ದೇಶದಲ್ಲಿ 2023-24ರ ಹಣಕಾಸು ವರ್ಷದಲ್ಲಿ ಚಿನ್ನದ ಆಮದು ಬರೋಬ್ಬರಿ ಶೇಕಡ 30ರಷ್ಟು ಏರಿಕೆಯಾಗಿದೆ. ಕಳೆದ ವರ್ಷದಲ್ಲಿ 45.54 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಚಿನ್ನದ ಆಮದು ಹೇಗೆ ಹೆಚ್ಚಾಗುತ್ತಿದೆಯೋ ಹಾಗೆಯೇ ಚಿನ್ನವನ್ನು ಅಡಮಾನ ಇಟ್ಟು ಸಾಲ ಪಡೆಯುವವರ ಪ್ರಮಾಣವೂ ಹೆಚ್ಚಾಗುತ್ತಿದೆ.
ಹೌದು, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ‘ಗೋಲ್ಡ್ ಲೋನ್’ ಪಡೆಯುವವರ ಪ್ರಮಾಣವು ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಆದರೆ ಬೀದಿಗೊಂದರಂತೆ ಹುಟ್ಟಿಕೊಳ್ಳುತ್ತಿರುವ ಚಿನ್ನದ ಮೇಲೆ ಸಾಲ ಕೊಡುವ ಹಣಕಾಸು ಸಂಸ್ಥೆಗಳು ನಡೆಸುತ್ತಿರುವ ಅಕ್ರಮಗಳನ್ನು ಅಲ್ಲಗಳೆಯುವಂತಿಲ್ಲ. ಇತ್ತೀಚೆಗೆ ಈ ಅಕ್ರಮಗಳತ್ತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬೊಟ್ಟು ಮಾಡಿದ್ದು, ಆ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.
ಹಣಕಾಸು ವರ್ಷ 2024-2025ರ ಮೊದಲ ತ್ರೈಮಾಸಿಕದಲ್ಲಿ ಗೋಲ್ಡ್ ಲೋನ್ ಮಂಜೂರಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇಕಡ 26ರಷ್ಟು ಏರಿಕೆಯಾಗಿದೆ. ಹಾಗೆಯೇ ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡ 32ರಷ್ಟು ಜಿಗಿತ ಕಂಡಿದೆ. ಅಂದರೆ, ಹಣಕಾಸು ಉದ್ಯಮ ಅಭಿವೃದ್ಧಿ ಮಂಡಳಿಯ ಅಂಕಿಅಂಶಗಳ ಪ್ರಕಾರ ಒಟ್ಟಾರೆಯಾಗಿ 79,217 ಕೋಟಿ ರೂಪಾಯಿ ಗೋಲ್ಡ್ ಲೋನ್ ಮಂಜೂರಾತಿಯಾಗಿದೆ.
ಈ ಒಂದು ತ್ರೈಮಾಸಿಕದಲ್ಲಿ ಗೋಲ್ಡ್ ಲೋನ್ ಮಂಜೂರಾತಿ ಪ್ರಮಾಣ ಹೆಚ್ಚಾಗಿರುವುದಲ್ಲ. ಬದಲಾಗಿ ಹಲವಾರು ತ್ರೈಮಾಸಿಕಗಳಿಂದ ಚಿನ್ನ ಅಡಮಾನವಿಟ್ಟು ಸಾಲ ಪಡೆಯುವವರ ಪ್ರಮಾಣವು ಅಧಿಕಗೊಳ್ಳುತ್ತಿವೆ.
