ನವರಾತ್ರಿ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ನಡೆಯುವ ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಿಗೆ ಮುಸ್ಲಿಮರ ಪ್ರವೇಶ ನಿರ್ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ (VHP) ಆಯೋಜಕರಿಗೆ ಸೂಚಿಸಿರುವುದು ವಿವಾದಕ್ಕೆ ಕಾರಣವಾಗಿದೆ. VHPಯ ಈ ಕ್ರಮವನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಆಗ್ರಹಿಸಿದ್ದಾರೆ.
VHP, ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಿಗೆ ಬರುವವರ ಗುರುತನ್ನು ಪರಿಶೀಲಿಸುವಂತೆ ಆಯೋಜಕರಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಇದಕ್ಕಾಗಿ ಆಧಾರ್ ಕಾರ್ಡ್ ಪರಿಶೀಲಿಸುವುದು ಹಾಗೂ ಭಾಗವಹಿಸುವವರ ಹಣೆಗೆ ತಿಲಕ ಹಚ್ಚುವ ಮೂಲಕ ಅವರು ಹಿಂದೂಗಳೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಮಾರ್ಗಸೂಚಿ ನೀಡಲಾಗಿದೆ ಎನ್ನಲಾಗಿದೆ.
VHPಯ ಈ ಸೂಚನೆಯನ್ನು ಸಮಾಜವಾದಿ ಪಕ್ಷದ ಶಾಸಕ ರಯೀಸ್ ಶೇಖ್ ‘ಅಸಂವಿಧಾನಿಕ ಫತ್ವಾ’ ಎಂದು ಟೀಕಿಸಿದ್ದಾರೆ.
ಹಬ್ಬಗಳು ಸಮಾಜದಲ್ಲಿ ಸಾಮರಸ್ಯ ಬೆಳೆಸುವ ವೇದಿಕೆಗಳು. ಭಾರತದಲ್ಲಿ ಒಂದು ಸಮುದಾಯದ ಜನರು ಮತ್ತೊಂದು ಸಮುದಾಯದ ಹಬ್ಬಗಳಲ್ಲಿ ಭಾಗವಹಿಸುವ ಪರಂಪರೆ ಇದೆ. ಮುಸ್ಲಿಮರು ಈದ್ ಮತ್ತು ರಂಜಾನ್ ಆಚರಣೆಗಳಿಗೆ ಇತರ ಸಮುದಾಯದವರನ್ನು ಆಹ್ವಾನಿಸುವಂತೆ, ಇತರ ಧರ್ಮಗಳ ಹಬ್ಬಗಳಲ್ಲೂ ಜನರು ಭಾಗವಹಿಸುತ್ತಾರೆ ಎಂದು ಅವರು ಹೇಳಿದ್ದಾರೆ.
VHP ಮತ್ತು ಬಜರಂಗದಳ ಉದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿವೆ ಎಂದು ಆರೋಪಿಸಿರುವ ಶೇಖ್, ಇಂತಹ ಸಂಘಟನೆಗಳು ಕಾನೂನುಬಾಹಿರ ನಿರ್ಬಂಧಗಳನ್ನು ಜಾರಿಗೊಳಿಸುವುದನ್ನು ತಡೆಯಬೇಕು ಎಂದು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
VHPಯ ಸೂಚನೆಯ ಬಗ್ಗೆ ಮಹಾರಾಷ್ಟ್ರ ಸರ್ಕಾರ ತನ್ನ ಅಧಿಕೃತ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಎನ್‌ಸಿಪಿ (ಶರದ್‌ಚಂದ್ರ ಪವಾರ್) ವಕ್ತಾರ ಕ್ಲೈಡ್ ಕ್ರಾಸ್ಟೋ ಆಗ್ರಹಿಸಿದ್ದಾರೆ. VHPಗೆ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ನಿರ್ವಹಿಸುವ ಅಧಿಕಾರವನ್ನು ಸರ್ಕಾರ ನೀಡಿದೆಯೇ? ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ಮಹಾರಾಷ್ಟ್ರ ಸರ್ಕಾರ ಜನರಿಗೆ ತೋರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಶಾಸಕ ಅಮೀನ್ ಪಟೇಲ್ ಕೂಡ VHPಯ ನಿರ್ಬಂಧದ ಕರೆಯನ್ನು ಅಸಂವಿಧಾನಿಕ ಎಂದು ಹೇಳಿದ್ದಾರೆ.
