ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸೇವೆ ವಿಚಾರದಲ್ಲಿ ಹಾಸ್ಯನಟ (ಸ್ಟ್ಯಾಂಡಪ್ ಕಾಮಿಡಿಯನ್) ಕುನಾಲ್ ಕಮ್ರಾ ಅವರು ಮಾಡಿದ್ದ ಟ್ವೀಟ್‌ವೊಂದು ಭಾರೀ ಚರ್ಚೆ ಹುಟ್ಟುಹಾಕಿದೆ. ಅವರ ಟ್ವೀಟ್‌ಗೆ ‘ಓಲಾ ಇವಿ’ ಸಿಇಒ ಭವಿಶ್ ಅಗರ್ವಾಲ್ ಪ್ರತಿಕ್ರಿಯಿಸಿದ್ದು, ಇಬ್ಬರ ನಡುವೆ ಟ್ವೀಟ್ ವಾರ್ ನಡೆಯುತ್ತಿದೆ.
ಕುನಾಲ್ ಕಮ್ರಾ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಓಲಾ ಸರ್ವೀಸ್ ಸೆಂಟರ್ ಬಳಿ ನಿಲ್ಲಿಸಲಾಗಿರುವ ರಾಶಿಗಳಷ್ಟು ಓಲಾ ಸ್ಕೂಟರ್‌ಗಳ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
“ಭಾರತೀಯ ಗ್ರಾಹಕರಿಗೆ ಧ್ವನಿ ಇಲ್ಲವೇ? ದ್ವಿಚಕ್ರ ವಾಹನಗಳು ಅನೇಕ ಕೂಲಿ ಕಾರ್ಮಿಕರ ಜೀವನದ ಅವಿಭಾಜ್ಯ ಭಾಗವಾಗಿವೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸಮಸ್ಯೆ ಹೆಚ್ಚುತ್ತಿದೆ. ಕಂಪನಿಯು ತೀರಾ ಕಳಪೆಮಟ್ಟದ ಸೇವೆ ಒದಗಿಸುತ್ತಿದೆ. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರು ತಮ್ಮ ಸಮಸ್ಯೆಗಳ ಬಗ್ಗೆ ಕಮೆಂಟ್ ಮಾಡಿ” ಎಂದು ಕಮ್ರಾ ಪೋಸ್ಟ್ ಮಾಡಿದ್ದಾರೆ.
ಅವರ ಪೋಸ್ಟ್‌ನಿಂದ ಕುಪಿತಗೊಂಡು ಪ್ರತಿಕ್ರಿಯಿಸಿರುವ ‘ಓಲಾ ಇವಿ’ ಸಿಇಒ ಭವಿಶ್ ಅಗರ್ವಾಲ್, “ಇದು ದುಡ್ಡಿಗಾಗಿ ಮಾಡಿರುವ ಟ್ವೀಟ್ (ಪೇಯ್ಡ್ ಟ್ವೀಟ್). ಕಮ್ರಾ ಅವರು ತಮ್ಮ ವಿಫಲ ಹಾಸ್ಯ ವೃತ್ತಿಯಿಂದ ಗಳಿಸುವುದಕ್ಕಿಂತ ಹೆಚ್ಚು ಹಣ ಕೊಡುತ್ತೇನೆ. ನಾವು ಸೇವಾ ನೆಟ್‌ವರ್ಕ್ಅನ್ನು ವೇಗವಾಗಿ ವಿಸ್ತರಿಸುತ್ತಿದ್ದೇವೆ. ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆ” ಎಂದಿದ್ದಾರೆ.