ಇದನ್ನು ಓದಿದ್ದೀರಾ? ವಿಜಯಪುರ | ಚಿಟ್ ಫಂಡ್ ಕಂಪೆನಿ ವಂಚನೆ; ಸಂತ್ರಸ್ತ ಠೇವಣಿದಾರರ ಹೋರಾಟಕ್ಕೆ ಡಿಎಸ್ಎಸ್ ಬೆಂಬಲ
ಈ ಹಿಂದೆ ಸಾಲ ಪಡೆಯಬೇಕಾದರೆ ಅಲೆದಾಡಬೇಕಾಗಿತ್ತು. ಆದರೆ ಈಗ ಮನೆಯಲ್ಲಿ ಚಿನ್ನವಿದ್ದರೆ ಸಾಕು ನಿಮಗೆ ಚಿಂತೆ ಬೇಡ ನಾವೇ ಸಾಲ ನೀಡುತ್ತೇವೆ ಎಂದು ಹೇಳಿಕೊಳ್ಳುವ ಅದೆಷ್ಟೋ ಸಂಸ್ಥೆಗಳು ಹುಟ್ಟಿಕೊಂಡಿವೆ. ತೀವ್ರ ಪೈಪೋಟಿ ಇದ್ದರೂ ಕೂಡಾ ಗೋಲ್ಡ್ ಲೋನ್ ಪಡೆಯುವವರ ಸಂಖ್ಯೆಯೂ ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ಹಣದುಬ್ಬರ, ಬೆಲೆ ಏರಿಕೆ ಎಂದರೆ ತಪ್ಪಾಗಲಾರದು.
2023ರಲ್ಲಿ ಏಪ್ರಿಲ್-ಜೂನ್ ತಿಂಗಳಲ್ಲಿ ಗೋಲ್ಡ್ ಲೋನ್ ಪ್ರಮಾಣ ಶೇಕಡ 10ರಷ್ಟು ಏರಿಕೆಯಾಗಿದೆ. ಆದರೆ, 2024ರ ಆಗಸ್ಟ್ ತಿಂಗಳ ವೇಳೆಗೆ ಚಿನ್ನದ ಸಾಲಗಳು ವರ್ಷದಿಂದ ವರ್ಷಕ್ಕೆ ಸುಮಾರು ಶೇಕಡ 41ರಷ್ಟು ಬೆಳೆದು, 1.4 ಲಕ್ಷ ಕೋಟಿ ರೂ.ಗೆ ತಲುಪಿದೆ.
ಗೋಲ್ಟ್ ಲೋನ್ ಸಂಸ್ಥೆಗಳಿಗೆ ಆರ್‌ಬಿಐ ತರಾಟೆ
ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಗೋಲ್ಡ್ ಲೋನ್‌ನ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಪರಿಶೀಲಿಸುವಂತೆ ಸೋಮವಾರ ಆರ್‌ಬಿಐ ತಿಳಿಸಿದೆ. ಜೊತೆಗೆ ಯಾವುದೇ ನ್ಯೂನತೆಗಳಿದ್ದರೂ ಕೂಡಾ ಅದನ್ನು ಮೂರು ತಿಂಗಳ ಒಳಗಾಗಿ ಬಗೆಹರಿಸುವಂತೆ ನಿರ್ದೇಶಿಸಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಬ್ಯಾಂಕ್ ಸಾಲದ ನೋಟಿಸ್‌ಗೆ ಹೆದರಿ ಪೆಟ್ರೊಲ್ ಸುರಿದುಕೊಂಡು ರೈತ ಆತ್ಮಹತ್ಯೆ
ಗೋಲ್ಡ್ ಲೋನ್‌ಗಳನ್ನು ನೀಡುವ ಸಂಸ್ಥೆಯು ಸರಿಯಾದ ಮೌಲ್ಯಮಾಪನ ಮಾಡದೆಯೇ ಟಾಪ್-ಅಪ್‌ಗಳನ್ನು ನೀಡಿರುವುದು, ಸಾಲ ನವೀಕರಣ ಮಾಡಿರುವುದು, ಕೆಟ್ಟ ಸಾಲಗಳ (bad loans) ಪ್ರಮಾಣ ಅಧಿಕವಾಗಿರುವುದರತ್ತ ಆರ್‌ಬಿಐ ಬೊಟ್ಟು ಮಾಡಿದೆ.
