ಜ್ಞಾನವಾಪಿ ಮತ್ತು ಮಥುರಾ ವಿವಾದಗಳ ಬೆನ್ನಲ್ಲೇ ಇದೀಗ ದೇಶದ ಪ್ರಸಿದ್ಧ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಾದ ಉತ್ತರ ಪ್ರದೇಶದ ‘ದಾರುಲ್ ಉಲೂಮ್ ದಯೋಬಂದ್’ ಅನ್ನು ಗುರಿಯಾಗಿಸಿಕೊಂಡು ಹೊಸ ವಿವಾದವೊಂದನ್ನು ಹುಟ್ಟುಹಾಕಲಾಗಿದೆ. ಸಂಸ್ಥೆಯ ಆವರಣದೊಳಗೆ ಪ್ರಾಚೀನ ಶಿವ ದೇವಾಲಯವು ಹೂತುಹೋಗಿದೆ ಎಂದು ಹಿಂದೂ ರಕ್ಷಾ ದಳ ಆರೋಪಿಸಿದ್ದು, ಯಾವುದೇ ಅಧಿಕೃತ ಸಾಕ್ಷ್ಯಾಧಾರಗಳಿಲ್ಲದ ಈ ಹೇಳಿಕೆಗಳು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯತ್ನವೇ ಎಂಬ ಕಳವಳವನ್ನು ಹುಟ್ಟುಹಾಕಿವೆ.
ಇತ್ತೀಚಿನ ವರ್ಷಗಳಲ್ಲಿ ವಾರಣಾಸಿಯ ಜ್ಞಾನವಾಪಿ, ಮಥುರಾದ ಶಾಹಿ ಇದ್ಗಾ, ಬದಾಯೂನ್ನ ಶಂಸಿ ಜಾಮಾ ಮಸೀದಿ ಹಾಗೂ ಸಂಭಲ್ನ ಶಾಹಿ ಮಸೀದಿಗಳು ಸೇರಿದಂತೆ ಹಲವು ಮುಸ್ಲಿಂ ಧಾರ್ಮಿಕ ಸ್ಥಳಗಳ ಕುರಿತು ಹಿಂದೂ ಸಂಘಟನೆಗಳು ವಿವಾದಗಳನ್ನು ಕೆದಕುತ್ತಿವೆ. ಈ ಅಭಿಯಾನದ ಮುಂದುವರಿದ ಭಾಗವಾಗಿ ಈಗ ಮುಸ್ಲಿಮರ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿರುವ ದಾರುಲ್ ಉಲೂಮ್ ದೇವಬಂದ್ ಸಂಸ್ಥೆಯ ಮೇಲೆ ಕಣ್ಣಿಡಲಾಗಿದೆ.
ಹಿಂದೂ ರಕ್ಷಾ ದಳದ ಲಲಿತ್ ಶರ್ಮಾ ನೇತೃತ್ವದಲ್ಲಿ ಸಹರಾನ್ಪುರ ಜಿಲ್ಲಾ ಕೇಂದ್ರದ ಎದುರು ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿದೆ. ದಾರುಲ್ ಉಲೂಮ್ ಆವರಣದ ಸುಮಾರು 14 ಅಡಿ ಆಳದಲ್ಲಿ ಪ್ರಾಚೀನ ಶಿವಲಿಂಗ ಮತ್ತು ದೇವಾಲಯದ ಅವಶೇಷಗಳಿವೆ ಎಂದು ಶರ್ಮಾ ಪ್ರತಿಪಾದಿಸಿದ್ದಾರೆ. “ಅಲ್ಲಿ 14 ಅಡಿ ಆಳದಲ್ಲಿ ಶಿವಲಿಂಗ ಪತ್ತೆಯಾಗಲಿದೆ. ಒಂದು ವೇಳೆ ಸಿಗದಿದ್ದರೆ ನಾನು ಗಲ್ಲು ಶಿಕ್ಷೆಗೂ ಸಿದ್ಧ” ಎಂದು ಅವರು ಪ್ರಚೋದನಾತ್ಮಕ ಸವಾಲು ಹಾಕಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆ (ASI) ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಸಂಘಟನೆಯು ಜಿಲ್ಲಾಡಳಿತಕ್ಕೆ ಜ್ಞಾಪನಾ ಪತ್ರ ಸಲ್ಲಿಸಿದೆ. ಆದರೆ, ಇಷ್ಟೆಲ್ಲಾ ಗಂಭೀರ ಆರೋಪಗಳನ್ನು ಮಾಡುತ್ತಿರುವ ಸಂಘಟನೆಯು ತನ್ನ ವಾದವನ್ನು ಬೆಂಬಲಿಸಲು ಯಾವುದೇ ಐತಿಹಾಸಿಕ ಅಥವಾ ಪುರಾತತ್ವ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಒದಗಿಸಿಲ್ಲ. ಆಡಳಿತ ಮಂಡಳಿಯಾಗಲಿ ಅಥವಾ ಸರ್ಕಾರವಾಗಲಿ ಈ ಬಗ್ಗೆ ಯಾವುದೇ ತನಿಖೆಯನ್ನು ಪ್ರಕಟಿಸಿಲ್ಲ.
