ರಾಷ್ಟ್ರೀಯ ಮಹಿಳಾ ಆಯೋಗವು ಮಹಿಳಾ ಸುರಕ್ಷತೆಯ ‘ರಾಷ್ಟ್ರೀಯ ವಾರ್ಷಿಕ ವರದಿ ಮತ್ತು ಸೂಚ್ಯಂಕ’ (NARI-2025) ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯು ಮಹಿಳೆಯರಿಗೆ ಭಾರತದ ನಗರ ಪ್ರದೇಶಗಳಲ್ಲಿನ ಸುರಕ್ಷತಾ ವಸ್ತುಸ್ಥಿತಿ ಮತ್ತು ವಾಸ್ತವತೆಯನ್ನು ವಿವರಿಸಿದೆ. ಗಮನಾರ್ಹ ಸಂಖ್ಯೆಯ ಮಹಿಳೆಯರು ಅಸುರಕ್ಷತೆಯ ಭಾವನೆಯಿಂದ ಜೀವಿಸುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸಿದೆ.
ಭಾರತದ 31 ನಗರಗಳಲ್ಲಿ ಸಮೀಕ್ಷೆ ನಡೆದಿದ್ದು, 12,770 ಮಹಿಳೆಯರು ಸಮೀಕ್ಷೆಗೆ ಒಳಪಟ್ಟಿದ್ದಾರೆ. ಸರ್ಕಾರಗಳ ಸುರಕ್ಷತಾ ಭರವಸೆಗಳ ಹೊರತಾಗಿಯೂ ಪ್ರತಿ 10 ಮಹಿಳೆಯರಲ್ಲಿ ನಾಲ್ವರು (40%) ಅಸುರಕ್ಷಿತ ಭಾವನೆಯನ್ನು ಹೊಂದಿದ್ದಾರೆ. ಸಮಾಜದೊಳಗೆ ತಾವು ಅಸುರಕ್ಷಿತರಾಗಿದ್ದೇವೆ ಎಂದು ಅವರು ಭಾವಿಸಿದ್ದಾರೆ ಎಂಬುದನ್ನು ವರದಿ ಗುರುತಿಸಿದೆ.
ಸುಮಾರು 60% ಮಹಿಳೆಯರು ಸುರಕ್ಷಿತ ಭಾವನೆ ಹೊಂದಿದ್ದರೆ, 40% ಜನರು ತಾವು ‘ಸುರಕ್ಷಿತವಲ್ಲ’ ಎಂದು ಹೇಳಿಕೊಂಡಿದ್ದಾರೆ. ಯುವತಿಯರಲ್ಲಿ ಅಸುರಕ್ಷತೆಯ ಭಾವನೆ ಹೆಚ್ಚಾಗುತ್ತದೆ. 24 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳು ತಮ್ಮ ಸುರಕ್ಷತೆಯ ಬಗ್ಗೆ ಹೆಚ್ಚು ಆತಂಕ ಹೊಂದಿದ್ದಾರೆ ಎಂಬುದು ವರದಿಯಲ್ಲಿ ಕಂಡುಬಂದಿದೆ.
2024ರಲ್ಲಿ ಸಮೀಕ್ಷೆ ಒಳಪಟ್ಟಿದ್ದ 24 ವರ್ಷದೊಳಗಿನ ಹೆಣ್ಣುಮಕ್ಕಳಲ್ಲಿ 7% ಜನರು ತಾವು ಸಾರ್ವಜನಿಕ ಕಿರುಕುಳ ಅನುಭವಿಸಿರುವುದಾಗಿ ಹೇಳಿಕೊಂಡಿದ್ದರು. ಇದು, 2025ರಲ್ಲಿ 14%ಗೆ ಏರಿಕೆಯಾಗಿದೆ. ಅಂದರೆ, ದ್ವಿಗುಣಗೊಂಡಿದೆ. ಗಮನಾರ್ಹವಾಗಿ, ವಿದ್ಯಾರ್ಥಿನಿಯರು ಮತ್ತು ಯುವ ವೃತ್ತಿಪರರು ಶೈಕ್ಷಣಿಕ ಮತ್ತು ಮನರಂಜನಾ ಸ್ಥಳಗಳಲ್ಲಿ ಹೆಚ್ಚು ಅಸುರಕ್ಷತೆಯನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಗಮನಿಸಿದೆ.
ಸುರಕ್ಷತೆ ಅಥವಾ ಪರಿಹಾರದ ಕಾರ್ಯವಿಧಾನದಲ್ಲಿ ವಿಶ್ವಾಸವು ಕುಂದುತ್ತಿದೆ. ಕಿರುಕುಳಕ್ಕೆ ಒಳಗಾದ ಮೂವರು ಹೆಣ್ಣುಮಕ್ಕಳಲ್ಲಿ ಒಬ್ಬರು ಮಾತ್ರ ಔಪಚಾರಿಕ ದೂರು ದಾಖಲಿಸಿದ್ದಾರೆ. ಉಳಿದವರು ಸಾಮಾಜಿಕ ಅಂಜಿಕೆಯಿಂದ ದೂರು ನೀಡಲು ಹಿಂದೆ ಸರಿದಿದ್ದಾರೆ. ಮಾತ್ರವಲ್ಲದೆ, ಅವರು ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. 75% ಮಹಿಳೆಯರು ತಮ್ಮ ದೂರುಗಳಿಗೆ ಅಧಿಕಾರಿಗಳು ಪರಿಹಾರ/ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವೇ ಇಲ್ಲವೆಂದು ಹೇಳಿಕೊಂಡಿದ್ದಾರೆ.
