ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ವಿಷಕಾರಿ ಕೋಲ್‌ಡ್ರಿಪ್ ಸಿರಪ್ ಸೇವಿಸಿದ ಮತ್ತಿಬ್ಬರು ಮಕ್ಕಳು ಸಾವನ್ನಪ್ಪಿದ್ದು ಸದ್ಯ ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಸಿರಪ್ ಸೇವಿಸಿದ ಬಳಿಕ ಕಿಡ್ನಿ ವೈಫಲ್ಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ಮಕ್ಕಳಿಗೆ ಈ ವಿಷಕಾರಿ ಸಿರಪ್ ನೀಡಿದ ಚಿಂದ್ವಾರ ಜಿಲ್ಲೆಯ ಪಾರಾಸಿಯಾದ ಮಕ್ಕಳ ತಜ್ಞ ಪ್ರವೀಣ್ ಸೋನಿ ಎಂಬಾತನನ್ನು ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? 11 ಮಕ್ಕಳ ಸಾವು | ವಿಷಕಾರಿ ಕೋಲ್‌ಡ್ರಿಪ್ ಸಿರಪ್ ಮಾರಾಟ ನಿಷೇಧ
ಮಂಗಳವಾರ ಜಯುಶ ಯದುವಂಶಿ ಎಂಬ ಎರಡು ವರ್ಷದ ಬಾಲಕಿ ಮೃತಪಟ್ಟಿದ್ದು, ಸೋಮವಾರ ಎರಡುವರೆ ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಮಕ್ಕಳ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಸದ್ಯ ಈ ಸಿರಪ್ ಸೇವಿಸಿದ ಚಿಂದ್ವಾರ ಜಿಲ್ಲೆಯ ಆರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ಮಧ್ಯಪ್ರದೇಶ ಪೊಲೀಸರು ರಚಿಸಿದ್ದಾರೆ. ಆದರೆ ಈ ಪ್ರಕರಣದ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ವಿರೋಧ ಪಕ್ಷ ಕಾಂಗ್ರೆಸ್ ಆಗ್ರಹಿಸಿದೆ. ಹಾಗೆಯೇ ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡುವಂತೆಯೂ ಆಗ್ರಹಿಸಲಾಗಿದೆ.
