ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಶಿಕ್ಷಣ ತಜ್ಞ, ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ತಾವು ಉಪವಾಸವನ್ನು ಕೈಬಿಡಲು 3 ಷರತ್ತುಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ತಮ್ಮ ಮೂರು ಷರತ್ತುಗಳನ್ನು ಈಡೇರಿಸಿದರೆ ಮಾತ್ರ ಇಂದು ಉಪವಾಸವನ್ನು ಅಂತ್ಯಗೊಳಿಸುವುದಾಗಿ ತಿಳಿಸಿದ್ದಾರೆ.
ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ತಮ್ಮನ್ನು ‘ಅಕ್ರಮವಾಗಿ ವಶಕ್ಕೆ ಪಡೆಯಲಾಗಿದೆ’ ಎಂದು ಅವರು ಬರೆದಿರುವ ಹಸ್ತಪ್ರತಿ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಾಂಗ್ಚುಕ್ ಅವರ 3 ಷರತ್ತುಗಳು:
1. ಶಿಕ್ಷಣ ವ್ಯವಸ್ಥೆಯ ವೈಫಲ್ಯಗಳು, ವಿಶೇಷವಾಗಿ ಇತ್ತೀಚಿನ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆಯನ್ನು ಸರ್ಕಾರ ಹೊರಬೇಕು.
2. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ರಾಜಕೀಯ ನಾಯಕರು ಭರವಸೆ ನೀಡಬೇಕು.
3. ಆರೋಗ್ಯದ ಕಾರಣಗಳಿಂದ ಇಂದು ನಡೆಯಲಿರುವ ಸಂಸತ್ ಚಲೋ ಮಾರ್ಚ್‌ನಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಹಿರಿಯ ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಈ ಮೇಲಿನ ಎರಡು ಷರತ್ತುಗಳ ಈಡೇರಿಕೆಯ ಭರವಸೆ ನೀಡಬೇಕು.
ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಗೆ ಒತ್ತಾಯಿಸಿ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನೆ ಆರಂಭಿಸಿತ್ತು. ಆ ಪ್ರತಿಭಟನೆಯಲ್ಲಿ ಭಾಗಿಯಾದ ವಾಂಗ್ಚುಕ್ ಜೂನ್ 28ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಅವರ ಆರೋಗ್ಯ ಬಿಗಡಾಯಿಸಿ, ಅಂಗಾಂಗಗಳ ವೈಫಲ್ಯದ ಭೀತಿ ಎದುರಾದ ಹಿನ್ನೆಲೆಯಲ್ಲಿ, ದೆಹಲಿ ಹೈಕೋರ್ಟ್ ನಿರ್ದೇಶನದಂತೆ ಪೊಲೀಸರು ವಾಂಗ್ಚುಕ್ ಅವರನ್ನು ಬಲವಂತವಾಗಿ ಹೊತ್ತೊಯ್ದು ಸಫ್ದರ್‌ಜಂಗ್ ಆಸ್ಪತ್ರೆಗೆ ಸೇರಿಸಿದ್ದಾರೆ.