ಗೋಲ್ಡ್ ಲೋನ್ ಹೆಸರಲ್ಲಿ ಅಕ್ರಮ, ಸಮಸ್ಯೆಗಳು
ಸಾಮಾನ್ಯವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಗೋಲ್ಡ್ ಲೋನ್ ಪಡೆಯಲಾಗುತ್ತದೆ. ಆದರೆ ಅದೀಗ ಬದಲಾಗುತ್ತಿದೆ. ಅಕ್ರಮವಾಗಿ ಗೋಲ್ಡ್ ಲೋನ್ ಬಡ್ಡಿದರವನ್ನು ಏರಿಸಲಾಗುತ್ತಿದೆ. ಸಾಲ ನೀಡುವ ಕೆಲವು ಸಂಸ್ಥೆಗಳು ಆರಂಭದಲ್ಲಿ ಕಡಿಮೆ ಬಡ್ಡಿದರ ವಿಧಿಸಿದರೂ ಕೂಡಾ ತಿಂಗಳುಗಳು ಕಳೆಯುತ್ತಿದ್ದಂತೆ ಬಡ್ಡಿ ಮೇಲೆ ಚಕ್ರ ಬಡ್ಡಿ ವಿಧಿಸುತ್ತಾ ಹೋಗುತ್ತಾರೆ. ಇನ್ನು ಕೆಲವು ನಕಲಿ ದಾಖಲೆಗಳನ್ನು ಸೃಷ್ಟಿಸಿ ಗೋಲ್ಡ್ ಲೋನ್ ಪಡೆಯುವ ಅಕ್ರಮಗಳು ಕೂಡಾ ನಡೆಯುತ್ತಿದೆ.
ಕೆಟ್ಟ ಸಾಲಗಳ ಆತಂಕವೂ ಕೂಡಾ ಹೆಚ್ಚಾಗಿದೆ. ಈ ಹಿಂದೆ ಗ್ರಾಹಕನಿಗೆ ನೀಡಲಾದ ಸಾಲವು ಮರುಪಾವತಿ ಆಗುವುದಿಲ್ಲ ಎಂದು ಸಂಸ್ಥೆ ಅಥವಾ ಬ್ಯಾಂಕ್ ಪರಿಗಣಿಸಿದಾಗ ಅದನ್ನು ಕೆಟ್ಟ ಸಾಲದ ಲೆಕ್ಕಕ್ಕೆ ಸೇರಿಸಲಾಗುತ್ತದೆ. ಈ ರೀತಿ ಕೆಟ್ಟ ಸಾಲಗಳು ಹೆಚ್ಚಾಗುತ್ತಿರುವುದು ದೇಶದ ಆರ್ಥಿಕ ಸ್ಥಿತಿಗೂ ಕೆಟ್ಟ ಪರಿಣಾಮ ಬೀರುತ್ತದೆ. ಸಾಲ ಮರುಪಾವತಿಯಾಗದಿದ್ದರೆ ಬ್ಯಾಂಕ್‌ಗೆ ಲಾಭಾಂಶ ಕಡಿಮೆಯಾಗುತ್ತದೆ. ಇದು ಒಟ್ಟಾರೆ ಹಣಕಾಸು ವಹಿವಾಟಿನ ಮೇಲೆ ಪ್ರಭಾವ ಬೀರುತ್ತದೆ. ಗೋಲ್ಡ್ ಲೋನ್ ವಿಚಾರಕ್ಕೆ ಬಂದಾಗ ಚಿನ್ನವು ಅಡಮಾನವಾಗಿ ಇರುತ್ತದೆಯಾದರೂ ಸಾಲ ಮರುಪಾವತಿ ಆಗದಿದ್ದಾಗ ಅದರ ಹರಾಜಿಗೆ ಸಾಕಷ್ಟು ಪ್ರಕ್ರಿಯೆಗಳು, ಮಾನದಂಡಗಳಿವೆ. ಆದರೆ ಕೆಲವೊಂದು ಹಣಕಾಸು ಸಂಸ್ಥೆಗಳು ಈ ಮಾನದಂಡಗಳನ್ನು ಪಾಲಿಸುತ್ತಿಲ್ಲ.