ಹಬ್ಬಗಳು ಕೋಮು ಸೌಹಾರ್ದ ಬೆಳೆಸುವ ಉದ್ದೇಶ ಹೊಂದಿವೆ. ದಾಂಡಿಯಾ ಮತ್ತು ನವರಾತ್ರಿ ಕಾರ್ಯಕ್ರಮಗಳಿಗೆ ವಿವಿಧ ಸಮುದಾಯದವರನ್ನು ಆಹ್ವಾನಿಸುವ ಪರಂಪರೆ ಇದೆ. ಅದೇ ರೀತಿ ಈದ್ ಮತ್ತು ರಂಜಾನ್ ಸಂದರ್ಭದಲ್ಲೂ ಇತರ ಸಮುದಾಯದವರನ್ನು ಆಹ್ವಾನಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
VHPಯ ನಿರ್ಬಂಧದ ಹಿನ್ನೆಲೆಯಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿರುವ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್, ಈ ಕುರಿತು ಭಾಗವತ್ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಭಾಗವತ್ ವಿದೇಶಕ್ಕೆ ತೆರಳಿ ಹಿಂದೂ-ಮುಸ್ಲಿಂ ನಡುವೆ ರಾಜಕೀಯ, ಸಾಮಾಜಿಕ ಅಥವಾ ಧಾರ್ಮಿಕವಾಗಿ ಯಾವುದೇ ಭೇದ ಇರಬಾರದು ಎಂದು ಮಾತನಾಡುತ್ತಾರೆ. ಆದರೆ ಭಾರತದಲ್ಲಿ ಅವರೊಂದಿಗೆ ಸೈದ್ಧಾಂತಿಕವಾಗಿ ನಂಟು ಹೊಂದಿರುವ ಸಂಘಟನೆಗಳು ಮುಸ್ಲಿಮರನ್ನು ಗರ್ಬಾ ಕಾರ್ಯಕ್ರಮಗಳಿಂದ ಹೊರಗಿಡಲು ಮುಂದಾಗಿವೆ ಎಂದು ರಾವತ್ ಟೀಕಿಸಿದ್ದಾರೆ.
‘ವಿದೇಶದಲ್ಲಿ ಒಂದು ನಿಲುವು, ಭಾರತದಲ್ಲಿ ಮತ್ತೊಂದು ನಿಲುವು ನಡೆಯುವುದಿಲ್ಲ. ಮೋಹನ್ ಭಾಗವತ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ರಾವತ್ ಆಗ್ರಹಿಸಿದ್ದಾರೆ.
ಆಗಸ್ಟ್ 29ರಂದು ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವತ್ ‘ಸಾರ್ವತ್ರಿಕ ಏಕತೆ’ ಕುರಿತು ಮಾತನಾಡಿದ್ದರು. ‘ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ, ಆತ ಹಿಂದೂ ಆಗಿ ಉಳಿಯುವುದಿಲ್ಲ. ಹಿಂದೂ ಎಂದು ಕರೆದುಕೊಳ್ಳಬೇಕಾದರೆ ಎಲ್ಲ ಮಾರ್ಗಗಳೂ ಒಂದೇ ಗುರಿಯತ್ತ ಸಾಗುತ್ತವೆ ಎಂಬುದನ್ನು ನಂಬಬೇಕು. ಪ್ರತಿಯೊಬ್ಬ ಮನುಷ್ಯನಿಗೂ ಘನತೆ ಇದೆ. ಮನುಷ್ಯರ ನಡುವೆ ಯಾವುದೇ ಭೇದವಿಲ್ಲ’ ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದರು.
