ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ವಿರುದ್ಧ ನಡೆಯುತ್ತಿರುವ ದ್ವೇಷದ ಅಭಿಯಾನವನ್ನು ಖಂಡಿಸಿ ಮತ್ತು ಸ್ವಾಮೀಜಿಯವರನ್ನು ಬೆಂಬಲಿಸಿ ಅನೇಕರು ಹೇಳಿಕೆಗಳನ್ನು ನೀಡಿದ್ದಾರೆ.
ವಿವಿಧ ಮಠಗಳ ಸ್ವಾಮೀಜಿಗಳು, ಹೋರಾಟಗಾರರು, ಬರಹಗಾರರು ನೀಡಿರುವ ಹೇಳಿಕೆಗಳನ್ನು ಒಳಗೊಂಡ ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಸಾಣೇಹಳ್ಳಿ ಶ್ರೀಗಳ ಕುರಿತು ನಿಂದನಾತ್ಮಕವಾಗಿ ಲೇಖನವನ್ನು ಪ್ರಕಟಿಸಿದ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಆಕ್ರೋಶ ಹೊರಹಾಕಲಾಗುತ್ತಿದೆ.
ಬೆಂಗಳೂರಿನ ಬಸವೇಶ್ವರ ಜ್ಞಾನಪೀಠದ ಅಧ್ಯಕ್ಷರಾದ ಡಾ.ಚನ್ನಬಸವಾನಂದ ಸ್ವಾಮೀಜಿ ಪ್ರತಿಕ್ರಿಯಿಸಿ, “ಸಾಣೇಹಳ್ಳಿ ಸ್ವಾಮೀಜಿಯವರು ಗಣಪತಿ ಪೂಜೆ ನಮ್ಮ ಸಂಸ್ಕೃತಿಯಲ್ಲ ಎಂದು ಹೇಳಿರುವುದರಲ್ಲಿ ಯಾವುದೇ ತಪ್ಪೂ ಇಲ್ಲ. ಯಾಕೆಂದರೆ ಶರಣರ ಸಿದ್ಧಾಂತಗಳಲ್ಲಿ ಕಾಲ್ಪನಿಕ ದೇವತೆಗಳ ಪೂಜೆಗೆ ಜಾಗವೇ ಇಲ್ಲ. ಪಂಚಾಚಾರಗಳಲ್ಲಿ ಮೊದಲನೆಯದೇ ಲಿಂಗಾಚಾರ. ನಮ್ಮೊಳಗಿನ ಚೇತನದ ಕುರುಹಾದ ಇಷ್ಟಲಿಂಗದ ಹೊರತು; ಗುರು ಲಿಂಗ ಮತ್ತು ಜಂಗಮದ ಹೊರತು ಯಾವ ಪೂಜೆಯೂ ಲಿಂಗಾಯತ ಧರ್ಮದಲ್ಲಿ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಬೀದರ್ ಬಸವ ಮಂಟಪದ ಮಾತೆ ಸತ್ಯಾದೇವಿ ಅವರು ಪ್ರತಿಕ್ರಿಯಿಸಿದ್ದು, “ಸಾಣೇಹಳ್ಳಿ ಪೂಜ್ಯರು ಹೇಳಿದ್ದು ತಪ್ಪಲ್ಲ. ಭಟ್ಟರು ಹೇಳುವ ಆನೆಯ ಸೊಂಡಿಲು ದೊಡ್ಡ ಹೊಟ್ಟೆಯ ಗಣಪತಿಗೆ ಯಾವುದೇ ಇತಿಹಾಸವಿಲ್ಲ. ಅಷ್ಟಕ್ಕೂ ಪೂಜ್ಯರು ಮಾತನಾಡಿದ್ದು ಲಿಂಗಾಯತರನ್ನು ಎಚ್ಚರಿಸಲು. ಅದು ಲಿಂಗಾಯತ ಮಠಾಧೀಶ ಗುರುಗಳ ಕರ್ತವ್ಯ. ಅವರು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನೆರವೇರಿಸಿದ್ದಾರೆ. ಭಟ್ಟರೇ ನೀವು ಯಾವುದೇ ಪೂಜೆ ಮಾಡಿ, ಲಿಂಗಾಯತರನ್ನು ದಾರಿ ತಪ್ಪಿಸಬೇಡಿ” ಎಂದು ಹೇಳಿದ್ದಾರೆ.
