17 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಸ್ವಾಮಿ ಚೈತನ್ಯಾನಂದ ಅಲಿಯಾಸ್ ಪಾರ್ಥಸಾರಥಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವಾರು ದಿನಗಳಿಂದ ತಲೆ ಮರೆಸಿಕೊಂಡು, ಪದೇ-ಪದೇ ಸ್ಥಾಳ ಬದಲಿಸುತ್ತಿದ್ದ ಆರೋಪಿ ಪಾರ್ಥಸಾರಥಿಯನ್ನು ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಳೆದ 50 ದಿನಗಳಿಂದ ಪರಾರಿಯಾಗಿದ್ದ ಸ್ವಾಮಿಯನ್ನು ತಾಜ್‌ಗಂಜ್ ಪ್ರದೇಶದ ಹೋಟೆಲ್‌ನಲ್ಲಿ ಭಾನುವಾರ ಮುಂಜಾನೆ 3.30ಕ್ಕೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪಾರ್ಥಸಾರಥಿ ದೆಹಲಿಯ ವಸಂತ ಕುಂಜ್ ಪ್ರದೇಶದಲ್ಲಿರುವ ಖಾಸಗಿ ಎಂಜಿನಿಯರಿಂಗ್ ಸಂಸ್ಥೆ ‘ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್’ನ ವ್ಯವಸ್ಥಾಪಕನಾಗಿದ್ದಾರೆ. ಕಾಲೇಜಿನಲ್ಲಿ ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದ ಅಡಿಯಲ್ಲಿ ‘ಸ್ನಾತಕೋತ್ತರ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್’ (ಪಿಜಿಡಿಎಂ) ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ಆತ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆತನ ವಿರುದ್ಧ ಇತ್ತೀಚೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆತನ ಕಾಮಕೃತ್ಯಗಳಿಗೆ ಸುಮಾರು 12ರಿಂದ 17 ವಿದ್ಯಾರ್ಥಿನಿಯರು ತುತ್ತಾಗಿದ್ದಾರೆ ಎಂದು ಹೇಳಲಾಗಿದೆ.
ಆರೋಪಿ ವಿರುದ್ಧ ಶೃಂಗೇರಿ ಮಠ ಮತ್ತು ಮಠದ ಆಸ್ತಿಗಳ ಆಡಳಿತಾಧಿಕಾರಿ ಪಿ.ಎ ಮುರಳಿ ಅವರು 2025ರ ಆಗಸ್ಟ್ 4ರಂದು ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಮೊದಲ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಬಿಎನ್‌ಎಸ್ ಸೆಕ್ಷನ್ 75(2), 79 ಮತ್ತು 351(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಈ ಲೇಖನ ಓದಿದ್ದೀರಾ?: ಬಿಹಾರದ ಭೂಮಿ ಲೂಟಿ: ಅದಾನಿ ಸಾಮ್ರಾಜ್ಯದ ವಿಸ್ತರಣೆಯಲ್ಲಿ ಮೋದಿ ಸರ್ಕಾರದ ನೇರ ಪಾತ್ರ
ತನಿಖೆ ಆರಂಭಗೊಂಡ ಬಳಿಕ, ಪಾರ್ಥಸಾರಥಿಯ ಕಿರುಕುಳ/ದೌರ್ಜನ್ಯ ಪ್ರಕರಣವು ಗಂಭೀರ ಸ್ವರೂಪವನ್ನು ಪಡೆದುಕೊಂಡಿತು. ಪೊಲೀಸರ ಎದುರು ಹೇಳಿಕೆ ದಾಖಲಿಸಿದ 32 ವಿದ್ಯಾರ್ಥಿನಿಯರಲ್ಲಿ 17 ಮಂದಿ ತಮಗೆ ಪಾರ್ಥಸಾರಥಿ ವಾಟ್ಸ್‌ಆ್ಯಪ್ ಮತ್ತು ಎಸ್‌ಎಂಎಸ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದರು. ಅಲ್ಲದೆ, ಅಸಭ್ಯವಾಗಿ ಮುಟ್ಟುತ್ತಿದ್ದರು ಎಂದು ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ.
ಆತನ ಬೇಡಿಕೆಯನ್ನು ಈಡೇರಿಸುವಂತೆ ಕೆಲವು ಅಧ್ಯಾಪಕರು ಮತ್ತು ಆಡಳಿತ ಸಿಬ್ಬಂದಿಗಳು ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದೂ ಕೆಲವು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಸಂಸ್ಥೆಯಿಂದ ಪಾರ್ಥಸಾರಥಿಯನ್ನು ವಜಾಗೊಳಿಸಿ, ಹೊರಹಾಕಿರುವ ಶಾರದಾ ಪೀಠವು, ಆತನ ಕೃತ್ಯಗಳಿಗೂ ಸಂಸ್ಥೆಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ. ಅಲ್ಲದೆ, ಆತನ ಕೃತ್ಯಗಳನ್ನು ‘ಕಾನೂನುಬಾಹಿರ, ಅನುಚಿತ ಮತ್ತು ಪೀಠದ ಹಿತಾಸಕ್ತಿಗಳಿಗೆ ಹಾನಿಕಾರಕ’ ಎಂದು ಹೇಳಿದೆ.