ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉತ್ಸವದ ಉದ್ಘಾಟನೆ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದೆ.
ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ನಾಲ್ಕು ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಭು ಭಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ ಜೋಶಿ ಅವರಿದ್ದ ಪೀಠವು ನಾಲ್ಕೂ ಅರ್ಜಿಗಳ ವಿಚಾರಣೆ ನಡೆಸಲು ನಿರಾಕರಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.
ವಜಾಗೊಂಡ ಅರ್ಜಿಗಳಲ್ಲಿ ಮೈಸೂರಿನ ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಸಲ್ಲಿಸಿದ ಅರ್ಜಿಯೂ ಸೇರಿದೆ. ಅರ್ಜಿದಾರರು ಯಾವುದೇ ಸಾಂವಿಧಾನಿಕ ಅಥವಾ ಕಾನೂನು ಉಲ್ಲಂಘನೆಯನ್ನು ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಪೀಠವು ಅಭಿಪ್ರಾಯ ಪಟ್ಟಿದೆ.
ಇದನ್ನು ಓದಿದ್ದೀರಾ? ಬಾನು ಮುಷ್ತಾಕ್ ಆಹ್ವಾನ ಪ್ರಶ್ನಿಸಿದ್ದ ಅರ್ಜಿ ವಜಾ | ಸುಪ್ರೀಂ ತೀರ್ಪಿನಿಂದ ಸರ್ಕಾರದ ನಿಲುವಿಗೆ ಮನ್ನಣೆ: ಸಿದ್ದರಾಮಯ್ಯ
“ರಾಜ್ಯ ಸರ್ಕಾರವು ಆಯೋಜಿಸಿದ ಸಮಾರಂಭವನ್ನು ಬೇರೆ ಧರ್ಮದ ವ್ಯಕ್ತಿಯೊಬ್ಬರು ಉದ್ಘಾಟಿಸುವುದರಿಂದ ಕಾನೂನು ಅಥವಾ ಸಾಂವಿಧಾನಿಕ ಹಕ್ಕು ಅಥವಾ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಯಾವುದೇ ಮೌಲ್ಯಗಳ ಉಲ್ಲಂಘನೆಯಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಪೀಠವು ಹೇಳಿದೆ.