ಭಾರತ ರಾಷ್ಟ್ರ ಸಮಿತಿ (BRS) ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು, ಈ ನಡುವೆ ಪಕ್ಷದ ಹಿರಿಯ ನಾಯಕಿ ಮತ್ತು ಎಂಎಲ್‌ಸಿ ಕೆ.ಕವಿತಾ ಅವರನ್ನು ಪಕ್ಷದಿಂದ ಮಂಗಳವಾರ (ಸೆ.2) ಅಮಾನತು ಮಾಡಲಾಗಿದೆ.
ಸ್ವ-ಪಕ್ಷದ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡಿದ್ದಕ್ಕಾಗಿಯೇ ಪಕ್ಷದ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರು ತಮ್ಮ ಪುತ್ರಿ ಕೆ. ಕವಿತಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಿದ್ದಾರೆ.
ತೆಲಂಗಾಣದ ಪ್ರಮುಖ ವಿರೋಧ ಪಕ್ಷವಾದ ಭಾರತ ರಾಷ್ಟ್ರ ಸಮಿತಿಯ ಸಂಸ್ಥಾಪಕ ಕೆ. ಚಂದ್ರಶೇಖರ್ ರಾವ್ ಅವರ ಕುಟುಂಬದಲ್ಲಿ ಸಾಕಷ್ಟು ಗೊಂದಲಗಳು ನಡೆಯುತ್ತಿವೆ ಎಂಬುವುದು ಇಲ್ಲಿ ಉಲ್ಲೇಖನೀಯ.
2014 ರಲ್ಲಿ ಬಿಆರ್‌ಎಸ್ ಅಧಿಕಾರದಲ್ಲಿದ್ದ ವೇಳೆ ನೀರಾವರಿ ಸಚಿವರಾಗಿದ್ದ ಹರೀಶ್ ರಾವ್ ಅವರು ಭ್ರಷ್ಟಾಚಾರ ಎಸಗಿರುವುದಾಗಿ ಹೇಳಿಕೆಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಪಕ್ಷದಿಂದ ಕೆ ಕವಿತಾ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯವೂ ಕೇಳಿಬಂದಿತ್ತು. ಇದೆಲ್ಲವನ್ನು ಪರಿಗಣಿಸಿ ಪಕ್ಷ ಕವಿತಾ ಅವರನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ವಿರುದ್ಧ ಕೆ. ಕವಿತಾ ಗಂಭೀರ ಆರೋಪ ಮಾಡಿದ್ದಾರೆ. ಕೆಟಿಆರ್ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದರು.