ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoJK) ವಿವಿಧ ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರಸ್ತುತ ಭೀಕರ ಹಿಂಸಾಚಾರ ಭುಗಿಲೆದ್ದಿದೆ. ಆರ್ಥಿಕ ಸಂಕಷ್ಟಗಳು ಮತ್ತು ರಾಜಕೀಯ ಸುಧಾರಣೆಗಳನ್ನು ಆಗ್ರಹಿಸಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಭದ್ರತಾ ಪಡೆಗಳ ದಾಳಿಗೆ ಕನಿಷ್ಠ 12 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.
ರಾವಲಕೋಟ್ ಸೇರಿದಂತೆ ಇಡೀ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು, ಸರ್ಕಾರವು ಸಂಪೂರ್ಣವಾಗಿ ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಿ ಅಘೋಷಿತ ಲಾಕ್ಡೌನ್ ಜಾರಿಗೊಳಿಸಿದೆ. ಸುಮಾರು 4,000 ಅರೆಸೇನಾ ಪಡೆಗಳನ್ನು ನಿಯೋಜಿಸುವ ಮೂಲಕ ಮುಜಫರಾಬಾದ್ನತ್ತ ನಡೆಯಲಿರುವ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಸರ್ಕಾರ ಯತ್ನಿಸುತ್ತಿದ್ದು, ಪ್ರದೇಶದ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಜಂಟಿ ಅವಾಮಿ ಆಕ್ಷನ್ ಕಮಿಟಿ ನೇತೃತ್ವದಲ್ಲಿ ಕಳೆದ 40 ದಿನಗಳಿಂದ ನಡೆಯುತ್ತಿರುವ ಈ ಹೋರಾಟವು ಇದೀಗ ಪಾಕಿಸ್ತಾನದ ಆಡಳಿತದ ವಿರುದ್ಧದ ನೇರ ಪ್ರತಿರೋಧವಾಗಿ ಬದಲಾಗಿದೆ. ದಶಕಗಳಿಂದ ವಿದ್ಯುತ್ ಮತ್ತು ಗೋಧಿ ಬೆಲೆ ಏರಿಕೆ ಹಾಗೂ ಸರ್ಕಾರದ ಮಲತಾಯಿ ಧೋರಣೆಯಿಂದ ಶೋಷಣೆಗೆ ಒಳಗಾಗಿದ್ದೇವೆ ಎಂದು ಆರೋಪಿಸುತ್ತಿರುವ ಪ್ರತಿಭಟನಾಕಾರರು, ಈಗ ಆ ಪ್ರದೇಶವು ಸ್ವತಂತ್ರವೂ ಅಲ್ಲ, ವಿವಾದಿತವೂ ಅಲ್ಲ, ಬದಲಿಗೆ ಪಾಕಿಸ್ತಾನದಿಂದ ಆಕ್ರಮಿಸಲ್ಪಟ್ಟ ಪ್ರದೇಶ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಹೋರಾಟದ ನೇತಾರ ಸರ್ದಾರ್ ಅಮನ್ ಖಾನ್ ಅವರು ಅಗತ್ಯ ವಸ್ತುಗಳ ಪೂರೈಕೆಯನ್ನು ಪಾಕಿಸ್ತಾನ ತಡೆಹಿಡಿದರೆ, ನಾವು ಭಾರತದ ನೆರವು ಕೋರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದು ಅಲ್ಲಿನ ರಾಜಕೀಯ ವಾತಾವರಣವನ್ನು ಮತ್ತಷ್ಟು ಹದಗೆಡಿಸಿದೆ.
ಇಷ್ಟೆಲ್ಲಾ ದಮನಕಾರಿ ಕ್ರಮಗಳ ನಡುವೆಯೂ ಪ್ರತಿಭಟನೆಗಳು ಮುಂದುವರಿದಿವೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. JAAC ಸಂಘಟಕರು ಬುಧವಾರ ಮುಜಫರಾಬಾದ್ನತ್ತ ಯೋಜಿತ ಲಾಂಗ್ ಮಾರ್ಚ್ ಅನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಸಾವಿರಾರು ಜನರು ಈ ಮೆರವಣಿಗೆಯಲ್ಲಿ ಸೇರಿಕೊಂಡು ಸರ್ಕಾರದೊಂದಿಗೆ ಮಾತುಕತೆಗೆ ಒತ್ತಾಯಿಸುವ ನಿರೀಕ್ಷೆಯಿದೆ. “ನಾವು 78 ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದೇವೆ, ಈ ಬಾರಿ ನಾವು ಹಿಂದೆ ಸರಿಯುವುದಿಲ್ಲ” ಎಂದು ಸಂವಹನ ಕಡಿತಗೊಳ್ಳುವ ಮುನ್ನ JAAC ಸಂಯೋಜಕರೊಬ್ಬರು ಸಂದೇಶ ಕಳುಹಿಸಿದ್ದಾರೆ. ರಾವಲಕೋಟ್ನಲ್ಲಿರುವ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ಮೃತಪಟ್ಟವರ ಸಾರ್ವಜನಿಕ ಅಂತ್ಯಕ್ರಿಯೆಗೆ ಕುಟುಂಬಗಳಿಗೆ ಅವಕಾಶ ನೀಡಲಾಗಿಲ್ಲ. ಅತ್ಯಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಂಡಿರುವುದರಿಂದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.