ಮಸೀದಿ ಸಮಿತಿಗಳು ಮತ್ತು ಮುಸ್ಲಿಂ ಸಂಘಟನೆಗಳು ಈ ಸರಣಿ ಆರೋಪಗಳನ್ನು ಬಲವಾಗಿ ಖಂಡಿಸಿವೆ. 1991ರ ಆರಾಧನಾ ಸ್ಥಳಗಳ ಕಾಯ್ದೆಯು (Places of Worship Act) 1947ರ ಆಗಸ್ಟ್ 15 ರಂದು ಇದ್ದ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದನ್ನು ಖಾತರಿಪಡಿಸುತ್ತದೆ. ಹೀಗಿರುವಾಗ, ಪದೇ ಪದೇ ಅಲ್ಪಸಂಖ್ಯಾತರ ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ವಿವಾದ ಸೃಷ್ಟಿಸುತ್ತಿರುವುದು ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿದೆ. ಇಂತಹ ವಿವಾದಗಳು ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವ ಅಪಾಯವನ್ನು ಹೊಂದಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ವಿವಾದವು ಕೇವಲ ಧಾರ್ಮಿಕ ಸ್ವರೂಪದ್ದಾಗಿರದೆ, ರಾಜಕೀಯ ಪ್ರೇರಿತವಾಗಿದೆ ಎಂಬ ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. ದೇವಬಂದ್ ವಿವಾದದ ಪ್ರತಿಭಟನೆಯ ನಡುವೆಯೇ, ಪ್ರತಿಭಟನಾಕಾರರು ಸಹರಾನ್ಪುರದ ಸಮಾಜವಾದಿ ಪಕ್ಷದ ಸಂಸದೆ ಇಕ್ರಾ ಹಸನ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು. ಮೋನು ಕಶ್ಯಪ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಕ್ರಾ ಹಸನ್ ಪೊಲೀಸ್ ಅಧಿಕಾರಿಗಳೊಂದಿಗೆ ನಡಕೊಂಡ ರೀತಿಯನ್ನು ವಿರೋಧಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಧಾರ್ಮಿಕ ಹಕ್ಕುಸ್ವಾಮ್ಯದ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ಸಂಸದೆಯ ಮೇಲಿನ ವೈಯಕ್ತಿಕ ಟೀಕೆಗಳು ಸೇರಿಕೊಂಡಿರುವುದು, ಪಶ್ಚಿಮ ಉತ್ತರ ಪ್ರದೇಶದಲ್ಲಿ ರಾಜಕೀಯ ಲಾಭಕ್ಕಾಗಿ ವಿವಾದಗಳನ್ನು ಹುಟ್ಟುಹಾಕಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಮೂಡಿಸಿದೆ




