ಬಂಗಾಳಕ್ಕೂ ಕಾಲಿಟ್ಟ ಎಸ್‌ಐಆರ್‌ ಭೂತ; ಜನನ ಪ್ರಮಾಣಪತ್ರಕ್ಕಾಗಿ ಜನರ ಪರದಾಟ

Date:

Advertisements

ಬಿಹಾರದಲ್ಲಿ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸುತ್ತಿರುವ ಚುನಾವಣಾ ಆಯೋಗವು, ಭಾರೀ ವಿರೋಧ ಎದುರಿಸುತ್ತಿದೆ. ಆದರೂ, ಎಸ್‌ಐಆರ್‌ ಪ್ರಕ್ರಿಯೆಯನ್ನು ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳಕ್ಕೂ ವಿಸ್ತರಿಸಲು ಮುಂದಾಗಿದೆ. ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದು, ಮತದಾರ ಪಟ್ಟಿ ಪರಿಷ್ಕರಣೆಗೆ ಚಾಲನೆ ನೀಡಿದೆ.

ಬಾಂಗ್ಲಾದೇಶದ ಗಡಿಯಲ್ಲಿರುವ ಬಂಗಾಳದ ಮುಸ್ಲಿಂ ಪ್ರಾಬಲ್ಯವಿರುವ ಮುರ್ಶಿದಾಬಾದ್ ಮತ್ತು ಮಾಲ್ಡಾ ಜಿಲ್ಲೆಗಳಲ್ಲಿ ಎಸ್‌ಐಆರ್‌ಗೆ ಸಿದ್ದತೆ ಆರಂಭಿಸಲಾಗಿದೆ. ಜಿಲ್ಲೆಗಳ ವ್ಯಾಪ್ತಿಯಲ್ಲಿನ ಪುರಸಭೆಗಳು, ಗ್ರಾಮ ಪಂಚಾಯತಿಗಳು ಹಾಗೂ ನ್ಯಾಯಾಲಯಗಳಲ್ಲಿ, ಜನರು ಸ್ಟಾಂಪ್ ಪೇಪರ್‌ಗಳೊಂದಿಗೆ ಸಾಲುಗಟ್ಟಿ ನಿಂತಿದ್ದಾರೆ. ತಮ್ಮ ಜನನ ಪ್ರಮಾಣಪತ್ರಗಳನ್ನು ಸರಿಪಡಿಸಲು, ಡಿಜಿಟಲೀಕರಣಗೊಳಿಸಲು ಅಥವಾ ಹೊಸ ಪತ್ರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಈ ಎರಡೂ ಜಿಲ್ಲೆಗಳು ಸೇರಿದಂತೆ ದೇಶದ ಗ್ರಾಮೀಣ ಭಾಗದ ಬಹುತೇಕ ಜನರು ಜನನ ಪ್ರಮಾಣಪತ್ರ ಹೊಂದಿರಲು ಸಾಧ್ಯವಿಲ್ಲ. ಹೀಗಿದ್ದರೂ, ಆಯೋಗವು ಬಿಹಾರದಲ್ಲಿ ಎಸ್‌ಐಆರ್‌ಅನ್ನು ಜಾರಿಗೊಳಿಸಿದೆ. ಇದು, ಪರೋಕ್ಷವಾಗಿ ‘ರಾಷ್ಟ್ರೀಯ ನಾಗರಿಕ ನೋಂದಣಿ’ (ಎನ್‌ಆರ್‌ಸಿ) ಜಾರಿಗೊಳಿಸುವ ಹುನ್ನಾರವೆಂದು ಆರೋಪಗಳಿವೆ. ಎಸ್‌ಐಆರ್‌ನಿಂದಾಗಿ ಬಿಹಾರದಲ್ಲಿ ಸುಮಾರು 2 ಕೋಟಿ ಜನರು ಮತಪಟ್ಟಿಯಿಂದ ಹೊರಗುಳಿಯುವ ಆತಂಕವಿದೆ. ಇಂತಹ ಪರಿಸ್ಥಿತಿಯ ನಡುವೆಯೂ ಆಯೋಗವು ಎಸ್‌ಐಆರ್‌ ಅನ್ನು ಪಶ್ಚಿಮ ಬಂಗಾಳಕ್ಕೂ ವಿಸ್ತರಿಸಲು ಮುಂದಾಗಿದೆ. ಬಂಗಾಳದಲ್ಲಿ ಅಲ್ಲಿನ ಜನರ ಜನನ ಪ್ರಮಾಣಪತ್ರವು ಅವರನ್ನು ಭಾರತೀಯನೆಂದು ಪ್ರಾಮಾಣಣೀಕರಿಸದಿದ್ದರೆ ಅವರನ್ನು ಗಡೀಪಾರು ಮಾಡಲೂ ನಿರ್ಧರಿಸಬಹುದು ಎಂಬ ಭಯ ಎದುರಾಗಿದೆ.

