ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಮುಗಿದಿದ್ದು, ಸುಮಾರು 64 ಲಕ್ಷ ಅಧಿಕ ಮತದಾರರ ಹೆಸರನ್ನು ಪಟ್ಟಿಯಿಂದ ‘ಡಿಲೀಟ್’ ಮಾಡಲಾಗಿದೆ. 7.89 ಕೋಟಿ ಮತದಾರರನ್ನು ಹೊಂದಿದ್ದ ಬಿಹಾರವು ಇದೀಗ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಗೆ ಸುಮಾರು 7.23 ಕೋಟಿ ಮತದಾರರನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ.
ಜೂನ್ 24ರಿಂದ ಜುಲೈ 25ರವರೆಗೆ ಒಂದು ತಿಂಗಳ ಅವಧಿಯಲ್ಲಿ ನಡೆಸಿದ ಎಸ್‌ಐಆರ್ ಮೂಲಕ ಸುಮಾರು 64 ಲಕ್ಷಕ್ಕೂ ಅಧಿಕ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪೈಕಿ ಮೃತರು, ಶಾಶ್ವತವಾಗಿ ವಲಸೆ ಹೋದವರು, ಬಹು ಸ್ಥಳಗಳಲ್ಲಿ ನೋಂದಾಯಿಸಲ್ಪಟ್ಟವರು ಮತ್ತು ಪತ್ತೆಹಚ್ಚಲಾಗದವರು ಸೇರಿದ್ದಾರೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಎಲ್ಲ ರಾಜ್ಯಗಳಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ: ಇದು ಪರೋಕ್ಷ NRC, CAA ಜಾರಿ ಅಲ್ಲವೇ?
“ಸುಮಾರು 22 ಲಕ್ಷ ಮತದಾರರನ್ನು ಮೃತರೆಂದು ಘೋಷಿಸಲಾಗಿದೆ. 35 ಲಕ್ಷ ಮತದಾರರು ಶಾಶ್ವತವಾಗಿ ವಲಸೆ ಹೋಗಿದ್ದರು ಅಥವಾ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಸುಮಾರು 7 ಲಕ್ಷ ಜನರು ಬಹು ಸ್ಥಳಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ” ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈಗಾಗಲೇ ಈ ಪ್ರಕ್ರಿಯೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದೆ. ಎಲ್ಲ ದಾಖಳೆಗಳನ್ನು ಹೊಂದಿರದ ಬಡವರು, ಆದಿವಾಸಿಗಳು ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ ಎಂಬ ಆತಂಕವನ್ನು ವಿಪಕ್ಷಗಳು ವ್ಯಕ್ತಪಡಿಸಿದೆ. ಸಿಎಎ, ಎನ್‌ಆರ್‌ಸಿ ಬದಲು ಪೌರತ್ವ ಪರಿಶೀಲಿಸುವ ಕಾರ್ಯವನ್ನು ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಮೂಲಕ ಮಾಡಿಸುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಇವೆಲ್ಲವುದರ ನಡುವೆ ಆಗಸ್ಟ್ ಒಂದರಿಂದ ಚುನಾವಣಾ ಆಯೋಗ ದೇಶದಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಲು ಮುಂದಾಗಿದೆ ಎಂದು ವರದಿಯಾಗಿದೆ. ಸದ್ಯ ಬಿಹಾರದಲ್ಲಿ ಡಿಜಿಟಲೀಕರಣಗೊಳ್ಳಲಿರುವ ಈ ಪರಿಷ್ಕೃತ ಪಟ್ಟಿಯಲ್ಲಿ ಅಸ್ತಿತ್ವದಲ್ಲಿರುವ 7,89,69,844 ಮತದಾರರ ಬದಲಿಗೆ 7.23 ಕೋಟಿ ಮತದಾರರ ಹೆಸರುಗಳಿವೆ. ಈ ಎಲ್ಲಾ ಅರ್ಹ ಮತದಾರರು ಆಗಸ್ಟ್ 1ರಿಂದ ಸೆಪ್ಟೆಂಬರ್ 1ರವರೆಗೆ ಒಂದು ತಿಂಗಳ ಅವಧಿಯಲ್ಲಿ ಯಾವುದೇ ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂದು ಚುನಾವಣಾ ಆಯೋಗ ಹೇಳಿದೆ.
ಪರಿಷ್ಕರಣೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈಗಾಗಲೇ ಆಧಾರ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿಯನ್ನೂ ಪರಿಷ್ಕರಣೆಯ ದಾಖಲೆಯಾಗಿ ಪರಿಗಣಿಸುವಂತೆ ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್ ಸೋಮವಾರ ಅರ್ಜಿ ವಿಚಾರಣೆ ನಡೆಸಲಿದೆ.