ಅಗರ್ವಾಲ್ ಟ್ವೀಟ್‌ಗೆ ಕಮ್ರಾ ಪ್ರತಿಕ್ರಿಯಿಸಿದ್ದು, “ಹಣಕ್ಕಾಗಿನ ಟ್ವೀಟ್ (ಪೇಯ್ಡ್ ಟ್ವೀಟ್), ವಿಫಲ ಹಾಸ್ಯ ವೃತ್ತಿ. ಭಾರತೀಯ ಉದ್ಯಮಿ ಅವರ ಪ್ರತಿಕ್ರಿಯೆ ಅತ್ಯುತ್ತಮವಾಗಿದೆ. ನಾನು ಟ್ವೀಟ್ ಮಾಡಲು ಹಣ ಪಡೆದಿದ್ದೇನೆ ಎಂದು ನೀವು ಸಾಬೀತುಪಡಿಸಿದರೆ, ಈ ಟ್ವೀಟ್ ಮತ್ತು ಈ ಹಿಂದೆ ಖಾಸಗಿ ಕಂಪನಿಗಳ ವಿರುದ್ಧ ಹಾಕಿರುವ ಎಲ್ಲ ಪೋಸ್ಟ್‌ಗಳನ್ನು ಅಳಿಸಿ ಹಾಕುತ್ತೇನೆ. ನನ್ನ ವಿಫಲ ಹಾಸ್ಯ ವೃತ್ತಿಜೀವನದ ಕುರಿತು ಮಾತನಾಡಿದ್ದೀರಿ. ಕಳೆದ ವರ್ಷ ನಾನು ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದ ಒಂದು ವಿಡಿಯೋ ಕ್ಲಿಪ್ ಇಲ್ಲಿದೆ. ನೀವು ಸೊಕ್ಕಿನ, ಕೆಳದರ್ಜೆಯ, ಚುಚ್ಚುವ ಪ್ರತಿಕ್ರಿಯೆ ಹಾಗೂ ನಿಮ್ಮ ಗ್ರಾಹಕನಲ್ಲದಿದ್ದರೂ, ನನಗೆ ಪಾವತಿಸುತ್ತೇನೆ ಎಂದಿರುವುದಕ್ಕೆ ಧನ್ಯವಾದಗಳು” ಎಂದು ಛೇಡಿಸಿದ್ದಾರೆ.
“ನನಗೆ ನಿಮ್ಮ ಹಣದ ಅಗತ್ಯವಿಲ್ಲ. ಜನರು ಸಮಯಕ್ಕೆ ಸರಿಯಾಗಿ ತಮ್ಮ ಕೆಲಸದ ಸ್ಥಳಕ್ಕೆ ಹೋಗಲು ನಿಮ್ಮ ಸ್ಕೂಟರ್ ಖರೀದಿಸಿದ್ದಾರೆ. ಆದರೆ, ಈ ಅವರು ಮತ್ತೆ ಮತ್ತೆ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಬಗ್ಗೆ ನಿಮ್ಮ ಹೊಣೆಗಾರಿಕೆಯ ಅಗತ್ಯವಿದೆ. ನೀವು ನಿಜವಾಗಿಯೂ ಕಾಳಜಿ ಹೊಂದಿದ್ದರೆ, ಆ ಕಾಳಜಿಯನ್ನು ನಿಮ್ಮ ಗ್ರಾಹಕರಿಗೆ ತೋರಿಸಿ” ಎಂದು ಕಮ್ರಾ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೊಪ್ಪಳ | ಸಿಎಂ ಬರುವ ದಾರಿಯಲ್ಲಿ ವಿರುದ್ಧ ದಿಕ್ಕಿಗೆ ಸಾಗಿದ ಜನಾರ್ದನ ರೆಡ್ಡಿ ಕಾರು : ತಪ್ಪಿದ ಅನಾಹುತ
ಓಲಾ ಕಂಪನಿಯಲ್ಲಿ ‘ಓಲಾ ಇವಿ’ ಸ್ಕೂಟರ್‌ಗಳನ್ನು ಖರೀದಿಸಿದ್ದ ಗ್ರಾಹಕರು, ಆ ಸ್ಕೂಟರ್‌ಗಳನ್ನು ಹಿಂದಿರುಗಿಸಲು ಬಯಸಿದ್ದಾರೆ. ಆ ಸ್ಕೂಟರ್‌ಗಳನ್ನು ಕಂಪನಿ ಪಡೆದುಕೊಂಡು, ಅವರಿಗೆ ಪೂರ್ಣ ಹಣ ಹಿಂದಿರುಗಿಸಬೇಕು ಎಂದು ಕುನಾಲ್ ಕಮ್ರಾ ಅವರು ಓಲಾ ಕಂಪನಿಯ ಸಿಇಓ ಭವಿಶ್ ಅಗರ್ವಾಲ್ ಅವರನ್ನು ಒತ್ತಾಯಿಸಿದ್ದಾರೆ.