ಉಳವಿ ಧರ್ಮಕ್ಷೇತ್ರದ ಚನ್ನಬಸವೇಶ್ವರ ಮಹಾಮನೆಯ ಡಾ.ಬಸವ ಪ್ರಕಾಶ ಸ್ವಾಮೀಜಿ ಮಾತನಾಡಿದ್ದು, “ಸಾಣೆಹಳ್ಳಿ ಸ್ವಾಮೀಜಿಯವರ ಹೇಳಿಕೆ ಸಾರ್ವಕಾಲಿಕ ಸತ್ಯವಾಗಿದೆ. ಅವೈದಿಕ ಪರಂಪರೆಯ ಲಿಂಗಾಯತರ ಧರ್ಮದಲ್ಲಿ ವಿಘ್ನ ನಿವಾರಕ ಎನಿಸಿಕೊಂಡಿರುವ ಗಣಪತಿ ಪೂಜೆ ಇಲ್ಲವೇ ಇಲ್ಲ. ಇದೇ ವಿಚಾರವನ್ನು ಶ್ರೀಗಳು ಗಟ್ಟಿತನದಿಂದ ಹೇಳಿದ್ದು ಲಿಂಗಾಯತ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ. ಇದನ್ನು ಬಹುಮುಖ್ಯವಾಗಿ ಲಿಂಗಾಯತರು ಅರಿತುಕೊಳ್ಳಬೇಕು” ಎಂದು ತಿಳಿಸಿದ್ದಾರೆ.
ಅತ್ತಿವೇರಿ ಬಸವ ಧಾಮದ ಬಸವೇಶ್ವರಿ ಮಾತಾಜಿ ಮಾತನಾಡಿದ್ದು, “ನಂಬಿದ ಹೆಂಡತಿಗೆ ಗಂಡನೊಬ್ಬನೇ ಕಾಣಿರೋ, ನಂಬಬಲ್ಲ ಭಕ್ತಂಗೆ ದೇವನೊಬ್ಬನೇ ಕಾಣಿರೋ, ಅನ್ಯ ದೈವವೆಂಬುದು ಹಾದರ ಕಾಣಿರೋ…’ ಎಂದು ಗುರು ಬಸವಣ್ಣ ಸ್ಪಷ್ಟವಾಗಿ ಹೇಳಿದ್ದಾರೆ. ಅಂಗದ ಮೇಲಿನ ಲಿಂಗವನ್ನು ಬಿಟ್ಟು ಮತ್ತೇನನ್ನೂ ಪೂಜಿಸಬಾರದು ಎಂದು ಲಿಂಗಾಯತ ಧರ್ಮ ಪ್ರತಿಪಾದಿಸುತ್ತದೆ. ಲಿಂಗವಂತರಾದ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು ಲಿಂಗವಂತರಿಗೆ ಬುದ್ಧಿ ಹೇಳಿದರೆ ವಿಶ್ವೇಶ್ವರ ಭಟ್ಟರಿಗೇಕೆ ಈ ಪರಿಯ ಸಂಕಟ?” ಎಂದು ಪ್ರಶ್ನಿಸಿದ್ದಾರೆ.
