ಸರ್ಕಾರದಿಂದ ಪರಿಹಾರ ಸಿಗುತ್ತದೆಯೆಂದು ವ್ಯಕ್ತಿಯೊಬ್ಬ ತನ್ನ ಜೀವಂತವಿದ್ದ ತಂದೆಗೆ ಶ್ರದ್ಧಾಂಜಲಿ ಏರ್ಪಡಿಸಿದ್ದ ಘಟನೆ ಹರಿಯಾಣದಲ್ಲಿ ನಡೆದಿದೆ. ಈ ಬಗ್ಗೆ ಸುದ್ದಿ ತಿಳಿದ ತಂದೆ ತನ್ನ ಗ್ರಾಮಕ್ಕೆ ದೌಡಾಯಿಸಿದ್ದಾರೆ.
ಹರಿಯಾಣದ ಫರಿದಾಬಾದ್ ಜಲ್ಲೆಯ ಪನ್ಹೇರಾ ಕಲಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸ್ವಾಮಿ ರಾಜೇಂದ್ರ ದೇವ್ ಮಹಾರಾಜ್ ಎಂಬಾತ ತನ್ನ ತಂದೆ ಲಾಲ್‌ಚಂದ್ ಅವರು ಜೀವಂತವಿದ್ದಾಗಲೇ ಶ್ರದ್ಧಾಂಜಲಿ ಕಾರ್ಯಕ್ರಮ ಏಪರ್ಡಿಸಿದ್ದನು. ಆದರೆ, ತಂದೆ ಮನೆಗೆ ಮರಳಿ ಬಂದ ಕಾರಣ, ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾನೆ.
ಸುಮಾರು 79 ವರ್ಷದ ಲಾಲ್‌ಚಂದ್ ಅವರು ಯಾವುದೋ ಕಾರಣಕ್ಕೆ ಗ್ರಾಮ ತೊರೆದಿದ್ದರು. ಆದರೆ, ಅವರು ಇತ್ತೀಚೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಮೃತಪಟ್ಟಿದ್ದಾರೆ ಎಂದು ರಾಜೇಂದ್ರ ದೇವ್ ಸುದ್ದಿ ಹರಡಿದ್ದನು. ಅಲ್ಲದೆ, ಆಗಸ್ಟ್ 3ರಂದು ಶ್ರದ್ಧಾಂಜಲಿ ಸಭೆಯನ್ನೂ ಆಯೋಜಿಸಿದ್ಧನು ಎಂದು ವರದಿಯಾಗಿದೆ.
ಮಹಾ ಕುಂಭಮೇಳದಲ್ಲಿ ಮೃತಪಟ್ಟವರಿಗೆ ಉತ್ತರ ಪ್ರದೇಶದ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಿತ್ತು. ಹೀಗಾಗಿ, ತನಗೂ ಪರಿಹಾರದ ಹಣ ದೊರೆಯುತ್ತದೆ ಎಂಬ ಆಸೆಗೆ ಬಿದ್ದ ರಾಜೇಂದ್ರ ದೇವ್, ತನ್ನ ತಂದೆ ಸತ್ತಿದ್ದಾರೆಂದು ಶ್ರದ್ಧಾಂಜಲಿ ಸಲ್ಲಿಸುವ ನಾಟಕವಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಲೇಖನ ಓದಿದ್ದೀರಾ?: ಬಿಹಾರದಲ್ಲಿ ಎದುರಾಳಿಗಳ ಕೈಕಾಲು ಕಟ್ಟಿ, ತಾನು ಗೆಲ್ಲುವುದು ಬಿಜೆಪಿ ಹುನ್ನಾರ
ರಾಜೇಂದ್ರ ಸಿಂಗ್ ತನ್ನ ತಂದೆಗೆ ಶ್ರದ್ಧಾಂಜಲಿ ಸಭೆ ಕರೆದು, ದಿನಾಂಕ, ಸ್ಥಳ, ಸಮಯದ ಮಾಹಿತಿಗಳುಳ್ಳ 50 ಪೋಸ್ಟರ್‌ಗಳನ್ನು ಗ್ರಾಮದ ಹಲವೆಡೆ ಅಂಟಿಸಿದ್ದರು. ಲಾಲ್‌ಚಂದ್ ನಿಜಕ್ಕೂ ಸಾವನ್ನಪ್ಪಿದ್ದಾರೆಂದು ಭಾವಿಸಿದ್ದ ಗ್ರಾಮಸ್ಥರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗಲು, ನೆರೆದಿದ್ದರು. ಶ್ರದ್ಧಾಂಜಲಿ ಸಭೆ ಆರಂಭವಾಗುವ ಸಮಯಕ್ಕೆ ಲಾಲ್‌ಚಂದ್ ಗ್ರಾಮಕ್ಕೆ ಬಂದಿದ್ದಾರೆ. ತನ್ನ ಪುತ್ರನ ದುರುದ್ದೇಶವನ್ನು ಗ್ರಾಮಸ್ಥರ ಎದುರು ಬಿಚ್ಚಿಟ್ಟಿದ್ದಾರೆ.
“ನನ್ನ ಪುತ್ರ ನನ್ನ ಆಸ್ತಿಯನ್ನು ಕಬಳಿಸಿದ್ದಾನೆ. ಮನೆಯಲ್ಲಿ ನನಗೆ ಊಟವನ್ನೂ ಕೂಡ ಕೊಡಲಿಲ್ಲ. ಪ್ರತಿ ದಿನ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದನು. ನನ್ನನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿದ್ದನು. ಹೀಗಾಗಿ, ನಾನು ಊರು ತೊರೆದು ನನ್ನ ಸಹೋದರನ ಮನೆಯಲ್ಲಿ ನೆಲೆಸಿದ್ದೆ” ಎಂದು ಲಾಲ್‌ಚಂದ್ ಹೇಳಿಕೊಂಡಿದ್ದಾರೆ.