ಇತ್ತೀಚೆಗಷ್ಟೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ತೊರೆದಿದ್ದ ಮೂವರು ಮಾಜಿ ಸಂಸದರಾದ ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ಅವರು ಪಶ್ಚಿಮ ಬಂಗಾಳದಿಂದ ಬಿಜೆಪಿ ಟಿಕೆಟ್ನಲ್ಲಿ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನದಂದು ಕಣದಲ್ಲಿ ಬೇರೆ ಯಾವುದೇ ಅಭ್ಯರ್ಥಿಗಳು ಉಳಿಯದ ಕಾರಣ, ಚುನಾವಣಾಧಿಕಾರಿಗಳು ಈ ಮೂವರನ್ನೂ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿ ಅಧಿಕೃತವಾಗಿ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದ್ದಾರೆ.
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲನ್ನು ಅನುಭವಿಸಿದ ಬೆನ್ನಲ್ಲೇ, ಈ ಮೂವರು ನಾಯಕರು ಜೂನ್ ತಿಂಗಳಲ್ಲಿ ತಮ್ಮ ರಾಜ್ಯಸಭಾ ಸದಸ್ಯತ್ವ ಹಾಗೂ ಟಿಎಂಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಜುಲೈ 9 ರಂದು ಇವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅವರು ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ, ಇವರನ್ನು ರಾಜ್ಯಸಭಾ ಉಪಚುನಾವಣೆಯ ಅಭ್ಯರ್ಥಿಗಳನ್ನಾಗಿ ಘೋಷಿಸಿತ್ತು.



