- ಬಹುಸಂಖ್ಯಾತ ಹಿಂದೂಗಳನ್ನು ಕಡೆಗಣಿಸಿದೆ ಎಂದು ಸುಳ್ಳು ಮಾಹಿತಿ ಹರಡಿದ ಸುಧೀರ್ ಚೌಧರಿ
- ಸರ್ಕಾರ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಮುಸ್ಲಿಮರನ್ನು ಓಲೈಸಲು ‘ಧರ್ಮಾಧಾರಿತ ಯೋಜನೆ’ಗಳನ್ನು ಜಾರಿಗೆ ತರುತ್ತಿದೆ ಎಂದು ಇತ್ತೀಚೆಗೆ ಟ್ವೀಟ್ ಮಾಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಟ್ವೀಟ್ ಅನ್ನು ಹಿಡಿದುಕೊಂಡು, ಆಜ್ ತಕ್ ಸುದ್ದಿ ವಾಹಿನಿಯೂ ಕೂಡ ಸುಳ್ಳು ಮಾಹಿತಿ ಹರಡಿದೆ.
ಆಜ್‌ತಕ್ ಸುದ್ದಿವಾಹಿನಿಯ ನಿರೂಪಕ ಸುಧೀರ್ ಚೌಧರಿ, ಬ್ಲ್ಯಾಕ್ & ವೈಟ್ ಎಂಬ ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ‘ಸ್ವಾವಲಂಬಿ ಸಾರಥಿ ಯೋಜನೆ’ ಎಂಬ ಯೋಜನೆ ಜಾರಿಗೆ ತಂದಿದೆ. ಇದರ ಮೂಲಕ ವಾಹನ ಖರೀದಿಸಲು ಅಥವಾ ತಮ್ಮದೇ ಆದ ಹೊಸ ಉದ್ಯಮವನ್ನು ಪ್ರಾರಂಭಿಸಲು 50 ರಿಂದ 75% ವರೆಗಿನ ಸಬ್ಸಿಡಿಗಳನ್ನು ನೀಡುವುದಕ್ಕೆ ಪ್ರಾರಂಭಿಸಿದೆ. ಆ ಮೂಲಕ ಬಹುಸಂಖ್ಯಾತ ಬಡ ಹಿಂದೂ ಧರ್ಮದವರನ್ನು ಕಡೆಗಣಿಸಿದೆ’ ಎಂದು ನಿರೂಪಣೆಯಲ್ಲಿ ಸುಳ್ಳು ಮಾಹಿತಿ ಹರಡಿದ್ದಾರೆ.
ಸುಳ್ಳು ಮಾಹಿತಿ ಹರಡಿದ್ದಲ್ಲದೇ, ಕೋಮು ದ್ವೇಷವನ್ನು ಹರಡುವ ಉದ್ದೇಶದಿಂದ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿರುವ ಆಜ್‌ತಕ್ ಸುದ್ದಿ ವಾಹಿನಿ ಮತ್ತು ನಿರೂಪಕ ಸುಧೀರ್ ಚೌಧರಿಯ ವಿರುದ್ಧ ದೂರು ದಾಖಲಿಸಲು ನೆಟ್ಟಿಗರು ಆಗ್ರಹಿಸಿದ್ದಾರೆ.
Requesting @DKShivakumar & @siddaramaiah to take strict action against @aajtak anchor @sudhirchaudhary for sharing Fake news with an intention to spread communal hatred.
— Mahua Moitra Fans (@MahuaMoitraFans) September 11, 2023
Karnataka Swawlambi Sarathi Yojana is a government backed scheme launched for the unemployed youth,… pic.twitter.com/q1P85wo9Fm
‘ಸ್ವಾವಲಂಬಿ ಸಾರಥಿ ಯೋಜನೆ’ಯ ಮೂಲಕ ನಿರುದ್ಯೋಗಿ ಅಲ್ಪಸಂಖ್ಯಾತರು ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ನಿರುದ್ಯೋಗಿ ಯುವಕರಿಗೆ ಸರ್ಕಾರ ನೀಡುತ್ತಿರುವ ಆರ್ಥಿಕ ನೆರವಿನ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ನಿರುದ್ಯೋಗಿ ಯುವಕರಿಗೆ ವಾಹನ ಖರೀದಿಸಲು ಅಥವಾ ತಮ್ಮದೇ ಆದ ಹೊಸ ಉದ್ಯಮವನ್ನು ಪ್ರಾರಂಭಿಸಲು 50 ರಿಂದ 75% ವರೆಗಿನ ಸಬ್ಸಿಡಿಗಳನ್ನು ಒದಗಿಸಲಾಗುತ್ತದೆ. ಆದರೆ ಈ ಮಾಹಿತಿಯನ್ನು ಕೇವಲ ಅಲ್ಪಸಂಖ್ಯಾತರಿಗೆ ಅದರಲ್ಲೂ ಮುಸ್ಲಿಮರಿಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಡಲಾಗಿದೆ.
ಸೂಕ್ತ ಕಾನೂನು ಕ್ರಮ: ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ
‘ಸ್ವಾವಲಂಬಿ ಸಾರಥಿ ಯೋಜನೆ’ಯನ್ನು ಮೊದಲು ಪ್ರಾರಂಭಿಸಿದ್ದೇ ಬಿಜೆಪಿ ಸರ್ಕಾರ ಎಂದು ಟ್ವೀಟ್ ಮೂಲಕ ತಿಳಿಸಿರುವ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಯೋಜನೆಯ ಬಗ್ಗೆ ಸುಳ್ಳು ಮಾಹಿತಿ ಹರಡಿದವರ ಮೇಲೆ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
The anchor of @aajtak is deliberately spreading misinformation on Government schemes which was first started by BJP MPs & is being amplified by sections of media.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 12, 2023
This is deliberate & malicious, Govt will be taking necessary legal action pic.twitter.com/nD5FuAf3nu
“ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮೊದಲು ಪ್ರಚಾರ ಪಡಿಸಿದ ಸುಳ್ಳು ಮಾಹಿತಿಯನ್ನು ಮಾಧ್ಯಮಗಳ ಮೂಲಕ ಹರಡಲಾಗುತ್ತಿದೆ. ಆ ಮೂಲಕ ಸರ್ಕಾರದ ಯೋಜನೆಗಳ ಬಗ್ಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ಇದು ದುರುದ್ದೇಶಪೂರಿತವಾಗಿ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದೆ” ಎಂದು ಐಟಿಬಿಟಿ ಮತ್ತು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮೊದಲು ತಪ್ಪು ಮಾಹಿತಿ ಹರಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಇತ್ತೀಚೆಗೆ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್, ಪಾರ್ಸಿ ಸಮುದಾಯದ ಅಭ್ಯರ್ಥಿಗಳಿಂದ ದುಡಿಯುವ ಉದ್ದೇಶಕ್ಕಾಗಿ ವಾಹನಗಳನ್ನು ಖರೀದಿಸಲು ₹3 ಲಕ್ಷಗಳನ್ನು ಸಬ್ಸಿಡಿ ನೀಡುವ ಯೋಜನೆಯನ್ನು ಪ್ರಕಟಿಸಿತ್ತು. ಈ ಯೋಜನೆಯು ಮುಸ್ಲಿಮರಿಗಾಗಿ ಇರುವ ಯೋಜನೆ ಎಂದು ಉಲ್ಲೇಖಿಸುತ್ತಾ ‘ಧರ್ಮಾಧಾರಿತ ಯೋಜನೆ’ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡುವ ಮೂಲಕ ತಪ್ಪು ಮಾಹಿತಿ ಹರಡಿದ್ದರು.
Congress, to fund its freebies,
— Tejasvi Surya (@Tejasvi_Surya) September 8, 2023
1. Is increasing guidance value by 30%,
2. Has doubled electricity charges,
3. Hiked excise duty, milk prices, road tax & also plans to extract 5% cess.
Now, Karnataka's middle class will fund a 'religion targeted scheme', specifically designed… pic.twitter.com/LjOM9jaUrm
ಆದರೆ, ಈ ಯೋಜನೆಯು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ, ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ನಿರುದ್ಯೋಗಿ ಯುವಕರಿಗೂ ಈ ಸಾಲಸೌಲಭ್ಯ ಲಭ್ಯವಿದೆ. ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯವನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನೀಡಿದರೆ, ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಸಮಾಜ ಕಲ್ಯಾಣ ಇಲಾಖೆಯು ನೀಡುತ್ತಿದೆ.