ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ತಿಂಗಳು ಇಲ್ಲಿನ ರಾಮಲೀಲಾ ಮೈದಾನದಲ್ಲಿ ನಡೆಸಿದ್ದ ರ‍್ಯಾಲಿಯ ನಂತರ ವೇದಿಕೆಯನ್ನು ‘ಶುದ್ಧೀಕರಣ’ ಮಾಡಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಹಲ್ದ್ವಾನಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಹಿರಿಯ ವಕೀಲೆ ಅಂಜು ಅವರು ನೀಡಿದ ದೂರಿನ ಆಧಾರದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಹಲ್ದ್ವಾನಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196 ಮತ್ತು 299, ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(r) ಅಡಿಯಲ್ಲಿ ಪೊಲೀಸರು ಮೊಕದ್ದಮೆ ಹೂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೈನಿತಾಲ್ ಜಿಲ್ಲೆಯೊಂದರಲ್ಲೇ 19 ದೂರುಗಳು ಸೇರಿದಂತೆ ರಾಜ್ಯದಾದ್ಯಂತ ಒಟ್ಟು 80 ದೂರುಗಳು ಮತ್ತು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೂರಿನ ಪ್ರಕಾರ, ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ ಅದೇ ರಾಮಲೀಲಾ ಮೈದಾನದಲ್ಲಿ ಕೆಲವರು ‘ಶುದ್ಧೀಕರಣ’ ಆಚರಣೆ ನಡೆಸಿದ್ದರು. ಈ ಕೃತ್ಯವು ಜಾತಿ ಆಧಾರಿತ ಪೂರ್ವಾಗ್ರಹ, ಸಾಮಾಜಿಕ ತಿರಸ್ಕಾರ ಮತ್ತು ಪರಿಶಿಷ್ಟ ಜಾತಿ ಸಮುದಾಯದವರ ಬಗ್ಗೆ ಇರುವ ದ್ವೇಷ ಹಾಗೂ ಕೀಳರಿಮೆಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಘಟನೆಯ ತನಿಖೆಯನ್ನು ಪೊಲೀಸ್ ವರಿಷ್ಠಾಧಿಕಾರಿ (ಅಪರಾಧ) ಡಾ. ಜಗದೀಶ್ ಚಂದ್ರ ಅವರಿಗೆ ವಹಿಸಲಾಗಿದೆ. ತನಿಖಾಧಿಕಾರಿಗಳು ಆಪಾದಿತ ಘಟನೆಯ ವಿಡಿಯೊಗಳು, ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು ಮತ್ತು ಇತರ ಡಿಜಿಟಲ್ ಹಾಗೂ ಭೌತಿಕ ಸಾಕ್ಷ್ಯಗಳನ್ನು ಪರಿಶೀಲಿಸಲಿದ್ದಾರೆ. ಅಲ್ಲದೆ, ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾದವರನ್ನು ಪತ್ತೆಹಚ್ಚಿ, ಇದು ಯಾವುದಾದರೂ ಗುಂಪು ಅಥವಾ ವ್ಯಕ್ತಿಯಿಂದ ಪ್ರೇರಿತವಾಗಿದೆಯೇ ಎಂಬುದನ್ನು ನಿರ್ಣಯಿಸಲಿದ್ದಾರೆ. ಶೀಘ್ರದಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಲ್ದ್ವಾನಿಗೆ ಭೇಟಿ ನೀಡಲಿರುವ ಬೆನ್ನಲ್ಲೇ ಈ ಎಫ್‌ಐಆರ್ ದಾಖಲಾಗಿರುವುದು, ಕಾಂಗ್ರೆಸ್ ನಾಯಕರ ಸತತ ಪ್ರತಿಭಟನೆ ಹಾಗೂ ರಾಜಕೀಯ ವಿವಾದಕ್ಕೆ ಇದೀಗ ಕಾನೂನಿನ ಆಯಾಮವನ್ನು ನೀಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ದೂರುದಾರರಾದ ಅಂಜು, “ಖರ್ಗೆ ಅವರ ರ‍್ಯಾಲಿಯ ನಂತರ ನಡೆದ ಈ ದ್ವೇಷಪೂರಿತ ಕೃತ್ಯದ ಕುರಿತು ನಾನು ಆಗಸ್ಟ್ 15 ರಂದೇ ದೂರು ನೀಡಿದ್ದೆ. ಪ್ರಾಥಮಿಕ ವಿಚಾರಣೆ ನಡೆಯುತ್ತಿದ್ದಾಗ ನಾನು ಮೌನವಾಗಿದ್ದೆ. ಆದರೆ, ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಚಾರ ತಿಳಿದಾಗ, ನಾನು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಠಾಣೆಯಲ್ಲೇ ನಾಲ್ಕು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದೆ. ಒಂದು ವಾರದೊಳಗೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು, ಅದರಂತೆ ಇದೀಗ ಎಫ್‌ಐಆರ್ ದಾಖಲಾಗಿದೆ” ಎಂದು ವಿವರಿಸಿದರು.
”ನಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಕೇವಲ ಖರ್ಗೆ ಅವರ ಭಾಷಣವನ್ನು ಕೇಳಲು ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ಕೆಲವು ಕಿಡಿಗೇಡಿಗಳು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ವಿಡಿಯೊವನ್ನು ತಿರುಚಿದ್ದಾರೆ ಮತ್ತು ಅದರಲ್ಲಿ ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳನ್ನು ಸೇರಿಸಿದ್ದಾರೆ. ಕಾರ್ಯಕ್ರಮದಲ್ಲಿ ಅಂತಹ ಯಾವುದೇ ಘೋಷಣೆಗಳನ್ನು ಕೂಗಿಲ್ಲ, ನಾನು ಖುದ್ದಾಗಿ ಅಲ್ಲಿಯೇ ಹಾಜರಿದ್ದೆ. ನಮ್ಮ ಸಂವಿಧಾನವು ಸಮಾನತೆ ಮತ್ತು ನ್ಯಾಯವನ್ನು ಒದಗಿಸುತ್ತದೆ. ಖರ್ಗೆ ಅವರಿಗೆ ಮಾಡಿದ ಅಪಮಾನವು ನಮ್ಮ ಇಡೀ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಒಂದು ವೇಳೆ ತನಿಖೆಯಿಂದ ಸತ್ಯಾಂಶ ಹೊರಬರದಿದ್ದರೆ ನಾನು ಮತ್ತೆ ನ್ಯಾಯಾಲಯದ ಮೊರೆ ಹೋಗುತ್ತೇನೆ” ಎಂದು ಅಂಜು ಎಚ್ಚರಿಸಿದ್ದಾರೆ. ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಕೃತ್ಯಕ್ಕೆ ಕಾರಣರಾದವರನ್ನು ಗುರುತಿಸಿದ ನಂತರ ಮುಂದಿನ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.





