2020-2021ರಲ್ಲಿ ದೆಹಲಿ ಗಡಿಯಲ್ಲಿ ನಡೆದ ದೀರ್ಘಕಾಲದ ರೈತ ಹೋರಾಟದ ಕುರಿತು ವಿವಾದಾತ್ಮಕ ಪೋಸ್ಟ್ ಹಾಕಿದ್ದ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ದೆಹಲಿ ಗಡಿಯಲ್ಲಿ ನಡೆದ ರೈತ ಹೋರಾಟಗಳಲ್ಲಿ ಮಹಿಳೆಯರು ಪಾಲ್ಗೊಂಡಿದ್ದ ಬಗ್ಗೆ ಕಂಗನಾ 2021ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ, “ಈ ಅಜ್ಜಿ ಟೈಮ್ ನಿಯತಕಾಲಿಕದಲ್ಲಿ ಕಾಣಿಸಿದ್ದ ಅದೇ ಬಲಿಷ್ಠ ಭಾರತೀಯಳು. ಇವರು 100 ರೂ.ಗೆ ದೊರೆಯುತ್ತಾರೆ” ಎಂದು ಬರೆಯಲಾಗಿತ್ತು. ಈ ಪೋಸ್ಟ್ ಹಾಕಿದ್ದಕ್ಕಾಗಿ ಕಂಗನಾ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಾಗಿತ್ತು. ತಮ್ಮ ವಿರುದ್ಧದ ಪ್ರರಕಣವನ್ನು ರದ್ದುಗೊಳಿಸುವಂತೆ ಕೋರಿ ಕಂಗನಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಸಿದ್ದರು.
ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ದ್ವಿಸದಸ್ಯ ಪೀಠವು, ಅವರ ಅರ್ಜಿಯನ್ನು ತಿರಸ್ಕರಿಸಿದೆ. ಪ್ರಕರಣ ವಜಾಗೊಳಿಸಲು ನಿರಾಕರಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ (ಕಂಗನಾ) ವಾದವನ್ನು ಆಲಿಸಿದ ನ್ಯಾಯಮೂರ್ತಿ ಮೆಹ್ತಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಿಮ್ಮ ಹೇಳಿಕೆಗಳ ವಿಚಾರವಾಗಿ ನೀವು ಏನು ಹೇಳುವಿರಿ? ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಕುರಿತು ನೀವು ಹಂಚಿಕೊಂಡಿದ್ದ ಪೋಸ್ಟ್, ಕೇವಲ ರೀ-ಟ್ವೀಟ್ ಮಾತ್ರವಲ್ಲ. ಅದರಲ್ಲಿ ನಿಮ್ಮದೇ ಆದ ಹೇಳಿಕೆಗಳನ್ನು ಕೂಡ ಸೇರಿಸಿದ್ದೀರಿ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ವಾದ ಮಂಡಿಸಿದ ಕಂಗನಾ ಪರ ವಕೀಲರು, “ಕಂಗನಾ ಅವರು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ” ಎಂದು ಹೇಳಿದರು. ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಮೆಹ್ತಾ, “ಅವರ ಸ್ಪಸ್ಟೀಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಒದಗಿಸಹುದು” ಎಂದು ಹೇಳಿದ್ದಾರೆ.
2021ರಲ್ಲಿ ನಡೆದಿದ್ದ ರೈತರ ಪ್ರತಿಭಟನೆಯ ಕುರಿತು ರೀಟ್ವೀಟ್ ಮಾಡಿದ್ದ ಕಂಗನಾ ರಣಾವತ್, ಎಂದು ಹಿರಿಯ ಪ್ರತಿಭಟನಾಕಾರರಾಗಿದ್ದ ಪ್ರತಿವಾದಿ ಮಹಿಂದರ್ ಕೌರ್ ವಿರುದ್ಧ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ಮಹಿಂದರ್ ಕೌರ್ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.