ಗುಜರಾತ್‌ನಲ್ಲಿ ಯಾರೂ ಕೇಳರಿಯದ ಕೆಲವು ಅನಾಮಧೇಯ ಪಕ್ಷಗಳಿವೆ. ಅವುಗಳಿಗೆ 4,300 ಕೋಟಿ ರೂ. ದೇಣಿಗೆ ಬಂದಿದೆ. ಈ ಸಾವಿರಾರು ಕೋಟಿ ರೂಪಾಯಿ ಎಲ್ಲಿಂದ ಬಂತು? ಈ ಪಕ್ಷಗಳನ್ನು ಯಾರು ನಡೆಸುತ್ತಿದ್ದಾರೆ? ಮತ್ತು ಈ ಹಣ ಎಲ್ಲಿಗೆ ಹೋಯಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಗುಜರಾತ್‌ನಲ್ಲಿ ಪರಿಚಿತವಲ್ಲದ 10 ರಾಜಕೀಯ ಪಕ್ಷಗಳು ಕಳೆದ ಐದು ವರ್ಷಗಳಲ್ಲಿ 4,300 ಕೋಟಿ ರೂ. ದೇಣಿಗೆ ಪಡೆದಿರುವ ಬಗ್ಗೆ ಹಿಂದಿ ಮಾಧ್ಯಮವೊಂದು ವರದಿ ಮಾಡಿದೆ. ವರದಿ ಉಲ್ಲೇಖಿಸಿ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಅವರು ಬರೆದುಕೊಂಡಿದ್ದಾರೆ.
ಇದೇ ವೇಳೆ ಚುನಾವಣಾ ಆಯೋಗ (ಇ.ಸಿ) ಮೇಲೆ ಮತ್ತೆ ದಾಳಿಗೆ ಇಳಿದು, ಇದನ್ನು ಇ.ಸಿ ತನಿಖೆ ನಡೆಸುವುದೇ ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
“ಚುನಾವಣಾ ಆಯೋಗವು ಈ ಬಗ್ಗೆ ತನಿಖೆ ನಡೆಸುತ್ತಾ? ಅಥವಾ ಇಲ್ಲಿಯೂ ಅಫಿಡವಿಟ್ ಕೇಳುತ್ತಾ? ಅಥವಾ ಈ ದತ್ತಾಂಶವನ್ನು ಮರೆಮಾಚಲು ಕಾನೂನನ್ನೇ ಬದಲಾಯಿಸುತ್ತಾ” ಅಂತ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಆಶ್ಚರ್ಯಕರ ಸಂಗತಿಯೆಂದರೆ, ಈ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವೆಚ್ಚದ ವರದಿಯಲ್ಲಿ ಕೇವಲ 39.02 ಲಕ್ಷ ರೂ. ಖರ್ಚು ಮಾಡಿರುವುದಾಗಿ ತೋರಿಸಿವೆ. ಆದರೆ, ಇದೇ ಪಕ್ಷಗಳ ಆಡಿಟ್ ವರದಿಗಳಲ್ಲಿ ಬರೋಬ್ಬರಿ 3,500 ಕೋಟಿ ರೂ. ಖರ್ಚು ಮಾಡಿರುವುದಾಗಿ ದಾಖಲಾಗಿದೆ. ಇದು ಈಗ ಭಾರೀ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
2019 ಮತ್ತು 2024ರ ಲೋಕಸಭಾ ಚುನಾವಣೆ ಹಾಗೂ 2022ರ ವಿಧಾನಸಭಾ ಚುನಾವಣೆ ಸೇರಿದಂತೆ ಮೂರು ಪ್ರಮುಖ ಚುನಾವಣೆಗಳಲ್ಲಿ ಈ ಪಕ್ಷಗಳು ಒಟ್ಟಾಗಿ ಕಣಕ್ಕಿಳಿಸಿದ್ದು ಕೇವಲ 43 ಅಭ್ಯರ್ಥಿಗಳನ್ನು ಮಾತ್ರ. ಅಷ್ಟೇ ಅಲ್ಲ ಈ ಎಲ್ಲ ಅಭ್ಯರ್ಥಿಗಳು ಸೇರಿ ಗಳಿಸಿದ್ದು ಕೇವಲ 54,069 ಮತಗಳನ್ನು ಮಾತ್ರ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.