ಹೆತ್ತ ನಾಲ್ಕು ವರ್ಷದ ಮಗುವನ್ನು ಕೊಂದು ಬ್ಯಾಗಿನಲ್ಲಿ ಕೊಂಡೊಯ್ಯುತ್ತಿದ್ದ ಬೆಂಗಳೂರು ಮೂಲದ ಸ್ಟಾರ್ಟ್‌ಪ್ ಕಂಪನಿಯ ಸಿಇಒ ಸುಚನಾ ಸೇಠ್‌ನ ಮತ್ತೊಂದು ಬಂಡವಾಳ ಬಯಲಾಗಿದೆ.
ಗೋವಾದಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ದರ ಕಡಿಮೆಯಿದ್ದರೂ ವಿಮಾನ ದರಕ್ಕಿಂತ 10 ಪಟ್ಟು ಹೆಚ್ಚು ಹಣ ಕೊಟ್ಟು ಕಾರಿನಲ್ಲಿ ತೆರಳಿದ್ದಳು ಎಂದು ಆರೋಪಿ ಉಳಿದುಕೊಂಡಿದ್ದ ಗೋವಾದ ಸರ್ವೀಸ್ ಅಪಾರ್ಟ್ಮೆಂಟ್‌ನ ಮ್ಯಾನೇಜರ್ ತಿಳಿಸಿದ್ದಾರೆ.
ಸರ್ವೀಸ್ ಅಪಾರ್ಟ್ಮೆಂಟ್ ಮ್ಯಾನೇಜರ್ ದೂರು ನೀಡಿರುವ ಪ್ರಕಾರ ಆರೋಪಿ ಸುಚನಾ ಸೇಠ್ ಗೋವಾದಿಂದ ಬೆಂಗಳೂರಿಗೆ ತೆರಳಲು 30 ಸಾವಿರ ರೂ. ಹಣ ನೀಡಿ ಕಾರನ್ನು ಬುಕ್ ಮಾಡಿಕೊಂಡಿದ್ದಳು. ಕೇವಲ 2,600 ರೂ. ನಿಂದ 3,000 ರೂಗಳ ಅಗ್ಗದ ದರದಲ್ಲಿ ವಿಮಾನದಲ್ಲಿ ತೆರಳಬಹುದು ಎಂದು ಹೇಳಿದ್ದರೂ 30 ಸಾವಿರ ಹಣ ನೀಡಿ ಕಾರನ್ನೇ ಬುಕ್ ಮಾಡಿಕೊಂಡಿದ್ದ ಸುಚನಾ ಸೇಠ್.
ಸೇಠ್ ಜನವರಿ 6 ರಿಂದ 10ರವರೆಗೆ ಮುಂಗಡ ಹಣ ನೀಡಿ ಸರ್ವೀಸ್ ಅಪಾರ್ಟ್ಮೆಂಟ್ ಬುಕ್ ಮಾಡಿಕೊಂಡಿದ್ದಳು. ಆದರೆ ಜನವರಿ 8ರಂದು ಕೊಠಡಿ ಖಾಲಿ ಮಾಡಿದ್ದಳು ಎಂದು ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ.
ಕೊಲೆ ಆರೋಪಿ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಿಇಒ ಸುಚನಾ ಸೇಠ್‌ಳನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದು, ಸದ್ಯ ಗೋವಾ ಪೊಲೀಸರ ವಶದಲ್ಲಿದ್ದಾರೆ. ಲಿಂಕ್ಡಿನ್ ಪ್ರೊಫೈಲ್ ಪ್ರಕಾರ ಈಕೆ ಕೃತಕ ಬುದ್ಧಿಮತ್ತೆ ನೀತಿಶಾಸ್ತ್ರ ತಜ್ಞೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾಲ್ದೀವ್ಸ್ ಮೋದಿ ನಿಂದನೆ ಖಂಡನೀಯ; ನಮ್ಮ ನಡವಳಿಕೆ ಶೋಚನೀಯ
ಪೊಲೀಸರ ತನಿಖೆಯ ಒಂದು ಆಯಾಮದ ಪ್ರಕಾರ ಆರೋಪಿಯು ಅಪಾರ್ಟ್‌ಮೆಂಟ್ ಸಿಬ್ಬಂದಿಯಿಂದ ತರಿಸಿಕೊಂಡ ಕೆಮ್ಮಿನ ಸಿರಪ್‌ಅನ್ನು ಮಗುವಿಗೆ ವಿಪರೀತ ಕುಡಿಸಿ ನಂತರ ದಿಂಬಿನಿಂದ ಹಿಸುಕಿ ಹತ್ಯೆ ಮಾಡಿದ್ದಾಳೆ.
ಕೊಠಡಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ರಕ್ತದ ಕಲೆಯನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಬುಕ್ ಮಾಡಿಕೊಂಡಿದ್ದ ಕಾರಿನ ಚಾಲಕನ ಸಹಾಯದಿಂದ ಹಂತಕಿಯನ್ನು ಸೆರೆ ಹಿಡಿಯಲಾಗಿದೆ.
ಸುಚನಾ ಸೇಠ್ ಗೋವಾದಿಂದ ಪರಾರಿಯಾಗುತ್ತಿದ್ದಾಗ, ಅಪಘಾತದಿಂದಾಗಿ ಆಕೆ ಪ್ರಯಾಣಿಸುತ್ತಿದ್ದ ಕಾರು ನಾಲ್ಕು ಗಂಟೆಗಳ ಕಾಲ ಚೋರ್ಲಾ ಘಾಟ್‌ನಲ್ಲಿ ಸಿಲುಕಿಕೊಂಡಿತು. ಈ ಘಟನೆ ಪೊಲೀಸರಿಗೆ ಆಕೆಯನ್ನು ಬಂಧಿಸಲು ವರದಾನವಾಗಿದೆ.
ಆಕೆ ಬೆಂಗಳೂರು ತಲುಪಿದ್ದರೆ, ಮಗುವಿನ ಶವ ಸಿಗುವುದು ಕಷ್ಟವಾಗುತ್ತಿತ್ತು. ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಗಳ ನಡುವೆ ಈ ಚೋರ್ಲಾ ಘಾಟ್ ಇದೆ. ಇದು ಗೋವಾ ರಾಜಧಾನಿ ಪಣಜಿಯ ಈಶಾನ್ಯದಲ್ಲಿದೆ ಮತ್ತು ಕರ್ನಾಟಕದ ಬೆಳಗಾವಿಯಿಂದ ಸುಮಾರು 55 ಕಿಲೋಮೀಟರ್ ದೂರದಲ್ಲಿದೆ.