ಕಿರುಕುಳ/ದೌರ್ಜನ್ಯದ ಘಟನೆಗಳು ವರದಿಯಾದಾಗಲೂ, ಕೇವಲ 22% ಮಾತ್ರ ಔಪಚಾರಿಕವಾಗಿ ಪ್ರಕರಣ ದಾಖಲಾಗುತ್ತವೆ. ದಾಖಲಾದ ಪ್ರಕರಣಗಳಲ್ಲಿಯೂ ಕೇವಲ 16%ರಷ್ಟು ಕೇಸ್‌ಗಳಲ್ಲಿ ಮಾತ್ರವೇ ಕ್ರಮ ಕೈಗೊಳ್ಳಲಾಗುತ್ತದೆ. ಇದು ವ್ಯವಸ್ಥೆಯ ಮೇಲಿನ ಅಪನಂಬಿಕೆಗೆ ಕಾರಣವಾಗಿದೆ.
ಮಹಿಳೆಯರ ಮೇಲೆ ನಡೆಯುತ್ತಿರುವ ಕಿರುಕುಳ/ದೌರ್ಜನ್ಯ ಘಟನೆಗಳಲ್ಲಿ 38% ಪ್ರಕರಣಗಳು ನೆರೆಹೊರೆಯಲ್ಲಿ ಮತ್ತು 29% ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಸಂಭವಿಸುತ್ತವೆ ಎಂದು ವರದಿ ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಒಳಮೀಸಲಾತಿ : ‘ಎಕೆ, ಎಡಿ, ಎಎ’ ಸಮಸ್ಯೆ ಜೀವಂತ ಉಳಿಸಿದ ರಾಜ್ಯ ಸರ್ಕಾರ
ಕೆಲಸದ ಸ್ಥಳಗಳಲ್ಲಿ ಸುರಕ್ಷತೆಯು ವಿರೋಧಾಭಾಸದಿಂದ ಕೂಡಿದೆ. ಬಹುಪಾಲು (91%) ಮಹಿಳೆಯರು ತಮ್ಮ ಕಚೇರಿ ವಾತಾವರಣವು ಸುರಕ್ಷಿತ ಭಾವನೆಯಿಂದ ಕೂಡಿದೆ ಎಂದು ಹೇಳಿಕೊಂಡಿದ್ದಾರೆ. ಆದಾಗ್ಯೂ, ತಮ್ಮ ಸಂಸ್ಥೆಗಳಲ್ಲಿ ‘ಕಡ್ಡಾಯ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ’ (POSH) ಕಾರ್ಯವಿಧಾನವನ್ನು ಜಾರಿಗೆ ತಂದಿರುವ ಬಗ್ಗೆ ಖಾತ್ರಿ ಇಲ್ಲವೆಂದು ಅರ್ಧದಷ್ಟು ಮಹಿಳೆಯರು ಹೇಳಿದ್ದಾರೆ ಎಂಬುದನ್ನು ವರದಿ ತಿಳಿಸಿದೆ.
‘ಪಾಶ್’ ಬಗ್ಗೆ ಅರಿವು ಹಿಂದಿರುವವರಲ್ಲಿ ಹೆಚ್ಚಿನಸವರು ಇದು ಪರಿಣಾಮಕಾರಿ ಎಂದಿದ್ದಾರೆ. ‘ಪಾಶ್’ ಕುರಿತಾದ ಜಾಗೃತಿಯು ಕಾನೂನಿನಷ್ಠೇ ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ.
ಮಹಿಳೆಯರ ಸುರಕ್ಷತೆಯನ್ನು ದೈಹಿಕ ರಕ್ಷಣೆಗೆ ಮಾತ್ರ ಸೀಮಿತವಲ್ಲ. ಮಹಿಳೆಯರ ಚಲನಶೀಲತೆ, ಅವಕಾಶ ಮತ್ತು ಘನತೆಯನ್ನು ಖಾತ್ರಿ ಪಡಿಸುವ ಮಾನಸಿಕ, ಆರ್ಥಿಕ ಹಾಗೂ ಡಿಜಿಟಲ್ ಭದ್ರತೆಯನ್ನು ಒಳಗೊಂಡಿರಬೇಕು ಎಂದು ವರದಿ ಒತ್ತಿಹೇಳುತ್ತದೆ.
ಸುರಕ್ಷತೆಯ ಭಾವನೆಯು ಸಮಯ ಮತ್ತು ಸ್ಥಳದ ಆಧಾರದ ಮೇಲೆ ಬದಲಾಗುತ್ತದೆ. ಮಹಿಳೆಯರು ಹಗಲಿನಲ್ಲಿ ಕಚೇರಿಗಳು ಮತ್ತು ಕ್ಯಾಂಪಸ್‌ಗಳಲ್ಲಿ ಸುರಕ್ಷತಾ ಭಾವನೆ ಹೊಂದಿದ್ದರೂ, ಕತ್ತಲಾಗುತ್ತಿದ್ದಂತೆ ಸುರಕ್ಷತೆಯ ಆತ್ಮವಿಶ್ವಾಸ ಕುಸಿಯುತ್ತದೆ. ಕಳಪೆ ಬೀದಿ ದೀಪ ಮತ್ತು ಸಾರ್ವಜನಿಕ ಸಾರಿಗೆಗಳಲ್ಲಿ ವಿಶ್ವಾಸಾರ್ಹತೆ ಕೊರತೆಯು ಆತಂಕವನ್ನು ಹೆಚ್ಚಿಸುತ್ತದೆ ಎಂಬುದನ್ನು ವರದಿ ವಿವರಿಸಿದೆ.