ಜಾಮೀನು ಮತ್ತು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಕೆಯಾದ ಎರಡು ತಿಂಗಳುಗಳೊಳಗೆ ಅವುಗಳನ್ನು ವಿಲೇವಾರಿ ಮಾಡಬೇಕು ಅಥವಾ ಅವುಗಳ ವಿಚಾರದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಮಹಾರಾಷ್ಟ್ರದ ಇಬ್ಬರು ಕಂದಾಯ ಅಧಿಕಾರಿಗಳ ವಿರುದ್ಧ ಆಸ್ತಿ ದಾಖಲೆಗಳಲ್ಲಿ ವಂಚನೆ ಮತ್ತು ಫೋರ್ಜರಿ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ತಮ್ಮ ವಿರುದ್ಧದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್ ತೀರ್ಪುನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು.
ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ ಮತ್ತು ಆರ್.ಮಹಾದೇವನ್ ಅವರಿದ್ದ ಪೀಠವು ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಇದೇ ಸಮಯದಲ್ಲಿ, ನ್ಯಾಯಾಲಯಗಳಲ್ಲಿ ಹೆಚ್ಚಾಗಿ ಜಾಮೀನು ಅರ್ಜಿಗಳು ಬಾಕಿ ಉಳಿಯುತ್ತಿರುವ ಬಗ್ಗೆ ಗಮನಿಸಿದೆ.
“ಅರ್ಜಿದಾರರ ವಿರುದ್ಧದ ಗಂಭೀರ ಆರೋಪಗಳನ್ನು ಪರಿಗಣಿಸಿ ಕಸ್ಟಡಿ ವಿಚಾರಣೆಯ ಅಗತ್ಯವಿದೆ ಎಂಬುದು ಎದ್ದು ಕಾಣುತ್ತದೆ. ಆದರೂ, ಅವರ ಅರ್ಜಿಗಳನ್ನು ನಿಧರಿಸುವಲ್ಲಿ ನ್ಯಾಯಾಲಯದ ವಿಳಂಬವು ಸಮರ್ಥನೀಯವಲ್ಲ” ಎಂದು ಕೋರ್ಟ್ ಹೇಳಿದೆ.
ಈ ಲೇಖನ ಓದಿದ್ದೀರಾ?: ಮೋದಿ-ಕ್ಸಿ-ಪುಟಿನ್ ಭೇಟಿ: ಅಮೆರಿಕ ವಿರುದ್ಧ ಪ್ರಬಲ ಗುಂಪು ರಚನೆ ಸಾಧ್ಯವೇ?
“ಜಾಮೀನು ಅರ್ಜಿಗಳ ವಿಚಾರಣೆ ಮತ್ತು ವಿಲೇವಾರಿಯಲ್ಲಿನ ವಿಳಂಬವು ಸರಿಯಾದ ಪ್ರಕ್ರಿಯೆಯಲ್ಲ. ಇದು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಧಕ್ಕೆಯುಂಟುಮಾಡುತ್ತದೆ” ಎಂದು ವೈಯಕ್ತಿಕ ಸ್ವಾತಂತ್ರ್ಯದ ಸಾಂವಿಧಾನಿಕ ಮಹತ್ವವನ್ನು ಒತ್ತಿ ಹೇಳಿದೆ.
“ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ ವಿಲೇವಾರಿಯಲ್ಲಿ ಸುದೀರ್ಘ ವಿಳಂಬವು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಉದ್ದೇಶವನ್ನು ವಿಫಲಗೊಳಿಸುತ್ತದೆ. ಕಕ್ಷಿದಾರರಿಂದಲೇ ವಿಳಂಬವಾಗುವ ಅರ್ಜಿಗಳನ್ನು ಹೊರತುಪಡಿಸಿ ಉಳಿದೆಲ್ಲ ಅರ್ಜಿಗಳನ್ನು ಸಲ್ಲಿಕೆಯಾದ ಎರಡು ತಿಂಗಳೊಳಗೆ ನಿರ್ಧರಿಸಬೇಕು” ಎಂದು ಹೇಳಿದೆ.