ಭಾರತದ ಬಿಲಿಯನೇರ್ಗಳ ಇತಿಹಾಸದಲ್ಲಿ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ ಭಾರತದ ಅತೀ ಶ್ರೀಮಂತರ ಪಟ್ಟಿಯಲ್ಲಿ ಮಹಿಳೆಯೊಬ್ಬರು ಸ್ಥಾನಪಡೆದಿದ್ದಾರೆ. ದೇಶದ ಮೊದಲ 10 ಬಿಲಿಯನೇರ್ಗಳ ಪಟ್ಟಿಯಲ್ಲಿ ರೋಶ್ನಿ ನಾಡರ್ ಮಲ್ಹೋತ್ರಾ ಅವರು 3ನೇ ಸ್ಥಾನ ಪಡೆದಿದ್ದಾರೆ. ಭಾರತ ಅತ್ಯಂತ ಶ್ರೀಮಂತ ಮಹಿಳೆ ಎಂದು ಕರೆಸಿಕೊಂಡಿದ್ದಾರೆ.
ಇತ್ತೀಚೆಗೆ ಬಿಡೆಗಡೆಯಾದ ‘M3M ಹುರುನ್ ಇಂಡಿಯಾ ರಿಚ್ ಲಿಸ್ಟ್-2025’ನಲ್ಲಿ ಅಗ್ರ 10 ಶ್ರೀಮಂತರ ಪಟ್ಟಿಯಲ್ಲಿ ರೋಶ್ನಿ ನಾಡರ್ ಮಲ್ಹೋತ್ರಾ ಹೆಸರು ಕಾಣಿಸಿಕೊಂಡಿದೆ. HCL ಟೆಕ್ನಾಲಜೀಸ್ನ ಅಧ್ಯಕ್ಷೆ ರೋಶ್ನಿ ನಾಡರ್ ಮಲ್ಹೋತ್ರಾ ಅವರು 2.84 ಲಕ್ಷ ಕೋಟಿ ರೂ. ಆಸ್ತಿ ಹೊಂದಿದ್ದಾರೆ.
ಪಟ್ಟಿಯಲ್ಲಿ ಮೋದಿ ಅವರ ಅತ್ಯಾಪ್ತರಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಕ್ರಮವಾಗಿ 1ನೇ ಮತ್ತು 2ನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರ ನಂತರ, 3ನೇ ಸ್ಥಾನದಲ್ಲಿ ರೋಶ್ನಿ ಅವರಿದ್ದಾರೆ. ಅವರು ಅಗ್ರ 3ನೇ ಸ್ಥಾನಕ್ಕೆ ಏರಿರುವುದು ಭಾರತದ ಕಾರ್ಪೋರೇಟ್ ವಲಯದಲ್ಲಿ ಮಹಿಳಾ ನಾಯಕತ್ವವೂ ಪುರುಷರಿಗೆ ಸಮಾನವಾಗಿ ನಿಲ್ಲಲು ಸಾಧ್ಯ ಎಂಬುದನ್ನು ತೋರಿಸಿದ್ದಾರೆ.
ಮಲ್ಹೋತ್ರಾ ಅವರು ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನ ಪದವಿ ಪಡೆದವರಾಗಿದ್ದಾರೆ. 2020ರಲ್ಲಿ ಮಲ್ಹೋತ್ರಾ ಅವರಿಗೆ ಅವರ ತಂದೆ ಶಿವ್ ನಾಡರ್ ಅವರು HCL ಟೆಕ್ನಾಲಜೀಸ್ನ ಅಧ್ಯಕ್ಷ ಹುದ್ದೆಯನ್ನು ಬಿಟ್ಟುಕೊಟ್ಟರು. ಅಂದಿನಿಂದ ರೋಶ್ನಿ ಅವರೇ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. HCL ಸಂಸ್ಥೆಯು ಕ್ಲೌಡ್ ಕಂಪ್ಯೂಟಿಂಗ್, AI-ಚಾಲಿತ ಐಟಿ ಸಲೂಷನ್ಸ್, ಸೈಬರ್ ಭದ್ರತೆ ಹಾಗೂ ಉದ್ಯಮ ಸೇವೆಗಳಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದೆ. ಕಳೆದ ಈ ಐದು ವರ್ಷಗಳಲ್ಲಿ HCL ಸಂಸ್ಥೆಯು ಜಾಗತಿಕ ಐಟಿ ಸೇವೆಗಳನ್ನು ವಿಸ್ತರಿಸಿದೆ. ಜೊತೆಗೆ, ವಿಶ್ವದ ಅತ್ಯುತ್ತಮ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿ ಬೆಳೆದಿದೆ ಎಂದು ವರದಿಯಾಗಿದೆ.
ಗಮನಾರ್ಹವಾಗಿ, ಭಾರತದಲ್ಲಿ 284 ಶತಕೋಟ್ಯಾಧಿಪತಿಗಳು (ಬಿಲಿಯನೇರ್) ಇದ್ದಾರೆ. ಈ 284 ಬಿಲಿಯನೇರ್ಗಳ ಒಟ್ಟು ಸಂಪತ್ತು 98 ಟ್ರಿಲಿಯನ್ ರೂ. (98 ಲಕ್ಷ ಕೋಟಿ ರೂಪಾಯಿ) ಗಳಾಗಿದ್ದು, ಭಾರತದ ಒಟ್ಟು GDPಯ ಸುಮಾರು ಮೂರನೇ ಒಂದು ಭಾಗದಷ್ಟಿದೆ.
ಈ ಲೇಖನ ಓದಿದ್ದೀರಾ?: ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ: ‘Gen-Z’ ಪ್ರತಿಭಟನೆಯ ಭೀತಿ ಕಾರಣವೇ?
ಇದು, ಸಂಪತ್ತಿನ ಕ್ರೋಢೀಕರಣ ಮತ್ತು ಕೇಂದ್ರೀಕರಣವನ್ನು ಎತ್ತಿ ತೋರಿಸುತ್ತದೆ. ಭಾರತವು ಸುಮಾರು 140 ಕೋಟಿ ಜನಸಂಖ್ಯೆಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಈ ಬೃಹತ್ ಜನಸಂಖ್ಯೆಯಲ್ಲಿ ಕೇವಲ 284 ಮಂದಿ ಮಾತ್ರವೇ ಭಾರತದ 1/3ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಅಲ್ಲದೆ, ಇವರ ಆಸ್ತಿಯು ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್ (2025-26ರಲ್ಲಿ 50.65 ಲಕ್ಷ ಕೋಟಿ ರೂ.) ಗಿಂತಲೂ ಎರಡು ಪಟ್ಟು ಹೆಚ್ಚಾಗಿದೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಬೆರಳೆಣಿಕೆಯ ಬಂಡವಾಳ ಶಾಹಿಗಳ ಪರವಾಗಿಯೇ ನೀತಿಗಳನ್ನು ರೂಪಿಸುತ್ತಿದೆ. ಕಾರ್ಪೋರೇಟ್ಗಳ ಆದಾಯ ಮತ್ತು ಸಂಪತ್ತನ್ನು ಹೆಚ್ಚಿಸಲು ಅಗತ್ಯವಿರುವ ಒಪ್ಪಂದಗಳು, ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಭಾರತದ ಬಹುಸಂಖ್ಯಾತ ಬಡವರನ್ನು ಮತ್ತಷ್ಟು ಬಡವರನ್ನಾಗಿಸುತ್ತಿದೆ ಎಂಬ ಗಂಭೀರ ಆರೋಪಗಳಿವೆ.