ಜುಲೈ 29ರಂದು ಟಿಎಂಸಿ ಸರ್ಕಾರವು ಎಸ್‌ಐಆರ್‌ ವಿರುದ್ಧ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಜನನ ದಾಖಲೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಒಳಗೊಂಡ ಅಧಿಸೂಚನೆಯನ್ನು ಜಾರಿಗೊಳಿಸಿದೆ. ಈಗ, ಬಂಗಾಳದ ಜನರು ಈ ಮಾರ್ಗಸೂಚಿಗಳನ್ನು ಪೂರೈಸಲು ಸ್ಥಳೀಯ ಸಂಸ್ಥೆಗಳ ಎದುರು ಸಾಲುಗಟ್ಟಿ ನಿಂತಿದ್ದಾರೆ.

ಬೆರ್ಹಾಂಪೋರ್ ತಾಲೂಕಿನ ಅಮ್ಲಾಯಿ ಗ್ರಾಮದ ಅಬುಲ್ ಕಾಸೆಂ ಶೇಖ್ (65) ಅವರು ಬೆರ್ಹಾಂಪೋರ್ ಪುರಸಭೆಯಲ್ಲಿ ತನ್ನ ಮಗಳು ಸಾಜಿನಾ ಖಾತುನ್‌ ಅವರ ಜನನ ಪತ್ರ ಪಡೆಯಲು ಒದ್ದಾಡುತ್ತಿದ್ದಾರೆ. ಅವರು 600ಕ್ಕೂ ಹೆಚ್ಚು ಜನರಿರುವ ಸರತಿ ಸಾಲಿನಲ್ಲಿ ನಿಂತಿದ್ದಾರೆ. ತಮ್ಮ ಮಗಳು 20 ವರ್ಷಗಳ ಹಿಂದೆ ಬೆರ್ಹಾಂಪೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ್ದರು ಎಂಬುದಕ್ಕೆ ಅವರ ಬಳಿ ಕೈಬರಹದ ದಾಖಲೆ ಮಾತ್ರವೇ ಇದೆ.

ಈ ಅವರು ಡಿಜಿಟಲ್ ಪ್ರಮಾಣಪತ್ರವನ್ನು ಪಡೆಯಬೇಕಾಗಿದೆ. ಅದಕ್ಕಾಗಿ, ಜನರು ಸರ್ಕಾರಿ ಕಚೇರಿಗಳಿಗೆ ದೌಡಾಯಿಸುತ್ತಿದ್ದಾರೆ. ಜನನ ಪ್ರಮಾಣಪತ್ರದ ಫಾರ್ಮ್‌ಗಳನ್ನು ಭರ್ತಿ ಮಾಡಿ, ಹೊಸ ಪ್ರಮಾಣಪತ್ರಗಳನ್ನು ತೆಗೆದುಕೊಳ್ಳಲು ಪರದಾಡುತ್ತಿದ್ದಾರೆ.

“ನಾವು ಭವಿಷ್ಯದಲ್ಲಿ ಯಾವುದೇ ಅಪಾಯಕ್ಕೆ ಸಿಲುಕಿಕೊಳ್ಳಬಾರದು. ಅದಕ್ಕಾಗಿ, ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಿದ್ದವಿಟ್ಟುಕೊಳ್ಳಬೇಕು. ಅವರು (ಕೇಂದ್ರ ಸರ್ಕಾರ – ಚುನಾವಣಾ ಆಯೋಗ) ಎಸ್‌ಐಆರ್‌ ಜಾರಿಗೆ ತಂದ ಬಳಿಕ, ಒಂದು ದಿನ ಎನ್‌ಆರ್‌ಸಿಯನ್ನೂ ಜಾರಿಗೆ ತರುತ್ತಾರೆ. ಅದಕ್ಕಾಗಿ, ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ, ಮೊದಲು ನಮ್ಮ ಮತದಾನದ ಹಕ್ಕು ಕಸಿದುಕೊಳ್ಳುತ್ತಾರೆ. ಬಳಿಕ, ನಮ್ಮನ್ನೂ ದೇಶದಿಂದ ಹೊರಹಾಕುತ್ತಾರೆ” ಎಂದು ಖಾತುನ್ ಹೇಳಿದ್ದಾರೆ.

“ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಎಸ್‌ಐಆರ್‌ಅನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ. ಜನರಿಗೆ ದಾಖಲೆಗಳನ್ನು ಹೊಂದಿಸಲು ಸಹಾಯ ಮಾಡುವುದಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಮಮತಾ ಸರ್ಕಾರ ಹೇಳಿದೆ.

ಬೆರ್ಹಾಂಪೋರ್ ಪುರಸಭೆಯ ಅಧ್ಯಕ್ಷ ನರುಗೋಪಾಲ್ ಮುಖರ್ಜಿ, “ಕಳೆದ 10 ದಿನಗಳಿಂದ ಕಚೇರಿಯಲ್ಲಿ ಜನಜಂಗುಳಿ ತುಂಬಿದೆ. ಈ ಹಿಂದೆ, ನಾವು ದಿನಕ್ಕೆ 10-12 ಡಿಜಿಟಲೀಕರಣ ಅಥವಾ ಜನನ ಪ್ರಮಾಣಪತ್ರ ಅಪ್‌ಡೇಟ್‌ಗಾಗಿನ ಅರ್ಜಿಗಳನ್ನು ಸ್ವೀಕರಿಸುತ್ತಿದ್ದೆವು. ಆದರೆ, ಈಗ ಆ ಸಂಖ್ಯೆ 500-600ಕ್ಕೆ ಏರಿದೆ. ಜನರು ಬೆಳಿಗ್ಗೆ 7 ಗಂಟೆಗೇ ಕಚೇರಿ ಬಳಿಗೆ ಬರುತ್ತಿದ್ದಾರೆ” ಎಂದು ಹೇಳಿದ್ದಾರೆ.

ಮುರ್ಶಿದಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜರ್ಶಿ ಮಿತ್ರಾ, “ಈ ಪ್ರಕ್ರಿಯೆಗಳನ್ನು ಉಪ-ವಿಭಾಗೀಯ ಅಧಿಕಾರಿಗಳು (SDO) ಹಾಗೂ ಬ್ಲಾಕ್ ವೈದ್ಯಕೀಯ ಅಧಿಕಾರಿಗಳು (BMO) ನಿರ್ವಹಿಸುತ್ತಿದ್ದಾರೆ. ಡಿಜಿಟಲೀಕೃತ ದಾಖಲೆಯು ಜನನ ಪ್ರಮಾಣಪತ್ರವು ನಕಲಿಯಲ್ಲ ಎಂಬುದನ್ನು ಸಾಬೀತು ಮಾಡಲು ಸಾಕ್ಷಿಯಾಗಿದೆ. ಪರಿಶೀಲನೆಗಳು ಇದ್ದಾಗ, ಈ ಪತ್ರವು ನೆರವಗುತ್ತದೆ” ಎಂದಿದ್ದಾರೆ.

‘ಜನನ ಮತ್ತು ಮರಣ ದಾಖಲೆಗಳ ವಿಭಾಗ’ದ ಅಧಿಕಾರಿ ಅಭಿಜಿತ್ ಸರ್ಕಾರ್, “ಜನರು ಧಾವಂತಪಡುವ ಅಗತ್ಯವಿಲ್ಲ ಎಂಬುದನ್ನು ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಜನರು ಭಯಭೀತರಾಗಿದ್ದು, ನಮ್ಮ ಮಾತನ್ನು ಆಲಿಸುತ್ತಿಲ್ಲ” ಎಂದು ಹೇಳಿದ್ದಾರೆ.

