‘ಮಹಿಳಾ ಸುರಕ್ಷತೆ’ ಕುರಿತು ಗುಜರಾತ್ ಪೊಲೀಸರು ಪೋಸ್ಟರ್‌ಗಳನ್ನು ಹಾಕಿದ್ದು, ಅವರ ಪೋಸ್ಟರ್ ವಿವಾದಕ್ಕೆ ಗುರಿಯಾಗಿದೆ. ಮಹಿಳಾ ಪರ ಹೋರಾಟಗಾರರನ್ನು ಆಕ್ರೋಶಗೊಳಿಸಿದೆ. ವಿವಾದಾತ್ಮಕ ಪೋಸ್ಟ್ ಹಾಕಿರುವ ಪೊಲೀಸರ ವಿರುದ್ಧ ಮಹಿಳೆಯರು ಮತ್ತು ಮಹಿಳಾ ಪರ ಹೋರಾಟ ಕಿಡಿಕಾರಿದ್ದಾರೆ.
ಗುಜರಾತ್‌ನ ಅಹಮದಾಬಾದ್ ನಗರದ ಸೋಲಾ ಮತ್ತು ಚಂದ್ಲೋಡಿಯಾ ಪ್ರದೇಶಗಳಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಸಂಚಾರಿ ಪೊಲೀಸರು ಪೋಸ್ಟರ್ ಅಂಟಿಸಿದ್ದಾರೆ. ಪೋಸ್ಟರ್‌ನಲ್ಲಿ ಪ್ರಾಯೋಜಕರು ಅಹಮದಾಬಾದ್ ಪೊಲೀಸರು ಎಂದು ಉಲ್ಲೇಖಿಸಿದ್ದಾರೆ.
ಪೋಸ್ಟರ್‌ನಲ್ಲಿ; ‘ತಡರಾತ್ರಿ ಪಾರ್ಟಿಗಳಿಗೆ ಹಾಜರಾಗುವುದು ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರಕ್ಕೆ ಆಹ್ವಾನ ನೀಡಬಹುದು’, ‘ನಿಮ್ಮ ಸ್ನೇಹಿತರನ್ನು ಕತ್ತಲೆ ಅಥವಾ ಪ್ರತ್ಯೇಕ ಪ್ರದೇಶಗಳಿಗೆ ಕರೆದೊಯ್ಯಬೇಡಿ’ ಎಂದು ಬರೆದಿದ್ದಾರೆ.
ಈ ಪೋಸ್ಟರ್‌ಗಳು ಮಹಿಳೆಯರನ್ನು ಪರೋಕ್ಷವಾಗಿ ದೂಷಿಸುತ್ತಿವೆ. ಅತ್ಯಾಚಾರ ಕೃತ್ಯಗಳಿಗೆ ಮಹಿಳೆಯರನ್ನೇ ಹೊಣೆಯಾಗಿಸಲು ಪೊಲೀಸರು ಮುಂದಾಗಿದ್ದಾರೆ. ಇವು ಪೊಲೀಸರ ಅಸಭ್ಯತೆಯನ್ನು ಸೂಚಿಸುತ್ತವೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಪೊಲೀಸರು ಹಾಕಿರುವ ಪೋಸ್ಟರ್‌ಗಳ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ, ಪೋಸ್ಟರ್‌ಗಳನ್ನು ತೆಗದುಹಾಕಲಾಗಿದೆ ಎಂದು ಎಸಿಪಿ ಶೈಲೇಶ್ ಮೋದಿ ತಿಳಿಸಿದ್ದಾರೆ.