ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ ಧಾರ್ಮಿಕ ದ್ವೇಷದ ವಿಷಬೀಜ ಬಿತ್ತುತ್ತದೆ. ಆರ್‌ಎಸ್‌ಎಸ್ ಕುರಿತು ಶಾಲೆಗಳಲ್ಲಿ ಬೋಧಿಸುವುದನ್ನು ತಡೆಯಬೇಕಿದೆ. ಅದಕ್ಕಾಗಿ, ಬೃಹತ್ ಹೋರಾಟಗಳು ನಡೆಯಬೇಕಿದೆ.
ಭಾರತದ ಬೃಹತ್ ಕೋಮುವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ 100ನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ದೇಶದ ಉದ್ದಗಲಕ್ಕೂ ಕೋಮುದ್ವೇಷದ ವಿಷ ಹರಡುವಿಕೆಯನ್ನು ಹೆಚ್ಚಿಸಲು ಮತ್ತು ವಿಸ್ತರಿಸಲು ಸಜ್ಜಾಗುತ್ತಿದೆ. ಇದೇ ಹೊತ್ತಿನಲ್ಲಿ, ”ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೂತನ ಶೈಕ್ಷಣಿಕ ಕಾರ್ಯಕ್ರಮ ‘ರಾಷ್ಟ್ರನೀತಿ’ ಅಡಿಯಲ್ಲಿ ಆರ್‌ಎಸ್‌ಎಸ್ ಮತ್ತು ಸಂಘಪರಿವಾರದ ಆರಾದ್ಯದೈವ ಸಾವರ್ಕರ್ ಕುರಿತು ಬೋಧನೆ ಮಾಡಲಾಗುತ್ತದೆ” ಎಂದು ದೆಹಲಿ ಶಿಕ್ಷಣ ಸಚಿವ ಆಶಿಶ್ ಸೂದ್ ಹೇಳಿದ್ದಾರೆ.
ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಲ್ಲಿ ನಿಂತು ಪ್ರಧಾನಿ ಮೋದಿ ಕೂಡ ಇದೇ ಕೋಮುವಾದಿ ಸಂಘಟನೆಯನ್ನು ಹೊಗಳಿದ್ದರು. ”100 ವರ್ಷಗಳ ಹಿಂದೆ ಒಂದು ಸಂಘಟನೆ ಹುಟ್ಟಿತು, ಅದುವೇ ಆರ್‌ಎಸ್‌ಎಸ್. ಸಂಘದ 100 ವರ್ಷಗಳ ಸೇವೆಯು ಅದ್ಭುತವಾದುದ್ದು. ಸಂಘದ ಸ್ವಯಂಸೇವಕರು ಮಾತೃಭೂಮಿಯ ಕಲ್ಯಾಣಕ್ಕಾಗಿ ವ್ಯಕ್ತಿ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣದ ಸಂಕಲ್ಪವನ್ನು ಪೂರೈಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಸೇವೆ, ಸಮರ್ಪಣೆ, ಸಂಘಟನೆ ಮತ್ತು ಅಪ್ರತಿಮ ಶಿಸ್ತು ಆರ್‌ಎಸ್‌ಎಸ್‌ನ ಗುರುತು. ಒಂದು ರೀತಿಯಲ್ಲಿ ಆರ್‌ಎಸ್‌ಎಸ್ ವಿಶ್ವದ ಅತಿದೊಡ್ಡ ಸರ್ಕಾರೇತರ ಸಂಸ್ಥೆ (ಎನ್‌ಜಿಒ)” ಎಂದು ಕೊಂಡಾಡಿದ್ದರು.