61 ವರ್ಷದ ಸಿರಾಜುಲ್ ಇಸ್ಲಾಂ ಅವರು ಈ ಪ್ರಕ್ರಿಯೆಗಳಿಂದ ತಾಳ್ಮೆ ಕಳೆದುಕೊಂಡಿದ್ದು, “ನನ್ನ ಹೆಂಡತಿಯ ಹೆಸರು ನನ್ನ ಮಗಳ ಜನನ ಪ್ರಮಾಣಪತ್ರದಲ್ಲಿ ಸೋಭಾ ಸರ್ಕಾರ್ ಆಗಿದೆ. ಅದರೆ, ಅದು ಸೋಭಾ ಖಾತುನ್ ಆಗಿರಬೇಕಿತ್ತು. ಹೆಸರು ತಿದ್ದುಪಡಿಗಾಗಿ ನ್ಯಾಯಾಲಯದಿಂದ ಅಫಿಡವಿಟ್‌ ತರುವಂತೆ ಹೇಳುತ್ತಿದ್ದಾರೆ. ಈ ಪ್ರಹಸನವು ಕಿರಿಕಿರಿಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಓರ್ವ ಅಧಿಕಾರಿ ಹೇಳುವಂತೆ; “ನ್ಯಾಯಾಲಯದ ಅಫಿಡವಿಟ್ ಇಲ್ಲದೆ ನಾವು ಅವರ ಕೆಲಸವನ್ನು ಮಾಡಿಕೊಡಲು ಸಾಧ್ಯವಿಲ್ಲ. ನಮ್ಮ ದಾಖಲೆಗಳಲ್ಲಿ, ಅವರ ಪತ್ನಿಯ ಹೆಸರು ಸೋಭಾ ಸರ್ಕಾರ್ ಎಂದಿದೆ. ಆದರೆ, ನಿಯಮಗಳನ್ನು ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ” ಎಂದಿದ್ದಾರೆ.

ವಕೀಲ ಸಯೀದ್ ರಾಮಿ ನೀಡುವ ಉದಾಹರಣೆಯಲ್ಲಿ; ಒಬ್ಬ ಮಹಿಳೆಯ ಹೆಸರು ಆಧಾರ್ ಮತ್ತು ಮತದಾರರ ಕಾರ್ಡ್‌ನಲ್ಲಿ ಕಾಜೋಲಾ ಬಿಬಿ ಎಂದಿದೆ. ಆದರೆ, ಅವರ ಮಗ ಮೊನಿರುಲ್ ಇಸ್ಲಾಂ (7)ನ ಜನನ ಪ್ರಮಾಣಪತ್ರದಲ್ಲಿ ಅಲಿಯಾ ಖಾತುನ್ ಎಂಬುದಾಗಿ ಬರೆಯಲಾಗಿದೆ. ಅಂತೆಯೇ, ಮತ್ತೊಬ್ಬ ವ್ಯಕ್ತಿ, ಶೇಖ್ ಅಬ್ದುಲ್ ಆಹದ್ ಅವರು 2002ರಲ್ಲಿ ಪಡೆದಿದ್ದ ಮತದಾರರ ಗುರುತಿನ ಚೀಟಿಯಲ್ಲಿ ಸರಿಯಾದ ಹೆಸರು ಹೊಂದಿದ್ದಾರೆ. ಆದರೆ, ಆಧಾರ್ ಕಾರ್ಡ್‌ನಲ್ಲಿ ಅಬ್ದುಲ್ ಆಹದ್ ಎಂದಿದೆ. ಈಗ ಅಫಿಡವಿಟ್‌ಗಳ ಮೂಲಕ, ಕಾಜೋಲಾ ಬಿಬಿ ಮತ್ತು ಅಲಿಯಾ ಖಾತುನ್ ಹಾಗೂ ಅಬ್ದುಲ್ ಆಹದ್ ಮತ್ತು ಶೇಖ್ ಅಬ್ದುಲ್ ಆಹದ್ ಒಂದೇ ವ್ಯಕ್ತಿಗಳು ಎಂದು ಸಾಬೀತುಪಡಿಸಬೇಕಾಗಿದೆ.

ಇಂತಹ ಹಲವು ರೀತಿಯ ಸಮಸ್ಯೆಗಳನ್ನು ಕೇವಲ ಬಂಗಾಳದ ಮುಸ್ಲಿಮರು ಮಾತ್ರವಲ್ಲ, ದೇಶಾದ್ಯಂತ ಎಲ್ಲ ಸಮುದಾಯದ, ಬಹುಸಂಖ್ಯಾತ ಜನರು ಎದುರಿಸುತ್ತಿದ್ದಾರೆ. ಹಿರಿಯರು ಜನನ ಪ್ರಮಾಣಪತ್ರಗಳನ್ನು ಹೊಂದಿಲ್ಲ. ಕಿರಿಯರೂ ಕೂಡ ಪ್ರಮಾಣಪತ್ರಗಳನ್ನು ಹೊಂದಿಲ್ಲ. ಮಾತ್ರವಲ್ಲ, ಇದ್ದರೂ ಸರಿಯಾದ ರೀತಿಯಲ್ಲಿಲ್ಲ. ಹೀಗಾಗಿ, ಎಸ್‌ಐಆರ್ ಮತ್ತು ಎನ್‌ಆರ್‌ಸಿಯಿಂದಾಗಿ ಬಹುಸಂಖ್ಯಾತ ಜನರು ಆತಂಕಕ್ಕೀಡಾಗಿದ್ದಾರೆ.

