ಚುನಾವಣಾ ಆಯೋಗವು ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ(SIR) ನಡೆಸಿದ್ದು ಪ್ರಕ್ರಿಯೆ ಬಳಿಕ ಮತದಾರರ ಪಟ್ಟಿಯಿಂದ 65 ಲಕ್ಷ ಮತದಾರರನ್ನು ಹೊರಗಿಡಲಾಗುವುದು ಎಂದು ಹೇಳಿದೆ. ಈ ಕುರಿತು ಸಾರ್ವಜನಿಕವಾಗಿ ಆತಂಕ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸುತ್ತದೆ ಎಂದು ಮಂಗಳವಾರ ಮೌಖಿಕವಾಗಿ ಹೇಳಿದೆ. ಹಾಗೆಯೇ ಆಗಸ್ಟ್ 12ರಿಂದ ಸಂಬಂಧಿತ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಬಿಹಾರ ಎಸ್‌ಐಆರ್ ಅನ್ನು ಪ್ರಶ್ನಿಸುವ ಅರ್ಜಿಗಳನ್ನು ಆಗಸ್ಟ್ 12 ಮತ್ತು 13ರಂದು ವಿಚಾರಣೆಗೆ ಲೀಸ್ಟ್ ಮಾಡಿದೆ.
ಇದನ್ನು ಓದಿದ್ದೀರಾ? ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: 64 ಲಕ್ಷಕ್ಕೂ ಅಧಿಕ ಮತದಾರರ ಹೆಸರು ‘ಡಿಲೀಟ್’
ಇನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್, “ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ 65 ಲಕ್ಷ ಜನರು ಗಣತಿ ನಮೂನೆಗಳನ್ನು ಸಲ್ಲಿಸಿಲ್ಲ. ಇಷ್ಟು ಜನರು ಮೃತಪಟ್ಟಿದ್ದಾರೆ ಅಥವಾ ಶಾಶ್ವತವಾಗಿ ಬೇರೆಡೆಗೆ ವಲಸೆ ಹೋಗಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿಕೊಂಡಿದೆ. ಇವರುಗಳು ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ” ಎಂದು ಪೀಠಕ್ಕೆ ತಿಳಿಸಿದರು.
ಭಾರತದ ಚುನಾವಣಾ ಆಯೋಗವು ಸಾಂವಿಧಾನಿಕ ಪ್ರಾಧಿಕಾರವಾಗಿರುವುದರಿಂದ, ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತದೆಯೇ ಎಂದು ಪರಿಗಣಿಸಲಾಗುವುದು. ಆದ್ದರಿಂದ ಈ ಸಂಬಂಧಿತ ಅರ್ಜಿಯನ್ನು ಆಲಿಸಲಾಗುವುದು. “ನಾವು ಇಲ್ಲಿದ್ದೇವೆ, ನಾವು ನಿಮ್ಮ ಮಾತನ್ನು ಆಲಿಸುತ್ತೇವೆ” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಭರವಸೆ ನೀಡಿದರು.
“ಎಸ್‌ಐಆರ್ ಇಲ್ಲದಿದ್ದರೆ ಜನವರಿ 2025 ಪಟ್ಟಿಯು ಆರಂಭಿಕ ಹಂತ. ಕರಡು ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸುತ್ತದೆ. ನಿಮ್ಮ ಆತಂಕವೆಂದರೆ 65 ಲಕ್ಷ ಮತದಾರರು ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು. ಚುನಾವಣಾ ಆಯೋಗದವರು ತಿದ್ದುಪಡಿಯನ್ನು ಬಯಸುತ್ತಿದ್ದಾರೆ. ನಾವು ನ್ಯಾಯಾಂಗ ಪ್ರಾಧಿಕಾರವಾಗಿ ವಿಷಯವನ್ನು ಪರಿಶೀಲಿಸುತ್ತಿದ್ದೇವೆ. ಸಾಮೂಹಿಕ ಹೊರಗಿಡುವಿಕೆ ಇದ್ದರೆ, ನಾವು ತಕ್ಷಣ ಮಧ್ಯಪ್ರವೇಶಿಸುತ್ತೇವೆ. ಜೀವಂತವಾಗಿದ್ದಾರೆ ಆದರೆ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂಬ 15 ಜನರನ್ನು ಕೋರ್ಟ್‌ಗೆ ಕರೆತನ್ನಿ” ಎಂದು ಕೋರ್ಟ್ ಹೇಳಿದೆ.
