ಜವಳಿ ಕಾರ್ಖಾನೆಯೊಂದರ ಸಿಬ್ಬಂದಿಯ ವಸತಿ ಸಮುಚ್ಚಯದ ಒಳಚರಂಡಿಯನ್ನು ಸ್ವಚ್ಛಗೊಳಿಸುವಾಗ ವಿಷಾನಿಲ ಸೇವಿಸಿ ಇಬ್ಬರು ದಲಿತ ಕಾರ್ಮಿಕರು ಮೃತಪಟ್ಟಿರುವ ಘಟನೆ ಗುರುವಾರ ತಮಿಳುನಾಡಿನ ಅವದಿ ಗ್ರಾಮದಲ್ಲಿ ನಡೆದಿದೆ.
ವಸತಿ ಸಮುಚ್ಚಯದ ಒಳಚರಂಡಿಯನ್ನು ಸ್ವಚ್ಛಗೊಳಿಸಲು ಖಾಸಗಿ ಗುತ್ತಿಗೆದಾರರೊಬ್ಬರು ಕೆ.ಮೋಸಸ್ (40) ಹಾಗೂ ಸಿ.ದೇವನ್ (50) ಎಂಬ ಸ್ವಚ್ಛತಾ ಕೆಲಸಗಾರರನ್ನು ನೇಮಿಸಿದ್ದರು. ಆದರೆ, ಆ ಕೆಲಸಗಾರರಿಗೆ ಸುರಕ್ಷತಾ ಸಲಕರಣೆಗಳನ್ನು ಒದಗಿಸಲಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಗುತ್ತಿಗೆದಾರ ಹಾಗೂ ಮೇಲ್ವಿಚಾರಕನನ್ನು ಬಂಧಿಸಲಾಗಿದೆ.
ಒಳಚರಂಡಿಯನ್ನು ಪ್ರವೇಶಿಸಿದ ಕೂಡಲೇ ವಿಷಾನಿಲ ಸೇವಿಸಿರುವ ಮೋಸಸ್ ಪ್ರಜ್ಞಾಹೀನನಾಗಿದ್ದಾರೆ. ಅವರನ್ನು ರಕ್ಷಿಸಲು ಕೆಳಗಿಳಿದ ದೇವನ್ ಕೂಡಾ ವಿಷಾನಿಲವನ್ನು ಸೇವಿಸಿ ಒಳಚರಂಡಿಯಲ್ಲೇ ಪ್ರಜ್ಞಾಹೀನನಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಕೂಡಲೇ ಇತರ ಕೆಲಸಗಾರರು ಹಾಗೂ ದಾರಿಹೋಕರು ಈ ಕುರಿತು ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.
“ಅಗ್ನಿಶಾಮಕ ಸಿಬ್ಬಂದಿ ಆ ಇಬ್ಬರು ಕೆಲಸಗಾರರನ್ನು ಹೊರತೆಗೆದು, ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂದರ್ಭದಲ್ಲಿ ದೇವನ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ, ಒಳಚರಂಡಿಯಿಂದ ಹೊರತೆಗೆದಾಗಲೇ ಮೋಸಸ್ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ದೇವನ್ ಕೂಡಾ ಮೃತಪಟ್ಟಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಜಾಪ್ರಭುತ್ವ ಇಲ್ಲದ ರಾಷ್ಟ್ರಗಳಲ್ಲಿ ಇವೆಲ್ಲ ನಡೆಯಲು ಸಾಧ್ಯ: ಖರ್ಗೆ ಆಹ್ವಾನಿಸದ್ದಕ್ಕೆ ಕಾಂಗ್ರೆಸ್ ವಾಗ್ದಾಳಿ
1993ರಿಂದ ಇಲ್ಲಿಯವರೆಗೆ ಭಾರತದಾದ್ಯಂತ ಒಳಚರಂಡಿ ಹಾಗೂ ಗಟಾರಗಳನ್ನು ಸ್ವಚ್ಛಗೊಳಿಸುವಾಗ ಒಟ್ಟು 1,035 ಮಂದಿ ಮೃತಪಟ್ಟಿದ್ದಾರೆ ಎಂದು ಈ ವರ್ಷದ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಈ ರೀತಿ ಮೃತಪಡುವವರಲ್ಲಿ ಬಹುತೇಕರು ದಲಿತ ಸಮುದಾಯದವರೆ ಆಗಿರುವುದು ಗಮನಾರ್ಹವಾಗಿದೆ.
ಇದಲ್ಲದೆ, ನೈರ್ಮಲ್ಯ ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ಒದಗಿಸದ ಗುತ್ತಿಗೆದಾರರ ವಿರುದ್ಧ ಬರಿಗೈಲ್ಲಿ ಮಲ ಬಾಚುವ ಕಾಯ್ದೆಯಡಿಯಲ್ಲಿ ದಾಖಲಾಗಿರುವ 616 ಪ್ರಕರಣಗಳಲ್ಲಿ ಒಬ್ಬರಿಗೆ ಮಾತ್ರ ಶಿಕ್ಷೆ ವಿಧಿಸಲಾಗಿದೆ.
ಮ್ಯಾನುಯಲ್ ಸ್ಕ್ಯಾವೆಂಜಿಂಗ್ – ಅಥವಾ ಒಳಚರಂಡಿ ಮಾರ್ಗಗಳು ಅಥವಾ ಸೆಪ್ಟಿಕ್ ಟ್ಯಾಂಕ್‌ಗಳಿಂದ ಕೈಯಿಂದ ಮಾನವ ಮಲವನ್ನು ಬಾಚುವ ಅಭ್ಯಾಸವನ್ನು ಮಲ ಬಾಚುವ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ, 2013 ರ ಅಡಿಯಲ್ಲಿ ನಿಷೇಧಿಸಲಾಗಿದೆ. ಆದರೆ ಈ ಅಭ್ಯಾಸವು ದೇಶದ ಹಲವಾರು ಭಾಗಗಳಲ್ಲಿ ಇನ್ನೂ ಜಾರಿಯಲ್ಲಿದೆ.
ದೇಶದ ಎಲ್ಲ ಬರಿಗೈಯಲ್ಲಿ ಮಲ ಬಾಚುವವರನ್ನು ಗುರುತಿಸುವ ಮೂಲಕ ಹಾಗೂ ಆ ಪದ್ಧತಿಯನ್ನು ನಿರ್ಮೂಲನೆಗೊಳಿಸಲು, ಅವರ ಪುನರ್ವಸತಿಗಾಗಿ ಪರ್ಯಾಯ ಜೀವನೋಪಾಯವನ್ನು ನೀಡಲು ಸರ್ಕಾರವು ಸ್ವಯಂ-ಉದ್ಯೋಗ ಯೋಜನೆಯಡಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದಾಗ್ಯೂ, 2019 ರಿಂದ ಈ ಯೋಜನೆಗೆ ಬಜೆಟ್ ಹಂಚಿಕೆ ನೀಡುತ್ತಿರುವ ಹಣ ಗಮನಾರ್ಹ ಕುಸಿತವನ್ನು ಕಂಡಿದೆ.