ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ ಲಡಾಖ್ (HIAL) ಸಂಸ್ಥೆಯ ಭೂಮಿ ಗುತ್ತಿಗೆ ಪ್ರಕ್ರಿಯೆಯಲ್ಲಿ ಲಡಾಖ್ ಆಡಳಿತವು ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಪ್ರಸಿದ್ಧ ಶಿಕ್ಷಣ ತಜ್ಞ ಮತ್ತು ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಗಂಭೀರ ಆರೋಪ ಮಾಡಿದ್ದಾರೆ.
ಗುತ್ತಿಗೆ ಪತ್ರ ಜಾರಿಗೆ ತರಲು ತಾವೂ ಮತ್ತು ತಮ್ಮ ಸಂಸ್ಥೆಯು ನಿರಂತರವಾಗಿ ಶ್ರಮಿಸಿದ್ದರೂ ಆಡಳಿತ ಯಂತ್ರವು ನಿರ್ಲಕ್ಷ್ಯ ವಹಿಸಿದೆ ಎಂದು ಸೋನಮ್ ವಾಂಗ್‌ಚುಕ್ ತಿಳಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಭೂಮಿ ಗುತ್ತಿಗೆ ಪ್ರಕ್ರಿಯೆಯನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಆಡಳಿತ ಮಂಡಳಿಗೆ 5 ಲಿಖಿತ ಮನವಿಗಳು, 15 ಬಾರಿ ಪ್ರತ್ಯಕ್ಷ ಭೇಟಿ ಮತ್ತು 30ಕ್ಕೂ ಹೆಚ್ಚು ದೂರವಾಣಿ ಕರೆಗಳನ್ನು ಮಾಡಲಾಗಿತ್ತು” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸೋನಮ್ ವಾಂಗ್‌ಚುಕ್ ಆರೋಗ್ಯ ಗಂಭೀರ: ಇಂದು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ
ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಲಡಾಖ್ ಆಡಳಿತ ಮಂಡಳಿಯು HIAL ಭೂ ಹಂಚಿಕೆ ರದ್ದುಗೊಳಿಸಿರುವುದನ್ನು ಸಮರ್ಥಿಸಿಕೊಂಡು ಅಫಿಡವಿಟ್ ಸಲ್ಲಿಸಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ HIAL ಪ್ರತಿನಿಧಿಗಳು, ಆಡಳಿತ ಮಂಡಳಿಯು ಹಳೆಯ ಪ್ರಕರಣಗಳನ್ನು ಎತ್ತಿಹಿಡಿದು ಸುಳ್ಳು ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
“2007ರ ಹಳೆಯ ಪ್ರಕರಣಗಳಲ್ಲಿ ಕೋರ್ಟ್ ಈಗಾಗಲೇ ನಮಗೆ ಖುಲಾಸೆ ಸನೀಡಿದೆ. ನ್ಯಾಯಾಲಯದಿಂದ ತೀರ್ಪು ಬಂದಿರುವ ವಿಚಾರಗಳನ್ನು ಆಡಳಿತ ಮಂಡಳಿಯು ಮತ್ತೆ ಮತ್ತೆ ಪ್ರಸ್ತಾಪಿಸುತ್ತಿರುವುದು ಅನ್ಯಾಯ. ಲಡಾಖ್‌ನ ಹಿತಾಸಕ್ತಿ ಮತ್ತು ಅನ್ಯಾಯದ ವಿರುದ್ಧ ದನಿ ಎತ್ತಿದಾಗಲೆಲ್ಲಾ ಸರ್ಕಾರಿ ಯಂತ್ರವನ್ನು ಬಳಸಿ ನಮ್ಮ ಸಂಸ್ಥೆಯನ್ನು ಗುರಿಯಾಗಿಸಲಾಗುತ್ತಿದೆ” ಎಂದು ಸೋನಮ್ ವಾಂಗ್‌ಚುಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.





