ಬಾಲಿವುಡ್ ನಟಿ ರಾಖಿ ಸಾವಂತ್ಗೆ ಮತ್ತೊಮ್ಮೆ ಕಾನೂನು ಸಂಕಷ್ಟ ಎದುರಾಗಿದೆ. 2010ರ ಹಳೆ ಆತ್ಮಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಝಾನ್ಸಿ ನ್ಯಾಯಾಲಯವು ನಟಿ ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ. ವಿಚಾರಣೆಗೆ ಪದೇ ಪದೇ ಗೈರುಹಾಜರಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕಠಿಣ ಕ್ರಮ ಕೈಗೊಂಡಿದೆ.
2010ರಲ್ಲಿ ರಾಖಿ ಸಾವಂತ್ ನಡೆಸಿಕೊಡುತ್ತಿದ್ದ ಜನಪ್ರಿಯ ರಿಯಾಲಿಟಿ ಟಿವಿ ಶೋ ‘ರಾಖಿ ಕಾ ಇನ್ಸಾಫ್’ ಕಾರ್ಯಕ್ರಮಕ್ಕೆ ಝಾನ್ಸಿಯ ಹನ್ಸಾರಿ ಪ್ರೇಮ್ನಗರ ನಿವಾಸಿ ಲಕ್ಷ್ಮಣ್ ಅಹಿರವಾರ್ ಮತ್ತು ಅವರ ಪತ್ನಿ ಅನಿತಾ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭಾಗವಹಿಸಿದ್ದರು. ಶೋ ವೇಳೆ ರಾಖಿ ಸಾವಂತ್ ನೀಡಿದ ಆಕ್ಷೇಪಾರ್ಹ ಹೇಳಿಕೆಗಳು ಮತ್ತು ಅವಮಾನದಿಂದ ಮನನೊಂದಿದ್ದ ಲಕ್ಷ್ಮಣ್ ಅಹಿರವಾರ್, ಅದೇ ವರ್ಷ ನವೆಂಬರ್ 10ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ‘ನಿಮ್ಮ ಬಾಯ್ಫ್ರೆಂಡ್ಗೆ ರಾಜೀನಾಮೆ ಕೊಡಲು ಹೇಳಿ’; ಮೆಲೋನಿ ಪೋಸ್ಟ್ಗೆ ರಾಖಿ ಸಾವಂತ್ ಕಾಮೆಂಟ್ ವೈರಲ್
ಈ ಸಂಬಂಧ ಪ್ರೇಮ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆದರೆ ಕೋರ್ಟ್ ವಿಚಾರಣೆಗೆ ರಾಖಿ ಸಾವಂತ್ ನಿರಂತರವಾಗಿ ಹಾಜರಾಗಲು ವಿಫಲರಾದ ಕಾರಣ, ಸಿವಿಲ್ ಜಡ್ಜ್ (ಜೂನಿಯರ್ ಡಿವಿಷನ್) ಅಂಜಲಿ ಅವರ ನೇತೃತ್ವದ ನ್ಯಾಯಾಲಯವು ರಾಖಿ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಅಲ್ಲದೆ, ನಟಿಯನ್ನು ಬಂಧಿಸಿ ಡಿಸೆಂಬರ್ 1ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶಿಸಲಾಗಿದೆ.





