ಕೇಂದ್ರ ಸಂಪುಟ ಬುಧವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಶೇ. 3ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಈ ನೂತನ ತುಟ್ಟಿಭತ್ಯೆಯು ಜುಲೈ 1 ರಿಂದಲೇ ಜಾರಿಗೆ ಬರಲಿದೆ.
ಕೇಂದ್ರದ ಈ ನಿರ್ಧಾರವು ಸುಮಾರು ಒಂದು ಕೋಟಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಆರ್ಥಿಕ ಲಾಭ ನೀಡಲಿದೆ. ತುಟ್ಟಿಭತ್ಯೆಯು ಜೀವನ ವೆಚ್ಚದ ಏರಿಕೆಯಿಂದ ಉಂಟಾಗುವ ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಲು ಸರ್ಕಾರವು ತನ್ನ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಪಾವತಿಸುವ ಜೀವನ ವೆಚ್ಚ ಇದಾಗಿದೆ.
ಈ ಹೆಚ್ಚಳವು ಕೈಗಾರಿಕಾ ಕಾರ್ಮಿಕರಿಗಾಗಿ ಗ್ರಾಹಕ ಬೆಲೆ ಸೂಚ್ಯಂಕ ದತ್ತಾಂಶದ ಆಧಾರದ ಮೇಲೆ ಶಿಫಾರಸುಗಳಿಗೆ ಅನುಗುಣವಾಗಿ ಮಾಡಲಾಗಿದೆ. ತುಟ್ಟಿಭತ್ಯೆಯನ್ನು ಸಾಮಾನ್ಯವಾಗಿ ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸಲಾಗುತ್ತದೆ, ಇದು ಉದ್ಯೋಗಿಗಳಿಗೆ ಬೆಲೆ ಏರಿಕೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತೇಲುತ್ತಿರುವ ಉತ್ತರ ಕರ್ನಾಟಕ; ಹಾರಾಡುತ್ತಿರುವ ಅಧಿಕಾರಸ್ಥರು
ಈ ವರ್ಷದ ಆರಂಭದಲ್ಲಿ, ಸರ್ಕಾರವು ಮಾರ್ಚ್ನಲ್ಲಿ ಶೇ. 2 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು, ಇದರಿಂದ ತುಟ್ಟಿಭತ್ಯೆಯು ಮೂಲ ವೇತನ ಮತ್ತು ಪಿಂಚಣಿಯ ಶೇ. 53 ರಿಂದ ಶೇ. 55 ಕ್ಕೆ ಏರಿಕೆಯಾಗಲಿದೆ. ಉದಾಹರಣೆಗೆ, ರೂ. 50,000 ಮೂಲ ವೇತನ ಹೊಂದಿರುವ ಉದ್ಯೋಗಿಯು ಕಳೆದ ವರ್ಷದ ಹೆಚ್ಚಳದ ನಂತರ ತುಟ್ಟಿಭತ್ಯೆಯಾಗಿ ರೂ. 26,500 ಪಡೆಯುತ್ತಿದ್ದಾರೆ. ಈ ಹೊಸ ಹೆಚ್ಚಳದೊಂದಿಗೆ, ಈ ಮೊತ್ತವು ಮತ್ತಷ್ಟು ಏರಿಕೆಯಾಗಲಿದೆ.
ಇನ್ನೂ, ಸಂಬಳ ಪರಿಷ್ಕರಣೆ ಹಾಗೂ ಭತ್ಯೆಗಳ ಅಂತಿಮ ನಿರ್ಧಾರವನ್ನು ಎಂಟನೇ ವೇತನ ಆಯೋಗ ತೆಗೆದುಕೊಳ್ಳಲಿದ್ದು, 2026 ಜನವರಿ 1ರಿಂದ ಅದರ ಶಿಫಾರಸುಗಳು ಜಾರಿಗೆ ಬರಲಿವೆ.