ಬೀದರ್‌ನ ಲಿಂಗಾಯತ ಮಹಾಮಠ ಮತ್ತು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣದೇವಿ ಮಾತನಾಡಿದ್ದು, “ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ನಿರ್ಮೂಲನೆ ಶರಣ ಚಳವಳಿಯ ಮೂಲ ಉದ್ದೇಶಗಳಲ್ಲಿ ಒಂದಾಗಿತ್ತು. ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿಗೈದ ವಿಶ್ವಗುರು ಬಸವಣ್ಣನವರು ಅಗ್ರಹಾರದ ವೈದಿಕ ಮನೆತನದಿಂದಲೇ ಬಂದವರು ಎಂಬುವುದನ್ನು ವಿಶ್ವೇಶ್ವರ ಭಟ್ಟರು ಮರೆತಂತಿದೆ. ಭಟ್ಟರು ಪತ್ರಕರ್ತರು ಎಂಬ ಗೌರವ ನಮ್ಮಲ್ಲಿತ್ತು. ಆದರೆ ಅವರಿಗೆ ಇನ್ನೊಂದು ಮುಖ ಇದೆಯೆಂದು ತಿಳಿಯಿತು. ಅನ್ಯಧರ್ಮ, ಪರಂಪರೆಗಳಲ್ಲಿ ಮೂಗುಹಾಕದೆ, ಎಲ್ಲಾ ಧರ್ಮ, ಸಂಸ್ಕೃತಿಗಳನ್ನು ಗೌರವಿಸುವುದನ್ನು ಭಟ್ಟರು ರೂಢಿಸಿಕೊಳ್ಳಬೇಕು” ಎಂದು ಬುದ್ಧಿಮಾತು ಹೇಳಿದ್ದಾರೆ.
ಹಿರಿಯ ವಕೀಲರಾದ ಸಿ.ಎಸ್.ದ್ವಾರಕನಾಥ್ ಖಾರವಾಗಿ ಪ್ರತಿಕ್ರಿಯಿಸಿದ್ದು, “ಈ ವಿಷಭಟ್ಟ ನಿರ್ಲಕ್ಷಕ್ಕೆ ಅರ್ಹ. ಈತನಿಗೆ ಬಸವ ತತ್ವದ ಶರಣರು ಯಾವ ಕಾರಣಕ್ಕೂ ಸ್ಪಂದಿಸಬಾರದು. ಈತನನ್ನು ಟೀಕಿಸಿದರೂ ಈತನಿಗೆ ಕನಿಷ್ಠ ಮೌಲ್ಯ ಬಂದುಬಿಡುತ್ತದೆ” ಎಂದು ಎಚ್ಚರಿಸಿದ್ದಾರೆ.
ಶಿಕ್ಷಣ ತಜ್ಞರಾದ ವಿ.ಪಿ.ನಿರಂಜನಾರಾಧ್ಯ ಅವರು ಮಾತನಾಡಿದ್ದು, “ಬಸವ ತತ್ವವನ್ನು ಎಲ್ಲೆಡೆ ಪಸರಿಸುವ ಮೂಲಕ ನುಡಿದಂತೆ ನಡೆಯುತ್ತಿರುವ, ನಮ್ಮೆಲ್ಲರ ಪ್ರೀತಿಯ ಸಾಣೇಹಳ್ಳಿ ಸ್ವಾಮೀಜಿಯವರ ವಿಚಾರಧಾರೆಯನ್ನು ಶರಣರ ಸಂದೇಶವನ್ನು ಎತ್ತಿಹಿಡಿದ ಅವರ ವೈಚಾರಿಕ ನಿಲುವನ್ನು ನಾವು ಪೂರ್ಣಪ್ರಮಾಣದಲ್ಲಿ ಬೆಂಬಿಸಿ ಅವರೊಂದಿಗೆ ನಿಲ್ಲುತ್ತೇವೆ” ಎಂದು ಘೋಷಿಸಿದ್ದಾರೆ.
ಹೀಗೆ ಅನೇಕ ಚಿಂತಕರು, ಬರಹಗಾರರು, ಹೋರಾಟಗಾರರು, ಸ್ವಾಮೀಜಿಗಳು ಪ್ರತಿಕ್ರಿಯಿಸಿರುವ ಪೋಸ್ಟರ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್‌ಗಳು ಈ ಕೆಳಗಿವೆ.
ಇದನ್ನೂ ಓದಿರಿ: ಸಾಣೇಹಳ್ಳಿ ಶ್ರೀಗಳ ನಿಲುವು ಬೆಂಬಲಿಸಿದ ಲಿಂಗಾಯತ ಸ್ವಾಮೀಜಿಗಳು ಹೇಳಿದ್ದೇನು?