ಈ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ಪಾಕಿಸ್ತಾನದ ದಶಕಗಳ ವ್ಯವಸ್ಥಿತ ಶೋಷಣೆ ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆಯೇ ಇಂದಿನ ಈ ದುಸ್ಥಿತಿಗೆ ಕಾರಣ ಎಂದು ತೀವ್ರವಾಗಿ ಟೀಕಿಸಿದೆ. ಪಾಕಿಸ್ತಾನವು ತನ್ನ ಜನರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಬದಲು, ಶಾಂತಿಯುತ ಪ್ರತಿಭಟನಾಕಾರರ ಮೇಲೆ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಅಮಾನವೀಯವಾಗಿ ಬಲಪ್ರಯೋಗ ಮಾಡುತ್ತಿರುವುದು ಮತ್ತು ಅತ್ಯಗತ್ಯ ಆಹಾರ ಹಾಗೂ ಔಷಧ ಪೂರೈಕೆಯನ್ನು ತಡೆಹಿಡಿದಿರುವುದು ಖಂಡನೀಯ ಎಂದು ಸ್ಪಷ್ಟಪಡಿಸಿದೆ. ಪಾಕಿಸ್ತಾನವು ನಡೆಸುತ್ತಿರುವ ಇಂತಹ ದೌರ್ಜನ್ಯಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯವು ಗಮನಹರಿಸಿ, ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಭಾರತ ಆಗ್ರಹಿಸಿದೆ. ಪ್ರಸ್ತುತ ಅಲ್ಲಿನ ಪರಿಸ್ಥಿತಿ ಅತ್ಯಂತ ಭೀಕರವಾಗಿದ್ದು, ಸರ್ಕಾರದ ಕಠಿಣ ದಮನಕಾರಿ ನೀತಿಗಳು ಅಲ್ಲಿನ ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸುತ್ತಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅಜಂ ಖಾನ್ ಜೌಹರ್ ವಿವಿ ಮೇಲೆ ʼಬುಲ್ಡೋಜರ್ʼ ತೂಗುಗತ್ತಿ; ಚುನಾವಣೆ ಹೊಸ್ತಿಲಲ್ಲಿ ಕೋಮು ಧ್ರುವೀಕರಣಕ್ಕೆ ಯತ್ನ?
ಈ ವಿದ್ಯಮಾನಗಳನ್ನು ಗಮನಿಸಿದರೆ, ಕಾಶ್ಮೀರಿಗಳ ಪಾಲಿಗೆ ಗಡಿಯ ಈಚೆ ಮತ್ತು ಆಚೆ ನಡೆಯುತ್ತಿರುವ ದೌರ್ಜನ್ಯಗಳ ಸರಪಳಿಯಿಂದ ಮುಕ್ತಿ ಸಿಗುವುದು ಸದ್ಯಕ್ಕೆ ಮರೀಚಿಕೆಯಾಗಿದೆ ಎನಿಸುತ್ತಿದೆ. ಗಡಿಯ ಆಚೆ (PoJK) ಪಾಕಿಸ್ತಾನದ ವ್ಯವಸ್ಥಿತ ಶೋಷಣೆ, ಅಮಾನವೀಯ ಗುಂಡಿನ ದಾಳಿ ಮತ್ತು ಮೂಲಭೂತ ಹಕ್ಕುಗಳ ದಮನದಿಂದ ಅಲ್ಲಿನ ಜನತೆ ನಲುಗುತ್ತಿದ್ದರೆ, ಗಡಿಯ ಈಚೆಗಿನ ಕಾಶ್ಮೀರಿಗಳು ದಶಕಗಳಿಂದ ಭಯೋತ್ಪಾದನೆ ಮತ್ತು ರಾಜಕೀಯ ಅಸ್ಥಿರತೆಯ ನೇರ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ಅಂತಾರರಾಷ್ಟ್ರೀಯ ರಾಜಕೀಯದ ಆಟದಲ್ಲಿ ಕಾಶ್ಮೀರಿಗಳ ಹಿತಾಸಕ್ತಿಗಳು ಯಾವಾಗಲೂ ಬಲಿಯಾಗುತ್ತಿವೆ.
ಪ್ರಸ್ತುತ PoJK ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಪಾಕಿಸ್ತಾನ ಪಡೆಗಳ ದಮನಕಾರಿ ಕ್ರಮಗಳು, ಅಲ್ಲಿನ ಜನರು ಎಷ್ಟು ಹತಾಶರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ದಶಕಗಳಿಂದ ಪಾಕಿಸ್ತಾನವು ತನ್ನ ಸ್ವಾರ್ಥಕ್ಕಾಗಿ ಈ ಪ್ರದೇಶವನ್ನು ‘ವಿವಾದಿತ’ ಎಂದು ಬಿಂಬಿಸುತ್ತಾ ಅಲ್ಲಿನ ಜನರನ್ನು ಅಭಿವೃದ್ಧಿಯಿಂದ ದೂರ ಇರಿಸಿದೆ. ಗಡಿಯ ಈಚೆಗಿರಲಿ ಅಥವಾ ಆಚೆಯಿರಲಿ, ಕಾಶ್ಮೀರಿಗಳಿಗೆ ರಾಜಕೀಯ ದ್ವೇಷ ಮತ್ತು ಅಧಿಕಾರ ದಾಹದಿಂದ ಶಾಶ್ವತ ಮುಕ್ತಿ ಸಿಗುವವರೆಗೂ, ಈ ಅಶಾಂತಿ ಮತ್ತು ನೋವಿನ ಸಂಕೋಲೆ ಕಳಚುವುದು ಕಷ್ಟಸಾಧ್ಯ.




