ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶ ನೀಡುವ ವಿಚಾರ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಆದಾಗ್ಯೂ, ಈವರೆಗೆ ಮಹಿಳೆಯರಿಗೆ ದೇವಾಲಯ ಪ್ರವೇಶ ದೊರೆತಿಲ್ಲ. ಈ ನಡುವೆ, ಮಹಿಳೆಯರ ಪ್ರವೇಶದ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಮಾತನಾಡಿದ್ದು, “ಎಲ್ಲ ವಯಸ್ಸಿನ ಮಹಿಳೆಯರಿಗೆ ದೇವಾಲಯಕ್ಕೆ ಪ್ರವೇಶ ಮತ್ತು ದೇವಸ್ಥಾನದ ಪಾವಿತ್ರ್ಯತೆ ಕುರಿತು ಸುಪ್ರೀಂ ಕೋರ್ಟ್‌ಗೆ ಹೊಸ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ. ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸುವ ಟಿಡಿಬಿಯ ನಿಲುವನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ.
ಎಲ್ಲ ವಯಸ್ಸಿನ ಮಹಿಳೆಯರಿಗೂ ಅಯ್ಯಪ್ಪ ದೇವಾಲಯಕ್ಕೆ ಪ್ರವೇಶ ನೀಡಬೇಕೆಂದು 2016ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. 2018ರಲ್ಲಿ ಅರ್ಜಿ ಆಲಿಸಿದ್ದ ನ್ಯಾಯಾಲಯವು, ‘ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸುವುದು ಅಸಾಂವಿಧಾನಿಕ’ ಎಂದು ಹೇಳಿತ್ತು. ಬಳಿಕ, ಸಿಪಿಐಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರವು ಇಬ್ಬರು ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಮಾಡಿತ್ತು. ಆ ಘಟನೆಯ ಬಳಿಕ, ಕೇರಳದಲ್ಲಿ ಭಾರೀ ಪ್ರತಿಭಟನೆಗಳು-ಗಲಭೆಗಳು ನಡೆದಿದ್ದವು. ಅದೇ ಸಮಯದಲ್ಲಿ, ಮಹಿಳೆಯರಿಗೆ ಪ್ರವೇಶ ನಿರ್ಬಂಧವನ್ನು ಸಮರ್ಥಿಸಿಕೊಂಡು ಕೋರ್ಟ್‌ಗೆ ಟಿಡಿಬಿ ಪ್ರಮಾಣಪತ್ರ ಸಲ್ಲಿಸಿತ್ತು.
ಅಂದಿನಿಂದಲೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಯಲ್ಲಿದೆ. ಈ ನಡುವೆ, ಟಿಡಿಬಿ ತನ್ನ ವಾದ ಮತ್ತು ನಿಲುವನ್ನು ಸಮರ್ಥಿಸಿಕೊಂಡು ಹೊಸ ಪ್ರಮಾಣಪತ್ರ ಸಲ್ಲಿಸಿದೆ ಎನ್ನಲಾಗಿತ್ತು. ಆದರೆ, ಯಾವುದೇ ಹೊಸ ಪ್ರಮಾಣಪತ್ರ ಸಲ್ಲಿಸಲಾಗಿಲ್ಲ ಎಂದು ಪ್ರಶಾಂತ್ ಹೇಳಿದ್ದಾರೆ.
“ಅಯ್ಯಪ್ಪ ದೇವಾಲಯಕ್ಕೆ ಮುಟ್ಟಿನ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡುವ ವಿಚಾರದಲ್ಲಿ ಹೊಸ ನಿರ್ಧಾರಗಳಿಲ್ಲ. ಯಾವುದೇ ಬದಲಾವಣೆಗಳಿಲ್ಲದೆ ದೇವಾಲಯದಲ್ಲಿ ಎಲ್ಲ ರೀತಿಯ ಆಚರಣೆ ಮತ್ತು ಪದ್ದತಿಗಳನ್ನು ಅನುಸರಿಸಲಾಗುತ್ತಿದೆ. ಮಹಿಳೆಯರಿಗೆ ಪ್ರವೇಶದ ವಿಚಾರದಲ್ಲಿ ಟಿಡಿಬಿ ತನ್ನ ನಿಲುವು-ಪದ್ದತಿಗೆ ಬದ್ಧವಾಗಿದೆ” ಎಂದು ಹೇಳಿದ್ದಾರೆ.