ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಸಮೀಪ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಪ್ರತಿಪಕ್ಷದ ನಾಯಕರನ್ನು ವಶಕ್ಕೆ ಪಡೆದಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು X ನಲ್ಲಿ ಪ್ರತಿಕ್ರಿಯಿಸಿರುವ ಅವರು, ವಿದ್ಯಾರ್ಥಿಗಳ ನ್ಯಾಯಯುತ ಹೋರಾಟ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುವ ಪ್ರತಿಯೊಂದು ಪ್ರಜಾಸತ್ತಾತ್ಮಕ ಶಕ್ತಿಯ ಜತೆ ಕಾಂಗ್ರೆಸ್ ನಿಲ್ಲಲಿದೆ. ಪ್ರತಿಪಕ್ಷವನ್ನು ಬಂಧಿಸಬಹುದು, ಆದರೆ ಸತ್ಯವನ್ನಾಗಲಿ ಅಥವಾ ಭಾರತದ ಯುವಕರ ಆಕ್ರೋಶವನ್ನಾಗಲಿ ಬಂಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಬಲಪ್ರಯೋಗವನ್ನು ವಿರೋಧಿಸಿ ಪ್ರಧಾನಿ ನಿವಾಸದ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಪಕ್ಷದ ನಾಯಕರನ್ನು ಬಂಧಿಸಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ರಾಹುಲ್ ಗಾಂಧಿ ಸೇರಿದಂತೆ ಪ್ರತಿಭಟನಾಕಾರರನ್ನು ಪೊಲೀಸರು ತಳ್ಳಾಡಿಸಿ ದುರ್ವರ್ತನೆ ನಡೆಸಿರುವ ದೃಶ್ಯಗಳು ಆತಂಕಕಾರಿ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
“ಮೊದಲು ಮೋದಿ ಸರ್ಕಾರ ಯುವಕರ ಪ್ರಶ್ನೆಗಳಿಗೆ ಲಾಠಿ ಮತ್ತು ಅಶ್ರುವಾಯುವಿನ ಮೂಲಕ ಉತ್ತರ ನೀಡಿತು. ಈಗ ಉತ್ತರದಾಯಿತ್ವ ಕೇಳುತ್ತಿರುವ ಚುನಾಯಿತ ಪ್ರತಿನಿಧಿಗಳ ವಿರುದ್ಧವೇ ಪೊಲೀಸ್ ಬಲವನ್ನು ಬಳಸುತ್ತಿದೆ. ಇದು ಆತ್ಮವಿಶ್ವಾಸದಿಂದಿರುವ ಸರ್ಕಾರದ ನಡೆ ಅಲ್ಲ; ವಿದ್ಯಾರ್ಥಿಗಳು, ಪ್ರಶ್ನೆಗಳು ಮತ್ತು ಶಾಂತಿಯುತ ಪ್ರಜಾಪ್ರಭುತ್ವದ ಪ್ರತಿಭಟನೆಗಳ ಬಗ್ಗೆ ಸರ್ಕಾರದಲ್ಲಿ ಹೆಚ್ಚುತ್ತಿರುವ ಭಯದ ಪ್ರತಿಕ್ರಿಯೆಯಾಗಿದೆ” ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ಮೋದಿ ಮನೆ ಮುಂದೆ ಪ್ರತಿಭಟನೆ: ರಾಹುಲ್, ಪ್ರಿಯಾಂಕಾ, ಅಖಿಲೇಶ್ ಯಾದವ್ ಪೊಲೀಸ್ ವಶಕ್ಕೆ
ಪರೀಕ್ಷಾ ಅಕ್ರಮ, ನಿರುದ್ಯೋಗ ಮತ್ತು ವಿದ್ಯಾರ್ಥಿಗಳ ಮೇಲಿನ ಅನ್ಯಾಯದ ವಿರುದ್ಧ ರಾಹುಲ್ ಗಾಂಧಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದು, ಪ್ರತಿಪಕ್ಷದ ನಾಯಕರನ್ನು ಬಂಧಿಸುವುದರಿಂದ ವಿದ್ಯಾರ್ಥಿಗಳ ನೋವು ಮಾಯವಾಗುವುದಿಲ್ಲ ಹಾಗೂ ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ಭಿನ್ನಾಭಿಪ್ರಾಯದ ಧ್ವನಿಯನ್ನು ಪೊಲೀಸ್ ಬಲದಿಂದ ಹತ್ತಿಕ್ಕುವುದನ್ನು ನಿಲ್ಲಿಸಿ, ದೇಶದ ಜನರಿಗೆ ಉತ್ತರ ನೀಡಬೇಕು. ಭಾರತದ ಯುವಕರು ನ್ಯಾಯ, ಉತ್ತರದಾಯಿತ್ವ ಮತ್ತು ಗೌರವಕ್ಕೆ ಅರ್ಹರು; ದಮನಕ್ಕೆ ಅಲ್ಲ” ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.