ಇದನ್ನು ಓದಿದ್ದೀರಾ? ಆನ್‌ಲೈನ್ ಗೇಮಿಂಗ್ ಚಟ | 96 ಲಕ್ಷ ರೂ. ಸಾಲ ಮಾಡಿದ ವಿದ್ಯಾರ್ಥಿ; ಪತ್ರಕರ್ತನ ಮುಂದೆ ಕಣ್ಣೀರು!
ಗೋಲ್ಡ್ ಲೋನ್: ಕಷ್ಟಕಾಲವೇ, ಸುಲಭವೇ?
ನಮ್ಮಲ್ಲಿ ಸಾಲ ಪಡೆಯಲು ಯಾವುದೇ ಆಯ್ಕೆಯಿಲ್ಲವೆಂದಾದಾಗ ಚಿನ್ನವನ್ನು ಅಡವಿಟ್ಟು ಸಾಲ ಪಡೆಯಲಾಗುತ್ತದೆ. ಗೋಲ್ಡ್ ಲೋನ್ ಪಡೆಯುವುದು ಸುಲಭವಾದರೂ ಕೂಡಾ ಈ ಹಿಂದೆ ಹೆಚ್ಚಿನ ಜನರು ಚಿನ್ನ ಅಡವಿಡುವುದೆಂದರೆ ಅದೇನೋ ಕೆಟ್ಟ ಕಾಲ ಎಂಬಂತೆ ಪರಿಗಣಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಯಾವುದೇ ಸಣ್ಣ ಪುಟ್ಟ ವಿಚಾರಕ್ಕೆ ಹಣ ಬೇಕಾದರೂ ಕೂಡಾ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುತ್ತಾರೆ.
ಇದಕ್ಕೆ ಹಲವು ಕಾರಣಗಳು ಇರಬಹುದು. ಮೊದಲನೆಯದಾಗಿ ಜಾಗತಿಕವಾಗಿ ಕಾಡುತ್ತಿರುವ ಹಣದುಬ್ಬರ, ಆರ್ಥಿಕ ಹಿಂಜರಿತ. ಸಾಮಾನ್ಯವಾಗಿ ಚಿನ್ನ ಅಡವಿಟ್ಟು ಸಾಲ ಪಡೆಯುವುದು ಕೊನೆಯ ಆಯ್ಕೆಯಾಗಿರುವಾಗ ಜನರು ಹೆಚ್ಚಾಗಿ ಗೋಲ್ಡ್ ಲೋನ್ ಪಡೆಯುತ್ತಿದ್ದಾರೆ ಎಂದರೆ ಜನರಲ್ಲಿ ಸಾಲ ಪಡೆದುಕೊಳ್ಳಲು ಯಾವುದೇ ಆಯ್ಕೆ ಉಳಿದುಕೊಂಡಿಲ್ಲ ಎಂದಿರಬಹುದು.
ಉಳಿದೆಲ್ಲ ಸಾಲಗಳಿಗಿಂತ ಗೋಲ್ಡ್ ಲೋನ್ ಪಡೆಯುವುದು ಸುಲಭ, ಸರಳ, ಸುರಕ್ಷಿತ, ಬಡ್ಡಿಯೂ ಕಡಿಮೆ ಎಂಬ ಅರಿವು ಜನರಿಗೆ ಬಂದಿರುವುದು ಕೂಡಾ ಗೋಲ್ಡ್ ಲೋನ್ ಪಡೆಯುವವರ ಪ್ರಮಾಣ ಅಧಿಕವಾಗಲು ಕಾರಣವಾಗಿರಬಹುದು. ಹಾಗೆಯೇ ಇತ್ತೀಚೆಗೆ ಗೋಲ್ಡ್ ಲೋನ್ ಪ್ರಚಾರ ಅಧಿಕವಾಗಿರುವುದು ಕೂಡಾ ಕಾರಣವಾಗಿರಬಹುದು. ಏನೇ ಆದರೂ ಕೂಡಾ ಜನರಿಗೆ ಸಾಲ ಪಡೆದರೆ ಮಾತ್ರ ಜೀವನ ಸಾಗಿಸಲು ಸಾಧ್ಯವೆಂಬ ಸ್ಥಿತಿಗೆ ದೇಶ ತಲುಪಿದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.