕೃಷಿ ಸಚಿವರಾಗಿ ನೇಮಕಗೊಂಡಾಗ ಅವರು ಅತ್ಯಂತ ಕಿರಿಯ ವಯಸ್ಸಿನ ಸಚಿವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2017ರಲ್ಲಿ ಅವರು ಭಾರತೀಯ ಜನತಾ ಪಾರ್ಟಿಯನ್ನು ಸೇರಿದರು. ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಪಂಚಾಯತ್ ರಾಜ್ ಸಚಿವರಾಗಿ ಗಮನಾರ್ಹ ಕೆಲಸ ಮಾಡಿದ್ದರು.
2023ರಲ್ಲಿ ಬಿಜೆಪಿ ಅವರನ್ನು ಬಿಹಾರ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿತು. ಹಿಂದುಳಿದ ವರ್ಗಗಳ (OBC) ಮತದಾರರನ್ನು ಸೆಳೆಯುವಲ್ಲಿ ಇವರು ಪಕ್ಷಕ್ಕೆ ದೊಡ್ಡ ಶಕ್ತಿಯಾಗಿದ್ದರು.. 2024ರ ಆರಂಭದಲ್ಲಿ ಬಿಹಾರದಲ್ಲಿ ನಡೆದ ರಾಜಕೀಯ ಬದಲಾವಣೆಯ ನಂತರ, ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಸಾಮ್ರಾಟ್ ಚೌಧರಿ ಅವರು ತಮ್ಮ ತಲೆಯ ಮೇಲೆ ಧರಿಸುವ ‘ಪೇಟ’ದಿಂದಾಗಿಯೇ ಸುದ್ದಿಯಲ್ಲಿದ್ದರು. ಬಿಹಾರದಲ್ಲಿ ನಿತೀಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಈ ಪೇಟವನ್ನು ಬಿಚ್ಚುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದರು. ನಂತರ ರಾಜಕೀಯ ಸಮೀಕರಣಗಳು ಬದಲಾಗಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ರಚನೆಯಾದಾಗ ಅವರು ಅಯೋಧ್ಯೆಗೆ ಭೇಟಿ ನೀಡಿ ತಮ್ಮ ಪ್ರತಿಜ್ಞೆಯನ್ನು ವಾಪಾಸ್ ಪಡೆದಿದ್ದರು.
ಸಾಮ್ರಾಟ್ ಚೌಧರಿ ಅವರು ಕೇವಲ ಒಬ್ಬ ನಾಯಕರಷ್ಟೇ ಅಲ್ಲದೆ, ಬಿಹಾರದಲ್ಲಿ ಬಿಜೆಪಿಯ ಭವಿಷ್ಯದ ಮುಖವಾಗಿ ಹೊರಹೊಮ್ಮುತ್ತಿದ್ದಾರೆ. ಸಂಘಟನಾ ಚಾತುರ್ಯ ಮತ್ತು ಆಕ್ರಮಣಕಾರಿ ರಾಜಕೀಯ ಶೈಲಿಯಿಂದಾಗಿ ಅವರು ರಾಷ್ಟ್ರ ಮಟ್ಟದ ಗಮನ ಸೆಳೆಯುತ್ತಿದ್ದಾರೆ.