ಈ ಹೇಳಿಕೆಯನ್ನೇ ಉಲ್ಲೇಖಿಸಿರುವ ರಾವತ್, ಇದೀಗ VHPಯ ಮುಸ್ಲಿಂ ವಿರೋಧಿ ನಿರ್ಬಂಧದ ಬಗ್ಗೆ ಭಾಗವತ್ ಪ್ರತಿಕ್ರಿಯಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ VHP, ಮುಸ್ಲಿಮರು ಗರ್ಬಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸೂಕ್ತವಲ್ಲ ಎಂದು ಹೇಳಿದೆ. VHP ವಕ್ತಾರ ಹಾಗೂ ಜಂಟಿ ಕಾರ್ಯದರ್ಶಿ ಶ್ರೀರಾಜ್ ನಾಯರ್ ಅವರ ಪ್ರಕಾರ, ನವರಾತ್ರಿ ಕೇವಲ ಹಾಡು ಮತ್ತು ನೃತ್ಯದ ಕಾರ್ಯಕ್ರಮವಲ್ಲ. ಇದು ದೇವಿಯ ಆರಾಧನೆಯ ಹಬ್ಬ. ಮೂರ್ತಿ ಆರಾಧನೆಯನ್ನು ಒಪ್ಪದ ಮುಸ್ಲಿಮರು ಇಂತಹ ಕಾರ್ಯಕ್ರಮಗಳಲ್ಲಿ ಏಕೆ ಭಾಗವಹಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಆದರೆ ಈ ನಿರ್ಬಂಧವನ್ನು ಮುಸ್ಲಿಮರ ವಿರುದ್ಧದ ಕ್ರಮ ಎಂದು ಪರಿಗಣಿಸಬಾರದು. ಇದು ಮುನ್ನೆಚ್ಚರಿಕಾ ಕ್ರಮ ಮಾತ್ರ ಎಂದು ನಾಯರ್ ಹೇಳಿದ್ದಾರೆ.
ಹಿಂದೂಗಳ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ಹಬ್ಬಗಳ ಧಾರ್ಮಿಕ ಸ್ವರೂಪವನ್ನು ದುರ್ಬಲಗೊಳಿಸಲು ಅವಕಾಶ ನೀಡುವುದಿಲ್ಲ. ಮುಸ್ಲಿಮರಿಗೆ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಹೊಂದಿಕೆಯಾಗದ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಯಮಗಳನ್ನು ಸಡಿಲಿಸುವ ಪ್ರಶ್ನೆಯೇ ಇಲ್ಲ ಎಂದು ನಾಯರ್ ಹೇಳಿದ್ದಾರೆ.
ಇದನ್ನೂ ಓದಿ: ವೈದ್ಯರ ಮೇಲೆ ಶಿವಸೇನೆ ಕಾರ್ಯಕರ್ತರ ದರ್ಪ ಆರೋಪ; ಮುಲಾಜಿಲ್ಲದೆ ಬಂಧಿಸಿ ಎಂದ ಸುಪ್ರೀಂ ಕೋರ್ಟ್
ಮುಸ್ಲಿಮರು ನವರಾತ್ರಿ ಆಚರಣೆಯಲ್ಲಿ ಭಾಗವಹಿಸಲು ಬಯಸಿದರೆ ತಮ್ಮ ಕುಟುಂಬದ ಸದಸ್ಯರು, ಪತ್ನಿಯರು ಮತ್ತು ಸಹೋದರಿಯರೊಂದಿಗೆ ಬರಲಿ. ಅಥವಾ ತಮ್ಮ ಮಸೀದಿ ಅಥವಾ ನಿವಾಸದ ಸ್ಥಳಗಳಲ್ಲಿ ನವರಾತ್ರಿ ಕಾರ್ಯಕ್ರಮ ಆಯೋಜಿಸಲಿ ಎಂದು ಹೇಳಿದ್ದಾರೆ.
ಈ ವರ್ಷ ನವರಾತ್ರಿ ಉತ್ಸವ ಅಕ್ಟೋಬರ್ 11ರಿಂದ ಆರಂಭವಾಗಲಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲೇ VHPಯ ಈ ಮಾರ್ಗಸೂಚಿ ವಿವಾದಕ್ಕೆ ಕಾರಣವಾಗಿದೆ.
ಒಂದೆಡೆ ‘ಎಲ್ಲಾ ಮಾರ್ಗಗಳೂ ಒಂದೇ ಗುರಿಯತ್ತ ಸಾಗುತ್ತವೆ, ಮನುಷ್ಯರ ನಡುವೆ ಭೇದವಿಲ್ಲ’ ಎಂಬ ಭಾಗವತ್‌ರ ವಿದೇಶದ ಹೇಳಿಕೆ, ಮತ್ತೊಂದೆಡೆ ಧಾರ್ಮಿಕ ಗುರುತಿನ ಆಧಾರದ ಮೇಲೆ ಗರ್ಬಾ ಕಾರ್ಯಕ್ರಮಗಳಿಗೆ ಪ್ರವೇಶ ನಿರ್ಬಂಧಿಸುವ VHPಯ ನಡೆಗಳು ವಿವಾದವನ್ನು ತೀವ್ರಗೊಳಿಸಿವೆ.





