2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದ್ಯಾರ್ಥಿ ಕಾರ್ಯಕರ್ತ ಶರ್ಜೀಲ್ ಇಮಾಮ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ಸೂಚಿಸಿದೆ.
ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಮತ್ತು ವಿಕಾಸ್ ಮಹಾಜನ್ ಅವರಿದ್ದ ನ್ಯಾಯಪೀಠವು ಈ ನೋಟಿಸ್ ಜಾರಿ ಮಾಡಿದೆ. ಜುಲೈ 4ರಂದು ವಿಚಾರಣಾ ನ್ಯಾಯಾಲಯವು ಶರ್ಜೀಲ್ ಇಮಾಮ್ ಅವರ ಎರಡನೇ ನಿಯಮಿತ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಇಮಾಮ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರತಿಕ್ರಿಯೆ ಸಲ್ಲಿಸಲು ಪೊಲೀಸರಿಗೆ ಎರಡು ವಾರಗಳ ಕಾಲಾವಕಾಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 27ಕ್ಕೆ ನಿಗದಿಪಡಿಸಿದೆ.
2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದಿದ್ದ ಗಲಭೆಯ ಹಿಂದೆ ಶರ್ಜೀಲ್ ಇಮಾಮ್ ಒಬ್ಬ ‘ಮಾಸ್ಟರ್ ಮೈಂಡ್’ ಎಂದು ಆರೋಪಿಸಿ, 2020ರ ಆಗಸ್ಟ್ 25ರಂದು ಅವರನ್ನು ಬಂಧಿಸಲಾಗಿತ್ತು. ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 53 ಮಂದಿ ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (NRC) ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಈ ಹಿಂಸಾಚಾರ ಭುಗಿಲೆದ್ದಿತ್ತು. ಇವರ ಮೇಲೆ ಕಠಿಣವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿ ಪ್ರಕರಣ ದಾಖಲಿಸಲಾಗಿದೆ.
ವಿಚಾರಣಾ ನ್ಯಾಯಾಲಯವು ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸುವಾಗ, ಸುಪ್ರೀಂ ಕೋರ್ಟ್ನ ಜನವರಿ 5ರ ಆದೇಶವನ್ನು ಪಾಲಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿತ್ತು. ತನ್ನ ಮುಂದೆ ಈ ಜಾಮೀನು ಅರ್ಜಿಯನ್ನು ಪರಿಗಣಿಸಲು ಅಥವಾ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಜಾಮೀನು ಅರ್ಜಿ ವಜಾ
ಆದರೆ, ಈ ನಿರ್ಧಾರವನ್ನು ಪ್ರಶ್ನಿಸಿರುವ ಶರ್ಜೀಲ್ ಇಮಾಮ್, ವಿಚಾರಣಾ ನ್ಯಾಯಾಲಯವು ತನ್ನ ಜಾಮೀನು ಅರ್ಜಿಯನ್ನು ಸ್ವತಂತ್ರವಾಗಿ ಪರಿಗಣಿಸದೆ ತಪ್ಪು ಮಾಡಿದೆ ಎಂದು ವಾದಿಸಿದ್ದಾರೆ. ಸುಮಾರು ಆರು ವರ್ಷಗಳು ಕಳೆದರೂ, ಪ್ರಕರಣವು ಇನ್ನೂ ಆರೋಪಗಳ ಚರ್ಚೆಯ (arguments on charges) ಹಂತದಲ್ಲಿದೆ ಎಂದು ಅವರು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಈ ಹಿಂದೆ ಜನವರಿ 5ರಂದು ಸುಪ್ರೀಂ ಕೋರ್ಟ್, ಶರ್ಜೀಲ್ ಇಮಾಮ್ ಮತ್ತು ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ ಇದೇ ಪ್ರಕರಣದ ಇತರ ಸಹ ಆರೋಪಿಗಳಾದ ಗುಲ್ಫೀಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಜಾಮೀನು ನೀಡಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿರುವವರ ಪಾತ್ರದ ಆಧಾರದ ಮೇಲೆ ಎಲ್ಲ ಆರೋಪಿಗಳನ್ನು ಒಂದೇ ರೀತಿಯಾಗಿ ನೋಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.




