ಪರೀಕ್ಷೆಯ ಸಮಯದಲ್ಲಿ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಐವರು ವಿದ್ಯಾರ್ಥಿಗಳನ್ನು ಬಂಧಿಸಿರುವ ಘಟನೆ ತಮಿಳುನಾಡಿನ ವೇಪ್ಪೂರಿನಲ್ಲಿ ನಡೆದಿದೆ. ವೇಪ್ಪೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಮೇಲೆ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಶಾಲೆಯ ಶಿಕ್ಷಕರಾದ ಮಣಿಕಂಠನ್ ಮತ್ತು ಶ್ರೀನಿಧಿ ಮೇಲೆ ಬಾಲಕರು ಹಲ್ಲೆ ನಡೆಸಿದ್ದಾರೆ. ಶಾಲೆಯ ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ಶಾಲೆಯಿಂದ ‘ಡಿಸ್‌ಮಿಸ್’ ಮಾಡಿದೆ. ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣಪತ್ರ ನೀಡಿದೆ.
12ನೇ ತರಗತಿಯ ಪರೀಕ್ಷೆ ವೇಳೆ, ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಬಾಲಕರ ಗುಂಪು ತೊಂದರೆ ನೀಡುತ್ತಿತ್ತು. ಅವರನ್ನು ಕೊಠಡಿಯಿಂದ ದೂರ ಹೋಗುವಂತೆ ಪರೀಕ್ಷಾ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಮಣಿಕಂಠನ್ ಎಚ್ಚರಿಕೆ ನೀಡಿದ್ದಾರೆ. ಆ ಕಾರಣಕ್ಕೆ, ಅವರ ಮೇಲೆ ಬಾಲಕರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ವೇಳೆ, ಮತ್ತೊಂದು ಕೊಠಡಿಯಲ್ಲಿ ಪರೀಕ್ಷಾ ಕರ್ತವ್ಯದಲ್ಲಿದ್ದ ಶ್ರೀನಿಧಿ ಅವರು ಗಲಾಟೆಯನ್ನು ತಡೆಯಲು ಧಾವಿಸಿದ್ದಾರೆ. ಈ ವೇಳೆ, ಆರೋಪಿ ವಿದ್ಯಾರ್ಥಿಗಳು ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿದ್ದ ಇಬ್ಬರೂ ಶಿಕ್ಷಕರನ್ನು ವೆಪ್ಪೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಣಿಕಂಠನ್ ಅವರ ದೂರಿನ ಆಧಾರದ ಮೇಲೆ, ವೆಪ್ಪೂರು ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಗಳನ್ನು ಕಡಲೂರಿನ ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ.