ಅದಾನಿ ಹಿಂಡನ್‌ಬರ್ಗ್ ಪ್ರಕರಣದಲ್ಲಿ ಸಂಬಂಧಿತ ಎಲ್ಲರೂ ಕೂಡ ಬುಧವಾರದೊಳಗೆ (ನ. 8) ಅಂತಿಮ ದಾಖಲೆಗಳನ್ನು ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ.
ಅದಾನಿ ಹಿಂಡನ್‌ಬರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಷ್ಟೂ ಬೇಗ ವಿಚಾರಣೆ ಆರಂಭಿಸುವಂತೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿದಾರರೊಬ್ಬರು ಸಲ್ಲಿಸಿದ ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ರಿಜಿಸ್ಟ್ರಾರ್ಗೆ ಇದನ್ನು ಗಮನಿಸಲು ಹೇಳುವುದಾಗಿ ತಿಳಿಸಿತು. ಹಾಗೆಯೇ, ನಾಳೆ ಇದನ್ನು ಮತ್ತೆ ಪ್ರಸ್ತಾಪಿಸುವಂತೆಯೂ ಅರ್ಜಿದಾರರಿಗೆ ಸೂಚಿಸಿತು.
ಅರ್ಜಿದಾರರ ಪರ ವಾದಿಸಿದ ಪ್ರಶಾಂತ್ ಭೂಷಣ್, ಈ ಪ್ರಕರಣವನ್ನು ಲಿಸ್ಟ್ಗೆ ಹಾಕಿಸಲು ಅರ್ಜಿದಾರರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಸಾಧ್ಯವಾಗಿಲ್ಲ ಆಗಸ್ಟ್ 28ಕ್ಕೆ ವಿಚಾರಣೆ ನಡೆಯಲು ಲಿಸ್ಟ್ ಆಗಿತ್ತಾದರೂ ಅದು ಮುಂದಕ್ಕೆ ಹೋಗಿದೆ. ಈಗ ಮತ್ತೆ ಲಿಸ್ಟ್ ಆಗುತ್ತಿಲ್ಲ. ಆದಷ್ಟೂ ಬೇಗ ಪ್ರಕರಣವು ಲಿಸ್ಟ್ ಆಗಿ, ವಿಚಾರಣೆ ಶುರುವಾಗಲಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಅವರು, ಸರ್ಕಾರ ಈ ಪ್ರಕರಣದಲ್ಲಿ ಎರಡು ಪುಟಗಳ ದಾಖಲೆಯನ್ನು ಸಲ್ಲಿಸಬೇಕಿದೆ ಎಂಬ ವಿಚಾರವನ್ನು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದಾದ್ಯಂತ ನೀರಾವರಿ ಪಂಪ್‍ಸೆಟ್‍ಗಳಿಗೆ ನಿರಂತರ ಏಳು ಗಂಟೆ ವಿದ್ಯುತ್: ಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ನಿರ್ಧಾರ
ಅದಾನಿ ಸಮೂಹದ ಷೇರುಗಳ ಬೆಲೆಯನ್ನು ತಿರುಚಿದ ಆರೋಪಗಳಿಗೆ ಸಂಬಂಧಿಸಿದ ಪಿಐಎಲ್‌ಗಳ ವಿಚಾರಣೆಗೆ ಪಟ್ಟಿ ಮಾಡುವ ವಿಷಯವನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಪರಿಶೀಲಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ತಿಳಿಸಿದೆ.
ಜುಲೈ 11 ರಂದು, ಅದಾನಿ ಸಮೂಹದಿಂದ ಷೇರುಗಳ ಬೆಲೆ ತಿರುಚಿದ ಆರೋಪಗಳ ಕುರಿತು ನಡೆಯುತ್ತಿರುವ ತನಿಖೆಯ ಸ್ಥಿತಿಯ ಬಗ್ಗೆ ತಿಳಿಸುವಂತೆ ‘ಸೆಬಿ’ಗೆ ಸುಪ್ರೀಂ ಕೋರ್ಟ್ ಕೇಳಿತ್ತು.
ಸೆಬಿಯಿಂದ ತನಿಖೆಗೆ ಆಗಸ್ಟ್ 14 ರವರೆಗೆ ಕಾಲಾವಕಾಶ ನೀಡಿದ್ದ ನ್ಯಾಯಾಲಯ, ವಿಚಾರಣೆಯನ್ನು ತ್ವರಿತವಾಗಿ ಮುಗಿಸಬೇಕು ಎಂದು ಹೇಳಿತ್ತು.
ಸೆಬಿ ಈ ಪ್ರಕರಣದಲ್ಲಿ 24 ಅಂಶಗಳನ್ನು ತನಿಖೆ ಮಾಡಿದೆ. ಇದರಲ್ಲಿ 22 ತನಿಖೆಗಳು ಅಂತಿಮಗೊಂಡಿವೆ. ಇನ್ನೆರಡು ತನಿಖೆಯಲ್ಲಿ ಮಧ್ಯಂತರ ವರದಿಗಳು ಸಿದ್ಧವಾಗಿವೆ. ನವೆಂಬರ್ 8ಕ್ಕೆ ದೂರುದಾರರು, ಅದಾನಿ ಪರ ವಕೀಲರು, ಸರ್ಕಾರ ಮತ್ತು ಸೆಬಿ ಎಲ್ಲರೂ ಕೂಡ ಅಂತಿಮ ದಾಖಲೆಗಳನ್ನು ಸುಪ್ರೀಂ ನ್ಯಾಯಪೀಠಕ್ಕೆ ಸಲ್ಲಿಸಬೇಕಾಗುತ್ತದೆ. ಅದಾದ ಬಳಿಕ ಮುಂದಿನ ವಿಚಾರಣೆಗೆ ನ್ಯಾಯಪೀಠ ದಿನ ನಿಗದಿ ಮಾಡಲಿದೆ.