ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ-ಯುವಜನರ ಪ್ರತಿಭಟನೆಯನ್ನು ಸರ್ಕಾರ ಆಲಿಸಬೇಕು, ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮ ಮತ್ತು ರಾಮಮಂದಿರ ದೇಣಿಗೆ ಲೂಟಿ ಕುರಿತು ಚರ್ಚೆ ನಡೆಸಬೇಕು ಎಂದು ವಿಪಕ್ಷಗಳು ಸಂಸತ್ತಿನಲ್ಲಿ ಒತ್ತಾಯಿಸಿವೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿವೆ. ಈ ಬೆನ್ನಲ್ಲೇ, ಸಂಸತ್ತಿನ ಉಭಯ ಸದನಗಳನ್ನು ಅಲ್ಪಾವಧಿಗೆ ಮುಂದೂಡಲಾಗಿದೆ.
ಅಧಿವೇಶನದ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, “ಸತ್ಯ ಹಾಗೂ ತರ್ಕಗಳಿರುವಲ್ಲಿ ಗದ್ದಲದ ಅಗತ್ಯವಿರುವುದಿಲ್ಲ ಎಂಬುದು ನನ್ನ ನಂಬಿಕೆ. ನಿಮ್ಮ ತರ್ಕ ಮತ್ತು ಸತ್ಯಗಳು ಬಲವಾಗಿದ್ದರೆ ಧ್ವನಿ ಎತ್ತುವ (ಗಲಾಟೆ ಮಾಡುವ) ಅಗತ್ಯವೇ ಇರುವುದಿಲ್ಲ. ಸಂಸತ್ತಿನಲ್ಲಿ ಚರ್ಚೆಗಳು ತರ್ಕ ಮತ್ತು ಸತ್ಯಗಳಿಂದ ಕೂಡಿರುತ್ತವೆ. ಪ್ರತಿಯೊಬ್ಬರ ಧ್ವನಿಗೂ ಅವಕಾಶ ಸಿಗಬೇಕು, ಅದುವೇ ಸಂಸತ್ತಿನ ಪಾತ್ರ. ಎಲ್ಲ ಸಂಸದರೂ ಇದರಲ್ಲಿ ಪಾಲ್ಗೊಳ್ಳಬೇಕು” ಎಂದರು.
ಆದರೆ, ಕಳೆದ 12 ವರ್ಷಗಳಲ್ಲಿ ಭಿನ್ನ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಾತ್ರವಲ್ಲದೆ, ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದವು. ಸಂಸತ್ತಿನೊಳಗೆ ಪ್ರತಿಭಟನೆ ನಡೆಸಿದವು. ತೀವ್ರ ಗದ್ದಲಗಳ ನಡುವೆ ಉಭಯ ಸದನಗಳ ಕಲಾಪವನ್ನು ಮುಂದೂಡಲಾಯಿತು.
ಲೋಕಸಭೆಯಲ್ಲಿ ಏನಾಯಿತು?
ಲೋಕಸಭೆಯಲ್ಲಿ ಸ್ಪೋಕರ್ ಓಂ ಬಿರ್ಲಾ ಅವರು ಅಗಲಿದ ಮಾಜಿ ಸಂಸದರಿಗೆ ಶ್ರದ್ಧಾಂಜಲಿ ಸಲ್ಲಿಸುವುದರೊಂದಿಗೆ ಕಲಾಪವನ್ನು ಪ್ರಾರಂಭಿಸಿದರು. ಶ್ರದ್ಧಾಂಜಲಿ ಸಲ್ಲಿಕೆಯ ಬೆನ್ನಲ್ಲೇ ವಿಪಕ್ಷಗಳ ಸಂಸದರು ನೀಟ್ ಪರೀಕ್ಷೆಯ ಅಕ್ರಮಗಳು ಮತ್ತು ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ನಡೆದಿರುವ ದೇಣಿಗೆ ಅವ್ಯವಹಾರದ ಕುರಿತು ಚರ್ಚೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
ಈ ವೇಳೆ, ಸ್ಪೋಕರ್ ಪೀಠದಲ್ಲಿದ್ದ ದಿಲೀಪ್ ಸೈಕಿಯಾ ಅವರು ಕಲಾಪವನ್ನು ಹಲವು ಬಾರಿ ಮುಂದೂಡಿದರು.
ರಾಜ್ಯಸಭೆಯಲ್ಲಿ ಏನಾಯಿತು?
ರಾಜ್ಯಸಭೆಯಲ್ಲೂ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ವಿಷಯವಾಗಿ ತೀವ್ರ ಗದ್ದಲ ಉಂಟಾಗಿ, ಕಲಾಪವನ್ನು ಮುಂದೂಡಲಾಯಿತು.
ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನೀಟ್-ಯುಜಿ 2026 (NEET-UG 2026) ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ಪ್ರಸ್ತಾಪಿಸಿ, “ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಸಾವಿರಾರು ವಿದ್ಯಾರ್ಥಿಗಳು ಜಂತರ್ ಮಂತರ್ ತಲುಪಿದ್ದಾರೆ .ಅವರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಸರ್ಕಾರವು ಅವರನ್ನು ಹತ್ತಿಕ್ಕಲು ಮತ್ತು ವಿಷಯವನ್ನು ತುಳಿದುಹಾಕಲು ಯತ್ನಿಸುತ್ತಿದೆ” ಎಂದು ಖರ್ಗೆ ಕಿಡಿಕಾರಿದರು.
ವಿಪಕ್ಷ ಸದಸ್ಯರ ತೀವ್ರ ಗದ್ದಲದ ನಡುವೆ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸದನವನ್ನು ಮುಂದೂಡಿದರು.
ಈ ಮುಂಗಾರು ಅಧಿವೇಶನದಲ್ಲಿ ಕೆಲವು ಪ್ರಮುಖ ವಿಧೇಯಕಗಳು ಮಂಡನೆಯಾಗುವ ಸಾಧ್ಯತೆಯಿದೆ:
ಸಂವಿಧಾನ (131ನೇ ತಿದ್ದುಪಡಿ) ವಿಧೇಯಕ: ಲೋಕಸಭಾ ಸ್ಥಾನಗಳನ್ನು 850ಕ್ಕೆ ಹೆಚ್ಚಿಸುವ ಕ್ಷೇತ್ರ ಮರುವಿಂಗಡಣೆಯ ವಿಧೇಯಕವನ್ನು ಸರ್ಕಾರ ಮರುಪರಿಚಯಿಸುವ ಸಾಧ್ಯತೆಯಿದೆ.
ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ವಿಧೇಯಕ-2026: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಗರಿಷ್ಠ ಸಂಖ್ಯೆಯನ್ನು 33 ರಿಂದ 37ಕ್ಕೆ ಹೆಚ್ಚಿಸುವ ಈ ವಿಧೇಯಕವನ್ನು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಡಿಸಲಿದ್ದಾರೆ.
ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ: ವಿದೇಶಿ ಆಸ್ತಿಗಳ ನಿರ್ವಹಣೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಪ್ರಾಧಿಕಾರವನ್ನು ರಚಿಸುವ ಈ ವಿಧೇಯಕವೂ ಚರ್ಚೆಗೆ ಬರಲಿದೆ.