ಇದೀಗ, ಬಿಜೆಪಿ ಅಧಿಕಾರದಲ್ಲಿರುವ ದೆಹಲಿಯನ್ನು ಸಂಘಪರಿವಾರವು ತನ್ನ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಳ್ಳಲು ಹವಣಿಸುತ್ತಿದೆ. ಅದಕ್ಕಾಗಿ, ಶಾಲೆಗಳಿಂದಲೂ ಮಕ್ಕಳ ಮನಸ್ಸಿನಲ್ಲಿ ಕೋಮುದ್ವೇಷ ಬಿತ್ತುವ ತಂತ್ರ ಹೆಣೆಯುತ್ತಿದೆ. ಆರ್‌ಎಸ್‌ಎಸ್ ಕುರಿತು ಮಕ್ಕಳಿಗೆ ಬೋಧಿಸಲು ದೆಹಲಿ ಸರ್ಕಾರ ಮುಂದಾಗಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದ, ಸ್ವಾತಂತ್ರ್ಯ ಚಳವಳಿಗೆ ಯಾವುದೇ ಕೊಡುಗೆ ನೀಡದ, ಹಿಂದುತ್ವವನ್ನು ಪ್ರತಿಪಾದಿಸುವ, ಸಮಾಜದಲ್ಲಿ ಕೋಮುದ್ವೇಷ ಬಿತ್ತಿ, ಜನರ ಮನಸುಗಳನ್ನು ಒಡೆಯುವ ಕೋಮುವಾದಿ ಸಂಘಟನೆಯ ಕುರಿತು ಬೋಧಿಸುವುದನ್ನು ವಿಪಕ್ಷಗಳಾದ ಎಎಪಿ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ವಿರೋಧಿಸಿವೆ.
ಆರ್‌ಎಸ್‌ಎಸ್ ಕುರಿತು ಮೋದಿ ಹೊಗಳುತ್ತಿರುವುದು, ಬಿಜೆಪಿ ಸರ್ಕಾರ ಬೋಧಿಸಲು ಮುಂದಾಗಿರುವುದು ಯಾಕಾಗಿ? ಅಂದಹಾಗೆ, ಆರ್‌ಎಸ್‌ಎಸ್ ಮತ್ತು ಅದರ ಬೆಂಬಲಿಗರು ಬ್ರಿಟಿಷ್ ಕಾಲಾಳುಗಳಾಗಿ ಬ್ರಿಟಿಷರ ಸೇವೆ ಸಲ್ಲಿಸಿದ್ದರು ಎಂಬುದನ್ನು ಇತಿಹಾಸ ಮತ್ತೆ ಮತ್ತೆ ನೆನಪಿಸುತ್ತಿದೆ.
ಆರ್‌ಎಸ್‌ಎಸ್‌ಅನ್ನು ಡಾ. ಕೇಶವ ಬಲಿರಾಮ ಹೆಡಗೇವಾರ್ 1925ರಲ್ಲಿ ಹುಟ್ಟುಹಾಕಿದರು. ಇದೊಂದು ಬ್ರಾಹ್ಮಣ/ಮೇಲ್ಜಾತಿ ಸಂಘಟನೆ. ಬ್ರಾಹ್ಮಣರನ್ನು ರಕ್ಷಿಸುವ, ಜಾತೀಯತೆ-ಶ್ರೇಣಿವ್ಯವಸ್ಥೆಯನ್ನು ಪ್ರತಿಪಾದಿಸುವ, ಮಹಿಳೆಯರನ್ನು 2ನೇ ದರ್ಜೆಯ ಪ್ರಜೆಗಳಂತೆ ನೋಡುವ ಮನುವಾದಿ ಸಿದ್ಧಾಂತವೇ ಇದರ ಜೀವಾಳ.
ಈವರೆಗೆ ಆರ್‌ಎಸ್‌ಎಸ್‌ಗೆ 7 ಮಂದಿ ಸರಸಂಘಚಾಲಕರು (ಅಧ್ಯಕ್ಷರು) ಆಗಿದ್ದಾರೆ. ಅವರಲ್ಲಿ, ಆರು ಮಂದಿ ಬ್ರಾಹ್ಮಣರು ಮತ್ತು ಓರ್ವ ಠಾಕೂರ್, ಈವರೆಗೆ ಆರ್‌ಎಸ್‌ಎಸ್‌ನಲ್ಲಿ ಒಬಿಸಿ, ದಲಿತ, ಎಸ್‌ಟಿ ಸಮುದಾಯದವರು ಅಧ್ಯಕ್ಷರಾಗಿಲ್ಲ. ಗಮನಾರ್ಹವಾಗಿ, ಮಹಿಳೆಯರಿಗೂ ಮುಖ್ಯಸ್ಥರ ಸ್ಥಾನ ದೊರೆತಿಲ್ಲ.
ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಹೋರಾಟದಿಂದ ದೂರ ಉಳಿದಿದ್ದ ಆರ್‌ಎಸ್‌ಎಸ್, ಹಿಂದುತ್ವವಾದ, ರಾಷ್ಟ್ರೀಯವಾದವನ್ನು ಬಿತ್ತುವುದರಲ್ಲಿ, ಸ್ವಾತಂತ್ರ್ಯ ಹೋರಾಟವನ್ನು ಹಿಂದು-ಮುಸ್ಲಿಂ ಆಧಾರದಲ್ಲಿ ಒಡೆಯುವ, ಕೋಮುವಾದವನ್ನು ಪ್ರಚೋದಿಸುವ ಕುತಂತ್ರದಲ್ಲಿ ತೊಡಗಿತ್ತು. ಆರ್‌ಎಸ್‌ಎಸ್ ಪೂಜಿಸುವ ಸಾವರ್ಕರ್, ಬ್ರಿಟಿಷರಿಗೆ ಕ್ಷಮೆಯಾಚಿಸಿ, ಜೈಲಿನಿಂದ ಹೊರಬಂದವರು. ಆತ, ಹಿಂದು ರಾಷ್ಟ್ರದ ಪರಿಕಲ್ಪನೆಯೊಂದಿಗೆ, 2 ರಾಷ್ಟ್ರ ಸಿದ್ಧಾಂತವನ್ನು ರೂಪಿಸಿದ್ದರು. ಭಾರತವನ್ನು ಹಿಂದು-ಮುಸ್ಲಿಂ ರಾಷ್ಟ್ರಗಳಾಗಿ ವಿಭಜಿಸಬೇಕೆಂದು 1923ರಲ್ಲಿ ಮೊದಲ ಬಾರಿಗೆ ಪ್ರತಿಪಾದಿಸಿದ್ದರು.
ಆರ್‌ಎಸ್‌ಎಸ್‌ನ ಮೊದಲ ಸರಸಂಘಚಾಲಕ ಎಂ.ಎಸ್. ಗೋಲ್ವಾಲ್ಕರ್ ತಮ್ಮ ‘ಬಂಚ್ ಆಫ್ ಥಾಟ್ಸ್’ ಪುಸ್ತಕದಲ್ಲಿ, ಭಾರತವನ್ನು ‘ಹಿಂದುಸ್ಥಾನ’ ಎಂದು ಪ್ರತಿಪಾದಿಸಿದ್ದರು. ಭಾರತದಲ್ಲಿ ಹಿಂದುತ್ವದ ಆಧಿಪತ್ಯ ಇರಬೇಕೆಂದು ವಾದಿಸಿದ್ದರು.
ಮಾತ್ರವಲ್ಲದೆ, ಭಾರತದ ಸ್ವಾತಂತ್ರ್ಯ ಹೋರಾಟದ ಮೈಲುಗಲ್ಲುಗಳಾದ ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿಯನ್ನು ಆರ್‌ಎಸ್‌ಎಸ್ ತೀವ್ರವಾಗಿ ವಿರೋಧಿಸಿತ್ತು. ಬದಲಾಗಿ, ಮುಸ್ಲಿಮರು ಬ್ರಿಟಿಷರಿಗಿಂತ ದೊಡ್ಡ ಶತ್ರುಗಳು ಎಂಬ ಕೋಮುದ್ವೇಷವನ್ನು ಹರಡುವಲ್ಲಿ ನಿರತವಾಗಿತ್ತು. ಬಾಂಬೆಯಲ್ಲಿ ಬ್ರಿಟಿಷರು ತೊಂದರೆಯಲ್ಲಿದ್ದಾಗ, ನೆರವು ನೀಡಿದ್ದಕ್ಕಾಗಿ ಆರ್‌ಎಸ್‌ಎಸ್‌ಅನ್ನು ಬ್ರಿಟಿಷ್ ಸೈನ್ಯವು ಹೊಗಳಿತ್ತು.
