ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆಯಿಂದಾಗಿ ತೆರವಾಗಿದ್ದ ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು (ಮಂಗಳವಾರ) ಮತದಾನ ನಡೆಯುತ್ತಿದೆ. ಆದರೆ, ಸಂಸತ್ತಿನ ಉಭಯ ಸದನಗಳ ಒಟ್ಟು 788 ಸಂಸದರು ಮತದಾನದಲ್ಲಿ ಭಾಗಿಯಾಗಿದ್ದಾರೆ. ಆದರೂ, ಇವರಲ್ಲಿ 12 ಮಂದಿ ಸಂಸದರು ಮತದಾನದಿಂದ ದೂರ ಉಳಿದಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಮತ್ತು ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಕಣದಲ್ಲಿದ್ದಾರೆ. ಇಬ್ಬರ ನಡುವೆ ತೀವ್ರ ಸ್ಪರ್ಧೆಯಿದೆ. ಮುಂದಿನ ಉಪರಾಷ್ಟ್ರಪತಿ ಆಯ್ಕೆಯಲ್ಲಿ ಎನ್‌ಡಿಎ ಮತ್ತು ಇಂಡಿಯಾ ಎರಡೂ ಮೈತ್ರಿಕೂಟಗಳ ಭಾಗವಾಗಿರದ ಪಕ್ಷಗಳು ನಿರ್ಣಾಯ ಪಾತ್ರ ವಹಿಸಲಿವೆ. ಇಂತಹ ಸಂದರ್ಭದಲ್ಲಿ, ಪ್ರಮುಖ ಮೂರು ಪ್ರಾದೇಶಿಕ ಪಕ್ಷಗಳ 12 ಸಂಸದರು ಮತದಾನದಿಂದ ಹೊರಗುಳಿದಿದ್ದಾರೆ.
ಒಡಿಶಾದಲ್ಲಿ ಪ್ರಬಲ ಪಕ್ಷವಾಗಿರುವ, ಒಡಿಶಾ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ (ಬಿಜೆಡಿ)ಯ ಎಲ್ಲ ಏಳು ಸಂಸದರು ಮತದಾನದಿಂದ ದೂರ ಉಳಿದಿದ್ದಾರೆ. “ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟ ಎರಡರಿಂದಲೂ ಸಮಾನ ಅಂತರ ಕಾಯ್ದುಕೊಳ್ಳುವುದು ನಮ್ಮ ನೀತಿಯಾಗಿದೆ. ಅದರಂತೆ, ನಾವು ಮತದಾನದಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಂಡಿದ್ದೇವೆ,” ಎಂದು ಬಿಜೆಡಿ ತಿಳಿಸಿದೆ.
ಅಂತೆಯೇ, ತೆಲಂಗಾಣದ ಪ್ರಭಾವಿ ಪ್ರಾದೇಶಿಕ ಪಕ್ಷ, ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ‘ಭಾರತ ರಾಷ್ಟ್ರ ಸಮಿತಿ’ (ಬಿಆರ್‌ಎಸ್) ಕೂಡ ಮತದಾನ ಮಾಡದೇ ಇರಲು ನಿರ್ಧರಿಸಿದೆ. ತನ್ನ ನಾಲ್ವರು ಸಂಸದರನ್ನು ಮತದಾನದಿಂದ ದೂರ ಇರುವಂತೆ ಸೂಚಿಸಿದೆ.
ಮತದಾನವನ್ನು ಬಹಿಷ್ಕರಿಸುವ ಬಗ್ಗೆ ಪ್ರಕಟಣೆ ನೀಡಿರುವ ಬಿಆರ್‌ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ. ರಾಮರಾವ್, “ರಾಜ್ಯದಲ್ಲಿ ಯೂರಿಯಾ ಕೊರತೆ ಗಂಭೀರವಾಗಿದೆ. ಅಗತ್ಯವಿರುವಷ್ಟು ಯೂರಿಯಾ ಪೂರೈಕೆ ಮಾಡುವಂತೆ ಕಳೆದ 20 ದಿನಗಳಿಂದ ಎಚ್ಚರಿಕೆ ನೀಡಿದ್ದರೂ ಕೇಂದ್ರದಿಂದ ಪ್ರತಿಕ್ರಿಯೆ ಸಿಕ್ಕಿಲ್ಲ. ತೆಲಂಗಾಣದ 71 ಲಕ್ಷ ರೈತರ ಪರವಾಗಿ ಏಕತೆ ತೋರಿಸಲು ಪಕ್ಷದ ಸಂಸದರು ಮತದಾನದಿಂದ ಅಂತರ ಕಾಯ್ದುಕೊಳ್ಳಲಿದ್ದಾರೆ. ಮತದಾನದಲ್ಲಿ ನೋಟಾ ಆಯ್ಕೆ ಇದ್ದಿದ್ದರೆ, ನಾವು ನೋಟಾಗೆ ಮತ ಚಲಾಯಿಸುತ್ತಿದ್ದೆವು” ಎಂದು ಹೇಳಿದ್ದಾರೆ.
ಪಂಜಾಬ್‌ನ ಪ್ರಾದೇಶಿಕ ಪಕ್ಷವಾದ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸಂಸತ್ತಿನಲ್ಲಿ ಓರ್ವ ಸಂಸದರನ್ನು ಹೊಂದಿದೆ. ಪಕ್ಷದ ಸಂಸದೆಯಾಗಿರುವ ಹರ್ಸಿಮ್ರತ್ ಕೌರ್ ಬಾದಲ್ ಅವರು ಮತದಾನದಿಂದ ದೂರ ಉಳಿದಿದ್ದಾರೆ. “ಪಂಜಾಬ್‌ನಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಆದರೂ, ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಿಲ್ಲ. ನಿರ್ಲಕ್ಷ್ಯ ಧೋರಣೆ ಪ್ರದೇಶಿಸಿದೆ” ಎಂದು ಆರೋಪಿಸಿದ್ದು, ಮತದಾನವನ್ನು ಬಹಿಷ್ಕರಿಸಿರುವುದಾಗಿ ಘೋಷಿಸಿದ್ದಾರೆ.