ʼಕಳೆದ 10 ವರ್ಷಗಳಲ್ಲಿ ಎನ್‌ಸಿಆರ್‌ಬಿ ವರದಿ ಪ್ರಕಾರ 2.6 ಲಕ್ಷಕ್ಕೂ ಹೆಚ್ಚು ಜನರು ರೈಲು ಅಪಘಾತಗಳಿಂದ ಸಾವನ್ನಪ್ಪಿದ್ದು, ರೈಲು ಅಪಘಾತ ತಡೆಗೆ ʼಕವಚ್ʼ ತಂತ್ರಜ್ಞಾನ ಎಲ್ಲೆಡೆ ತ್ವರಿತ ಗತಿಯಲ್ಲಿ ಜಾರಿಗೊಳಿಸಬೇಕುʼ ಎಂದು ಬೀದರ್ ಸಂಸದ ಸಾಗರ್ ಖಂಡ್ರೆ ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಸೋಮವಾರ ಗಮನ ಸೆಳೆದ ಅವರು, ʼರೈಲು ಅಪಘಾತ ತಡೆಗೆ ಜಾರಿಗೊಳಿಸಿದ ʼಕವಚ್ʼ ತಂತ್ರಜ್ಞಾನವನ್ನು ಬಹಳ ನಿಧಾನಗತಿಯಲ್ಲಿ ಅಳವಡಿಸಲಾಗುತ್ತಿದೆ. ದೇಶದ 68 ಸಾವಿರ ಕಿ.ಮೀ ಮಾರ್ಗದಲ್ಲಿ 3,700 ಕಿ.ಮೀ. ಮಾತ್ರ ಅಳವಡಿಸಲಾಗಿದೆʼ ಎಂದರು.
ʼಹೆಚ್ಚಿನ ಜನರು ರೈಲುಗಳಿಗೆ ಸಿಲುಕಿ, ರೈಲುಗಳಿಂದ ಬೀಳುವುದರಿಂದ ಅಪಘಾತ ಸಂಭವಿಸುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ 700ಕ್ಕೂ ಹೆಚ್ಚು ಜನ ಸಾವನಪ್ಪಿದ್ದರೆ, 2 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆʼ ಎಂದು ತಿಳಿಸಿದರು.
ʼಅಮೃತ್ ಭಾರತ್ ಯೋಜನೆ ಅಡಿಯಲ್ಲಿ ನಿಲ್ದಾಣಗಳ ಪುನರಾಭಿವೃದ್ಧಿ ಬಹಳ ನಿಧಾನಗತಿಯಲ್ಲಿ ನಡೆಯುತ್ತಿದೆ. 2024-25ನೇ ವರ್ಷದಲ್ಲಿ 450ಕ್ಕೂ ಹೆಚ್ಚು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಬೇಕಿತ್ತು. ಆದರೆ, ಕೇವಲ ಒಂದು ನಿಲ್ದಾಣ ಮಾತ್ರ ಅಭಿವೃದ್ಧಿಪಡಿಸಲಾಗಿದೆʼ ಎಂದರು.
ʼಬೀದರ್-ಬೆಂಗಳೂರು ನಡುವೆ ʼವಂದೇ ಭಾರತ್ʼ ರೈಲು ಆರಂಭವಾಗಬೇಕೆಂಬುದು ನನ್ನ ಕ್ಷೇತ್ರದ ಜನರ ಬೇಡಿಕೆಯಾಗಿದ್ದು, ಇದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ. ಭಾಲ್ಕಿ ಮತ್ತು ಕಮಲನಗರ ರೈಲ್ವೆ ನಿಲ್ದಾಣಗಳನ್ನು ʼಅಮೃತ ಭಾರತ್ʼ ಯೋಜನೆಯಡಿ ಸೇರ್ಪಡಿಸಿ ಅಭಿವೃದ್ಧಿಪಡಿಸಬೇಕು. ಬೀದರ-ಬೆಂಗಳೂರು ರೈಲುಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಹೆಚ್ಚುವರಿ 2 ಬೋಗಿಗಳನ್ನು ಸೇರಿಸಲು ಅವಕಾಶವಿದ್ದು ಬೋಗಿಗಳನ್ನು ಸೇರಿಸಬೇಕುʼ ಎಂದು ಮನವಿ ಮಾಡಿದರು.
ಸಂಸತ್ತಿನಲ್ಲಿ ರೈಲ್ವೆ ಸಂಬಂಧಿತ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದೆನು.
— Sagar Khandre (@SagarKhandre12) March 18, 2025
✅ NCRB ವರದಿ ಪ್ರಕಾರ ಕಳೆದ ದಶಕದಲ್ಲಿ 2.6 ಲಕ್ಷಕ್ಕೂ ಹೆಚ್ಚು ಜನರು ರೈಲ್ವೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
✅ ಈ ಸಮಸ್ಯೆಗೆ ತ್ವರಿತ ಪರಿಹಾರವಾಗಿ KAVACH ತಂತ್ರಜ್ಞಾನವನ್ನು ಎಲ್ಲೆಡೆ ಶೀಘ್ರ ಜಾರಿಗೆ ತರಬೇಕೆಂದು ಒತ್ತಾಯಿಸಿದೆನು.
✅ ಅಮೃತ… pic.twitter.com/Dnp3XSjL4f
ಈ ಸುದ್ದಿ ಓದಿದ್ದೀರಾ? ಜಾಗತಿಕ ತಾಪಮಾನ ಏರಿಕೆ: ಬಿಸಿಗಾಳಿಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು?
ʼಬೀದರ ಕ್ಷೇತ್ರದ ಜನರನ್ನು ರಾಷ್ಟ್ರ ರಾಜಧಾನಿ ದೆಹಲಿಗೆ ಸಂಪರ್ಕ ಕಲ್ಪಿಸಲು ದಕ್ಷಿಣ ಎಕ್ಸ್‌ಪ್ರೆಸ್ ರೈಲನ್ನು ಹೈದರಾಬಾದ್‌ನಿಂದ ಬೀದರಕ್ಕೆ ವಿಸ್ತರಿಸಬೇಕು. ತಾಂಡೂರು-ಜಹೀರಾಬಾದ್ ಹೊಸ ರೈಲು ಮಾರ್ಗವನ್ನು ಕ್ಷೇತ್ರದ ಚಿಂಚೋಳಿ ಮೂಲಕ ಸಾಗುವಂತೆ ಮಾಡಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮ ಕ್ಷೇತ್ರಕ್ಕೆ ನೀಡಲಾಗುತ್ತಿದ್ದ ಶೇ 50ರಷ್ಟು ರಿಯಾಯಿತಿಯನ್ನು ಮರುಪ್ರಾರಂಭಿಸಬೇಕುʼ ಎಂದು ಆಗ್ರಹಿಸಿದರು.