ಸ್ವಾತಂತ್ರ್ಯಾನಂತರ, 1949ರ ಜನವರಿಯಲ್ಲಿ ಸಂವಿಧಾನ ಸಭೆ ನಡೆದಾಗ, ‘ಭಾರತೀಯ ಸಂವಿಧಾನ’ವನ್ನು ವಿರೋಧಿಸಿದ್ದ ಆರ್‌ಎಸ್‌ಎಸ್, ‘ಮನುಸ್ಮೃತಿ’ಯೇ ತಮ್ಮ ಸಂವಿಧಾನ ಎಂದು ಪ್ರತಿಪಾದಿಸಿತ್ತು. ”ಭಾರತದ ಹೊಸ ಸಂವಿಧಾನದಲ್ಲಿನ ಕೆಟ್ಟ ಅಂಶವೆಂದರೆ, ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ಮನುಸ್ಮೃತಿ ಪ್ರಪಂಚದ ಮೆಚ್ಚುಗೆಯನ್ನು ಪಡೆದಿದೆ” ಎಂದು ಹೇಳಿಕೊಂಡಿತ್ತು.
ಭಾರತದ ಸಂವಿಧಾನ ಮತ್ತು ರಾಷ್ಟ್ರಧ್ವಜವನ್ನು ಇಂದಿಗೂ ಆರ್‌ಎಸ್‌ಎಸ್ ಒಪ್ಪಿಕೊಂಡಿಲ್ಲ. ನಿರಂತರವಾಗಿ ಸಂವಿಧಾನವನ್ನು ಬದಲಿಸುವ ಮಾತನಾಡುತ್ತಲೇ ಇದೆ. ರಾಷ್ಟ್ರಧ್ವಜದ ಮೇಲೆ ದ್ವೇಷ ಕಾರುತ್ತಿದೆ. ಭಾರತವು ಸ್ವಾತಂತ್ರ್ಯಗೊಂಡು 50 ವರ್ಷಗಳ ಕಾಲ ಆರ್‌ಎಸ್‌ಎಸ್ ತನ್ನ ಕಚೇರಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ. ಬಿಜೆಪಿ ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ – 2002ರಲ್ಲಿ ಸಂಘವು ರಾಷ್ಟ್ರಧ್ವಜವನ್ನು ಹಾರಿಸಿತ್ತು.
ಸ್ವತಂತ್ರ ಭಾರತವು ಹಿಂದು, ಮುಸ್ಲಿಂ, ದಲಿತರು/ಅಸ್ಪೃಶ್ಯರು, ಮಹಿಳೆಯರು– ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಬೇಕೆಂದು ಬಯಸಿದ್ದ ಗಾಂಧಿ ಅವರನ್ನು ಕೊಂದ ಗೋಡ್ಸೆ ಆರ್‌ಎಸ್‌ಎಸ್‌ನಲ್ಲಿದ್ದವನು. ಸ್ವಾತಂತ್ರ್ಯ ಚಳವಳಿಯ ನೇತಾರನನ್ನು ಕೊಂದ ಗೋಡ್ಸೆಯನ್ನು ಸಂಘ ಪೂಜಿಸುತ್ತದೆ. ಗಾಂಧಿ ಅವರ ಹತ್ಯೆಯ ಕಾರಣಕ್ಕಾಗಿ ಆರ್‌ಎಸ್‌ಎಸ್‌ಅನ್ನು ನಿಷೇಧಿಸಲಾಗಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ.
ಈ ಲೇಖನ ಓದಿದ್ದೀರಾ?: ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ: ‘Gen-Z’ ಪ್ರತಿಭಟನೆಯ ಭೀತಿ ಕಾರಣವೇ?
ಭಾರತದ ಸಂವಿಧಾನ ವಿರೋಧಿ, ಸಮಾನತೆ ವಿರೋಧಿ, ಸಾವರ್ಕರ್-ಗೋಡ್ಸೆಯನ್ನು ಪೂಜಿಸುವ, ಸ್ವಾತಂತ್ರ್ಯ ಚಳವಳಿಯಲ್ಲಿ ಕವಡೆ ಕಾಸಿನ ಪಾತ್ರವನ್ನೂ ನಿರ್ವಹಿಸದ ಆರ್‌ಎಸ್‌ಎಸ್ ಕುರಿತು ಮಕ್ಕಳಿಗೆ ಬೋಧಿಸಲು ದೆಹಲಿ ಬಿಜೆಪಿ ಸರ್ಕಾರ ಮುಂದಾಗಿರುವುದು ಅಕ್ಷಮ್ಯ. ಇದು, ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನಗಳನ್ನು ಮಾಡಿದ ಭಗತ್ ಸಿಂಗ್ ಮತ್ತು ಸಂಗಾತಿಗಳು, ಚಂದ್ರಶೇಖರ್ ಆಜಾದ್, ಸುಭಾಷ್‌ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ, ಮಂಗಲ್ ಪಾಂಡೆ, ಉದ್ದಮ್ ಸಿಂಗ್, ಬಿರ್ಸಾ ಮುಂಡ, ಅಲ್ಲೂರಿ ಸೀತಾರಾಮ ರಾಜು, ಲಕ್ಷ್ಮಿ ಪಾಂಡಾ, ಮೌಲ್ವಿ ಅಹ್ಮದುಲ್ಲಾ ಶಾ, ಖಾನ್ ಅಬ್ದುಲ್ ಗಫಾರ್ ಖಾನ್, ಗಾಂಧಿ ಸೇರಿದಂತೆ ಮಹಾನ್ ವ್ಯಕ್ತಿಗಳಿಗೆ ಮಾಡಿದ ಅಪಮಾನ.
ಅಲ್ಲದೆ, ಸ್ವಾತಂತ್ರ್ಯ ನಂತರದಲ್ಲಿ, 1992 ಮತ್ತು 2002ರಲ್ಲಿ ನಡೆದ ಕೋಮು ಗಲಭೆಗಳಲ್ಲಿ ಆರ್‌ಎಸ್‌ಎಸ್ ಪ್ರಮುಖ ಪಾತ್ರ ಹೊಂದಿತ್ತು ಎಂದು ಆರೋಪಿಸಲಾಗಿದೆ. ಅಲ್ಲದೆ, ಮಾನವತಾವಾದಿ, ಚಿಂತಕ ನರೇಂದ್ರ ದಾಬೋಲ್ಕರ್, ಗೋವಿಂದ್ ಪನ್ಸಾರೆ, ಎಂ.ಎಂ ಕಲ್ಬುರ್ಗಿ ಹಾಗೂ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಗಳ ಹಿಂದೆ ಆರ್‌ಎಸ್‌ಎಸ್ ತಂತ್ರ-ಕೈವಾಡವಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಇಂತಹ ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ ಧಾರ್ಮಿಕ ದ್ವೇಷದ ವಿಷಬೀಜ ಬಿತ್ತುತ್ತದೆ. ‘ಹಿಂದುತ್ವ ರಾಷ್ಟ್ರೀಯತೆ’ಯನ್ನು ಪ್ರಚೋದಿಸುತ್ತದೆ. ರಾಷ್ಟ್ರೀಯ ಏಕತೆಗೆ ಹಾನಿಯುಂಟುಮಾಡುತ್ತದೆ. ಭವಿಷ್ಯದ ಪೀಳಿಗೆಯು ಕೋಮು ದಳ್ಳುರಿಯಲ್ಲಿ ಬೇಯುವಂತೆ ಮಾಡುತ್ತದೆ. ಆರ್‌ಎಸ್‌ಎಸ್ ಕುರಿತು ಶಾಲೆಗಳಲ್ಲಿ ಬೋಧಿಸುವುದನ್ನು ತಡೆಯಬೇಕಿದೆ. ಅದಕ್ಕಾಗಿ, ಬೃಹತ್ ಹೋರಾಟಗಳು ನಡೆಯಬೇಕಿದೆ.