ಈ ಲೇಖನ ಓದಿದ್ದೀರಾ?: “ಕನ್ನಡನಾಡು ನನ್ನ ಪ್ರೀತಿಯ ನಾಡು” ಎಂದು ಇಡೀ ಜಗತ್ತಿಗೆ ಸಾರುತ್ತಾ ಬಂದ ಬಾನು ದಸರಾ ಉದ್ಘಾಟಿಸಿದರೆ ತಪ್ಪೇ!

ಈ ಸಂದಿಗ್ಧತೆಯನ್ನು ಬಳಸಿಕೊಂಡು ಹಲವರು ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಜನನ ಪ್ರಮಾಣಪತ್ರ ಮಾಡಿಸಿಕೊಡುವ ‘ಪ್ಯಾಕೇಜ್‌’ಗಳನ್ನು ನೀಡುವ ಮಧ್ಯವರ್ತಿಗಳು ಹೆಚ್ಚುತ್ತಿದ್ದಾರೆ. ಡಿಜಿಟಲೀಕರಣ ಮತ್ತು ಸಣ್ಣ ಸರಿಪಡಿಕೆಗಾಗಿ 1,000 ರಿಂದ 2,000 ರೂಪಾಯಿಗಳವರೆಗೆ ಹಣ ವಿಧಿಸುತ್ತಿದ್ದಾರೆ. ಅಂತೆಯೇ, ಗೆಜೆಟ್ ಅಧಿಸೂಚನೆ ಮೂಲಕ ನಡಯಬೇಕಾದ ತಿದ್ದುಪಡಿಗಳಿಗಾಗಿ 4,000 ರಿಂದ 5,000 ರೂಪಾಯಿಗಳವರೆಗೆ ವಸೂಲಿ ಮಾಡುತ್ತಿದ್ದಾರೆ.

ಮುರ್ಶಿದಾಬಾದ್‌ನ ಲಾಲ್‌ಗೋಲಾದ ಟಿಎಂಸಿ ಶಾಸಕ ಮೊಹಮ್ಮದ್ ಅಲಿ, “ಯಾವುದೇ ರಾಜಕೀಯ ಪಕ್ಷವು SIR ವಿರುದ್ಧವಾಗಿಲ್ಲ. ಇದು 2002ರಲ್ಲಿ ಬಂಗಾಳದಲ್ಲಿ ನಡೆದಿತ್ತು. ಆದರೆ, NRCಯನ್ನು ಹಿಂಬಾಗಿಲಿನಿಂದ ಜಾರಿಗೊಳಿಸಲು ಷಡ್ಯಂತ್ರ ನಡೆದಿದೆ. ಅದಕ್ಕಾಗಿಯೇ ಜನರು ಪಂಚಾಯತ್ ಕಚೇರಿಗಳಿಗೆ, ಪುರಸಭೆಗಳಿಗೆ ಮತ್ತು ನ್ಯಾಯಾಲಯಗಳಿಗೆ ಓಡಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಬೆರ್ಹಾಂಪೋರ್‌ ಮಾಜಿ ಲೋಕಸಭಾ ಸಂಸದ ಅಧಿರ್ ಚೌಧರಿ, “ರಾಜ್ಯ ಸರ್ಕಾರವು ಜಾಗೃತಿ ಅಭಿಯಾನ ನಡೆಸಿ, ಆಂತಕವನ್ನು ತಡೆಯಬಹುದು. ಆದರೆ, ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿಲ್ಲ. ಈ ಗಾಬರಿಯಿಂದ ಎರಡು ಪಕ್ಷಗಳು (ಟಿಎಂಸಿ – ಬಿಜೆಪಿ) ಲಾಭ ಪಡೆಯುತ್ತಿವೆ. 2021ರ ಚುನಾವಣೆಯಲ್ಲೂ, NRC ಭಯವನ್ನು ಸೃಷ್ಟಿಸಿ ಚುನಾವಣಾ ಲಾಭ ಪಡೆಯಲಾಗಿತ್ತು. ಈಗ, ಅಲ್ಪಸಂಖ್ಯಾತರಲ್ಲಿ ಭಯವನ್ನು ಸೃಷ್ಟಿಸಿ ಮತ್ತೆ ರಾಜಕೀಯ ಲಾಭವನ್ನು ಗಳಿಸಲು ಉದ್ದೇಶಿಸಲಾಗಿದೆ” ಎಂದು ಆರೋಪಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

Download Eedina App Android / iOS

X